ಕರ್ನಾಟಕದಲ್ಲಿ ಕನ್ನಡಿಗರಿಗೆ ಖಾಸಗಿ ಸಂಸ್ಥೆಗಳಲ್ಲಿ ಮೀಸಲಾತಿ ವಿಷಯ ಚರ್ಚೆಯಾಗುತ್ತಿದ್ದಂತೆ ಆಂಧ್ರಪ್ರದೇಶದ ಮಾಹಿತಿ ತಂತ್ರಜ್ಞಾನ ಸಚಿವ ನಾರಾ ಲೋಕೇಶ್ ಬೆಂಗಳೂರಿನ ಕಂಪನಿಗಳನ್ನು ಆಂಧ್ರಪ್ರದೇಶದಲ್ಲಿ ವಿಸ್ತರಿಸಿಕೊಳ್ಳಿ ಎಂದು ಹೇಳುವ ಮೂಲಕ ಕಿಡಿ ಹಚ್ಚಿದ್ದರು. ಇದಕ್ಕೆ ರಾಜ್ಯದ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ತಿರುಗೇಟು ನೀಡಿದ್ದಾರೆ.
ಕರ್ನಾಟಕ ಸರಕಾರ ಕನ್ನಡಿಗರ ಮೀಸಲಾತಿ ವಿಷಯವಾಗಿ ತೆಗೆದುಕೊಂಡ ನಿಲುವಿನ ಕುರಿತು ಆಕ್ರೋಶ ವ್ಯಕ್ತಪಡಿಸಿದ ನಾಸ್ಕಾಂ ಸಂಘಟನೆಯ ಟ್ವೀಟ್ ಅನ್ನು ಶೇರ್ ಮಾಡಿರುವ ಆಂಧ್ರಪ್ರದೇಶ ಮಾನವ ಸಂಪನ್ಮೂಲ ಇಲಾಖೆ ಸಚಿವ ಲೋಕೇಶ್ ನಾರಾ, ʼನಮ್ಮಲ್ಲಿಗೆ ಬನ್ನಿʼ ಎಂದು ಖಾಸಗಿ ಕಂಪನಿಗಳಿಗೆ ಕರೆ ನೀಡಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ನೀತಿ ಯೋಜನೆಗಳ ಕರಡು ರಚನೆ ಮಾಡುವಾಗ ನಾವು ಯಾವಾಗಲೂ ಉದ್ಯಮದ ಮುಖಂಡರು, ಸಲಹಾ ಸಂಸ್ಥೆಗಳು ಮತ್ತು ಒಕ್ಕೂಟಗಳೊಂದಿಗೆ ಸ್ಥಿರವಾದ ಸಮಾಲೋಚನಾ ವಿಧಾನವನ್ನು ಅನುಸರಿಸಿದ್ದಕ್ಕೆ ನಮ್ಮ ಸಂಬಂಧ ಉತ್ತಮವಾಗಿದೆ, ಸ್ಥಳೀಯ ಪ್ರತಿಭೆಗಳನ್ನು ಬಳಸಿಕೊಂಡು ಜಾಗತಿಕ ಉದ್ಯೋಗಿಗಳನ್ನು ಅಭಿವೃದ್ಧಿಪಡಿಸುವುದು ನಮ್ಮ ಗುರಿಯಾಗಿದೆ, ಹಾಗೆಯೇ ಜಾಗತಿಕ ಹೂಡಿಕೆಗಳನ್ನು ಉತ್ತೇಜಿಸುವುದು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಇದರ ಉದ್ದೇಶವಾಗಿದೆ.
ಆಂಧ್ರಪ್ರದೇಶದಲ್ಲಿ ಹೂಡಿಕೆ ಮಾಡಿದ ಪ್ರತಿಯೊಂದು ಕಂಪನಿಯು ಆಂಧ್ರಪ್ರದೇಶದ ಅರ್ಹ, ತರಬೇತಿ ಪಡೆದ ಮತ್ತು ನುರಿತ ವ್ಯಕ್ತಿಗಳನ್ನು ನೇಮಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನೀವು ಬಯಸುವುದಿಲ್ಲವೇ?. ಕಾನೂನಾತ್ಮಕ ಪರಿಶೀಲನೆಯನ್ನು ತಡೆದುಕೊಳ್ಳದೆ ಯಾವುದೇ ನಿರ್ಧಾರವನ್ನೂ ಕರ್ನಾಟಕ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ನಾಸ್ಕಾಂ ಸಂಘಟನೆಯ ಟ್ವೀಟ್ ಅನ್ನು ಶೇರ್ ಮಾಡಿರುವ ಆಂಧ್ರಪ್ರದೇಶ ಮಾನವ ಸಂಪನ್ಮೂಲ ಇಲಾಖೆ ಸಚಿವ ಲೋಕೇಶ್ ನಾರಾ, “ನಿಮ್ಮ ನಿರಾಶೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ವೈಜಾಗ್ನಲ್ಲಿರುವ ನಮ್ಮ IT, IT ಸೇವೆಗಳು, AI ಮತ್ತು ಡೇಟಾ ಸೆಂಟರ್ ಕ್ಲಸ್ಟರ್ಗೆ ನಿಮ್ಮ ವ್ಯವಹಾರಗಳನ್ನು ವಿಸ್ತರಿಸಲು ಅಥವಾ ಸ್ಥಳಾಂತರಿಸಲು ನಾವು ನಿಮ್ಮನ್ನು ಸ್ವಾಗತಿಸುತ್ತೇವೆ. ನಾವು ನಿಮಗೆ ಅತ್ಯುತ್ತಮ ದರ್ಜೆಯ ಸೌಲಭ್ಯಗಳು, ತಡೆರಹಿತ ವಿದ್ಯುತ್, ಮೂಲಸೌಕರ್ಯ ಮತ್ತು ನಿಮ್ಮ ಐಟಿ ಉದ್ಯಮಕ್ಕೆ ಸರ್ಕಾರದಿಂದ ಯಾವುದೇ ನಿರ್ಬಂಧಗಳಿಲ್ಲದೆ ಅತ್ಯಂತ ಸೂಕ್ತವಾದ ಕೌಶಲ್ಯಭರಿತ ಪ್ರತಿಭೆಗಳನ್ನು ನೀಡುತ್ತೇವೆ. ಆಂಧ್ರಪ್ರದೇಶ ನಿಮ್ಮನ್ನು ಸ್ವಾಗತಿಸಲು ಸಿದ್ಧವಾಗಿದೆ. ದಯವಿಟ್ಟು ಸಂಪರ್ಕದಲ್ಲಿರಿ!” ಎಂದು ನಾರಾ ಟ್ವೀಟ್ ಮಾಡಿದ್ದಾರೆ.