ಟೆಹ್ರಾನ್ : ಇಬ್ಬರು ವಿದೇಶಿ ತೈಲ ಟ್ಯಾಂಕರ್‌ಗಳ ಮೇಲೆ ನಡೆದ ಭೀಕರ ದಾಳಿಯ ನಂತರ ಇರಾಕ್ ತನ್ನ ತೈಲ ಬಂದರು ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ. ಇದೇ ವೇಳೆ ಬಹ್ರೇನ್, ಕುವೈತ್, ಯುಎಇ ಮತ್ತು ಸೌದಿ ಅರೇಬಿಯಾ ರಾಷ್ಟ್ರಗಳು ಇರಾನ್‌ನಿಂದ ಹಾರಿಸಲಾದ ಹೆಚ್ಚಿನ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ತಡೆಹಿಡಿದಿವೆ.
ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಯುದ್ಧವನ್ನು ಕೊನೆಗೊಳಿಸಲು ಮೂರು ಪ್ರಮುಖ ಕಂಡಿಷನ್‌ಗಳನ್ನು ವಿಧಿಸಿದ್ದಾರೆ. ಅವುಗಳಲ್ಲಿ ಮೊದಲನೇ ಕಂಡಿಷನ್ ಎಂದರೇ ತಹ್ರಾನ್‌ನ ಕಾನೂನುಬದ್ಧ ಹಕ್ಕುಗಳ ಗುರುತಿಸುವಿಕೆ. ಅಂದರೇ ಅಮೆರಿಕ ಮತ್ತು ಇತರ ರಾಷ್ಟ್ರಗಳು ಇರಾನ್ ಮೇಲೆ ಹೇರಿರುವ ಕಠಿಣ ಆರ್ಥಿಕ ನಿರ್ಬಂಧಗಳನ್ನು ತೆಗೆದುಹಾಕಬೇಕು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಮಾರಾಟ ಮಾಡಲು ತನಗೆ ಮುಕ್ತ ಅವಕಾಶ ನೀಡಬೇಕು ಎಂಬುದು ಅವರ ಬೇಡಿಕೆ.
ಎರಡನೇ ಕಂಡಿಷನ್ – ಯುದ್ಧದ ನಷ್ಟಕ್ಕೆ ಪರಿಹಾರ ಪಾವತಿ. ಇತ್ತೀಚಿನ ಯುದ್ಧದ ಸಂದರ್ಭದಲ್ಲಿ ತನ್ನ ಮಿಲಿಟರಿ ನೆಲೆಗಳು ಅಥವಾ ಮೂಲಸೌಕರ್ಯಗಳ ಮೇಲೆ ನಡೆದ ದಾಳಿಗಳಿಂದ ಉಂಟಾದ ಭೌತಿಕ ಹಾನಿಗೆ ಪರಿಹಾರವನ್ನು ನೀಡಬೇಕು ಎಂದು ಇರಾನ್ ಕೇಳಿದೆ.
ಇನ್ನು ಇರಾನ್ ಅಧ್ಯಕ್ಷನ ಮೂರನೆ ಕಂಡಿಷನ್ ಅಂದರೆ, ಭವಿಷ್ಯದಲ್ಲಿ ಮತ್ತೆ ಆಕ್ರಮಣ ನಡೆಯುವುದಿಲ್ಲ ಎಂಬುದಕ್ಕೆ ಅಮೇರಿಕ ದೃಢವಾದ ಅಂತರರಾಷ್ಟ್ರೀಯ ಭರವಸೆಯನ್ನು ಕೊಡಬೇಕು ಎಂದಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾರ್ಮುಜ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್‌ಗಳನ್ನು ರಕ್ಷಿಸುವ ಭರವಸೆ ನೀಡಿದ್ದಾರೆ. ಆದರೆ ಇರಾನ್ ಮಾತ್ರ, ಜಗತ್ತು ಪ್ರತಿ ಬ್ಯಾರೆಲ್ ತೈಲಕ್ಕೆ $200 ನೀಡಲು ಸಿದ್ಧವಾಗಬೇಕೆಂದು ಎಚ್ಚರಿಸಿದೆ.
ಇರಾನ್ ಮತ್ತು ಹೆಜ್ಬುಲ್ಲಾ ಸಂಘಟನೆಗಳು ಇಸ್ರೇಲ್ ಮೇಲೆ ಸಂಘಟಿತ ದಾಳಿಗಳನ್ನು ನಡೆಸುತ್ತಿವೆ. ಪ್ರತಿಯಾಗಿ ಇಸ್ರೇಲ್ ಸೇನೆಯು ಲೆಬನಾನ್ ರಾಜಧಾನಿ ಬೈರುತ್ ಮೇಲೆ ದೊಡ್ಡ ಪ್ರಮಾಣದ ದಾಳಿಗಳನ್ನು ಮುಂದುವರಿಸಿದೆ.

