ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ – ಹೆಬ್ಬಾಳ ನಡುವಿನ ನೀಲಿ ಮಾರ್ಗದ ಮೆಟ್ರೋ ಸಂಚಾರ ಶೀಘ್ರ ಆರಂಭವಾಗುವ ಲಕ್ಷಣಗಳಿವೆ. ಇದೇ ವೇಗದಲ್ಲಿ ಕಾಮಗಾರಿ ಮುಂದುವರೆದರೆ 2026 ಜೂನ್-ಸೆಪ್ಟಂಬರ್ ಒಳಗೆ ಮೆಟ್ರೋ ಸಂಚಾರ ಆರಂಭವಾಗಲಿದೆ. ಹೆಬ್ಬಾಳ- ಕೆ.ಆರ್. ಪುರ ನಡುವಿನ ಮಾರ್ಗ ಡಿಸೆಂಬರ್ ವೇಳೆಗೆ ಆರಂಭಗೊಳ್ಳಲಿದೆ ಎಂದು BMRCL ಮೂಲಗಳು ತಿಳಿಸಿವೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕೆಆರ್ ಪುರ ನಡುವಿನ 38 ಕಿಮೀ ಮೆಟ್ರೋ ಮಾರ್ಗ ಪೂರ್ಣಗೊಳ್ಳುವವರೆಗೂ ಕಾಯದೆ ಹೆಬ್ಬಾಳ ಕೆಐಎ ವಿಮಾನ ನಿಲ್ದಾಣ ನಡುವಿನ ಸಂಚಾರ ಆರಂಭಿಸಲು ಉದ್ದೇಶಿಸಲಾಗಿದೆ.
ವಿಮಾನ ನಿಲ್ದಾಣ ತಲುಪುವ ಲಕ್ಷಾಂತರ ಪ್ರಯಾಣಿಕರು ಹೆಬ್ಬಾಳದಿಂದ ಸುಲಭವಾಗಿ ಪ್ರಯಣ ಮಾಡಬಹುದು. ಟ್ರಾಫಿಕ್, ಟೋಲ್ ಗಾಗಿ ಹೆಚ್ಚಿನ ಹಣ ಪಾವತಿ ಮಾಡುವ ಯಾವ ಕಿರಿಕಿರಿಯೂ ಇರುವುದಿಲ್ಲ. ಇನ್ನು ಹೆಬ್ಬಾಳ- ಕೆ ಆರ್ ಪುರ ನಡುವಿನ ಮೆಟ್ರೋ ಕಾಮಗಾರಿಯೂ ನಿಧಾನವಾಗಿ ಸಾಗುತ್ತಿದೆ. ಮೆಟ್ರೋ ಕಾಮಗಾರಿ ಹತ್ತಿರ ಅವಘಡ ಸಂಭವಿಸಿ ಇಬ್ಬರು ಜೀವ ತೆತ್ತ ನಂತರ ಕಳೆದ ಆರು ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. ನೀಲಿ ಮಾರ್ಗದಲ್ಲಿ ಮಾತ್ರ ಸರಾಸರಿ ವಾಣಿಜ್ಯ ವೇಗ ಗಂಟೆಗೆ 50 ಕಿ.ಮೀ. ಇರುವಂತೆ ಯೋಜನೆ ರೂಪಿಸಲಾಗಿದೆ. ಅತಿ ಹೆಚ್ಚು ವಾಹನದಟ್ಟಣೆಯ ಪ್ರದೇಶಗಳಲ್ಲಿ ಒಂದಾಗಿರುವ ಹೊರ ವರ್ತುಲ ರಸ್ತೆಯ (ORR) ದಟ್ಟಣೆ ಕಡಿಮೆ ಮಾಡುವಲ್ಲಿಯೂ ನೀಲಿ ಮಾರ್ಗ ಪ್ರಮುಖ ಪಾತ್ರ ವಹಿಸಲಿದೆ.
ನಮ್ಮ ಮೆಟ್ರೊ ನೀಲಿ ಮಾರ್ಗದಲ್ಲಿ ಓಡಾಡುವ ರೈಲು, ಉಳಿದ ಮಾರ್ಗಗಳಿಗಿಂತ ವೇಗವಾಗಿ ಚಲಿಸಲಿದೆ. ಇದರಿಂದ ಪ್ರಯಾಣಿಕರ ಸಮಯ ಉಳಿತಾಯವಾಗಲಿದೆ. ಪ್ರಸ್ತುತ ನಮ್ಮ ಮೆಟ್ರೊದ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ರೈಲುಗಳು ಗಂಟೆಗೆ 34 ಕಿ.ಮೀ. ವೇಗದಲ್ಲಿ ಚಲಿಸುತ್ತಿವೆ. ಕೆಲವೇ ತಿಂಗಳಲ್ಲಿ ಆರಂಭಗೊಳ್ಳುವ ಹಳದಿ ಮಾರ್ಗ ಮತ್ತು ಮುಂದಿನ ವರ್ಷ ಆರಂಭಗೊಳ್ಳಲಿರುವ ಗುಲಾಬಿ ಮಾರ್ಗದಲ್ಲಿ ಸಂಚರಿಸಲಿರುವ ಮೆಟ್ರೊಗಳ ಸರಾಸರಿ ವಾಣಿಜ್ಯ ವೇಗ ಗಂಟೆಗೆ 34 ಕಿ.ಮೀಗೆ ನಿಗದಿಯಾಗಿದೆ.
ಕೇಂದ್ರ ರೇಷ್ಮೆ ಮಂಡಳಿಯಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ನೀಲಿ ಮಾರ್ಗವನ್ನು ಎರಡು ಹಂತಗಳಲ್ಲಿ ನಿರ್ಮಿಸಲಾಗುತ್ತಿದೆ. ರೇಷ್ಮೆ ಮಂಡಳಿಯಿಂದ ಕೆ.ಆರ್.ಪುರವರೆಗಿನ ಮೊದಲ ಹಂತದ ಕಾಮಗಾರಿ 2021ರಲ್ಲಿ ಆರಂಭಗೊಂಡಿತ್ತು. ಕೆ.ಆರ್.ಪುರದಿಂದ ಕೆಐಎ ವರೆಗಿನ ಎರಡನೇ ಹಂತ 2022ರಲ್ಲಿ ಆರಂಭಗೊಂಡಿದೆ. ಎರಡು ಹಂತಗಳು ಸೇರಿ 58.19 ಕಿ.ಮೀ. ಉದ್ದದ ಮಾರ್ಗ ಇದಾಗಿದ್ದು, 32 ನಿಲ್ದಾಣಗಳಿರುತ್ತವೆ. ಕೇಂದ್ರ ರೇಷ್ಮೆ ಮಂಡಳಿಯಿಂದ ಹೆಬ್ಬಾಳವರೆಗಿನ 29 ಕಿ.ಮೀ. ವ್ಯಾಪ್ತಿಯಲ್ಲಿ 22 ಮೆಟ್ರೊ ನಿಲ್ದಾಣಗಳಿರುತ್ತವೆ. ಹೆಬ್ಬಾಳದಿಂದ ವಿಮಾನ ನಿಲ್ದಾಣದವರೆಗಿನ 29 ಕಿ.ಮೀ. ವ್ಯಾಪ್ತಿಯಲ್ಲಿ 10 ಮೆಟ್ರೊ ನಿಲ್ದಾಣಗಳು ಇರಲಿವೆ.
ನೀಲಿ ಮಾರ್ಗವು ಕೇಂದ್ರ ರೇಷ್ಮೆ ಮಂಡಳಿಯಲ್ಲಿ ಹಳದಿ ಮಾರ್ಗವನ್ನು, ಕೆ.ಆರ್.ಪುರ ನೇರಳೆ ಮಾರ್ಗವನ್ನು, ನಾಗವಾರದಲ್ಲಿ ಗುಲಾಬಿ ಮಾರ್ಗವನ್ನು ಸಂಧಿಸುವುದರಿಂದ ನಗರದ ಬೇರೆ ಬೇರೆ ಕಡೆಗಳಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರಿಗೂ ಭಾರಿ ಪ್ರಯೋಜನವಾಗಲಿದೆ. ಇನ್ನೂ ಚರ್ಚಾ ಹಂತದಲ್ಲಿರುವ ಕೆಂಪು ಮತ್ತು ಕಿತ್ತಳೆ ಮಾರ್ಗಗಳೂ ಸಹ ನೀಲಿ ಮಾರ್ಗವನ್ನು ಸಂಧಿಸಲಿವೆ.