ಬೆಂಗಳೂರು: ಬೆಂಗಳೂರು ಮೆಟ್ರೋ ಪ್ರಯಾಣ ದರವನ್ನು ಹೆಚ್ಚಿಸಲಾಗಿದ್ದು ಪರಿಷ್ಕೃತ ದರ ನಾಳೆಯಿಂದಲೇ (09-02-2025) ಜಾರಿಗೆ ಬರಲಿದೆ. ರೈಲು ನಿಗಮ ನಿಯಮಿತ ಮೆಟ್ರೋ ರೈಲ್ವೇ (ಕಾರ್ಯಾಚರಣೆ ಮತ್ತು ನಿರ್ವಹಣೆ) 2002ರ ಸೆಕ್ಷನ್ 34 ಕಾಯಿದೆ ಅಡಿಯಲ್ಲಿ ಹೈಕೋರ್ಟ್ ಮಾಜಿ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ದರ ಪರಿಷ್ಕರಣೆಗಾಗಿ ಕೇಂದ್ರ ಸರ್ಕಾರ ಸಮಿತಿಯನ್ನು ರಚಿಸಿತ್ತು. ದರ ಪರಿಷ್ಕರಣೆ ಸಮಿತಿಯು ಪರಿಷ್ಕೃತ ದರದ ಶಿಫಾರಸು ವರದಿಯನ್ನು ದಿನಾಂಕ 16.12.2024 ರಂದು ಸಲ್ಲಿಸಿತ್ತು. ಮೆಟ್ರೋ ರೈಲ್ವೇ (ಕಾರ್ಯಾಚರಣೆ ಮತ್ತು ನಿರ್ವಹಣೆ) 2002ರ ಸೆಕ್ಷನ್ 37ರ ಕಾಯಿದೆಯ ಪ್ರಕಾರ ದರ ಪರಿಷ್ಕರಣೆ ಸಮಿತಿಯು ಮಾಡಿದ ಶಿಫಾರಸುಗಳು ಮೆಟ್ರೋ ರೈಲ್ವೆ ಆಡಳಿತದ ಮೇಲೆ ಬದ್ಧವಾಗಿರುತ್ತವೆ. ಈ ದರ ಪರಿಷ್ಕರಣೆಗೆ ಬಿ.ಎಂ.ಆರ್.ಸಿ.ಎಲ್ ಆಡಳಿತ ಮಂಡಳಿ ಅನುಮೋದನೆ ನೀಡಿದ್ದು ನಾಳೆಯಿಂದಲೇ ಜಾರಿಗೆ ಬರಲಿದೆ.
ಪರಿಷ್ಕೃತ ದರದ ವಿವರ ಹೀಗಿದೆ:
0-2 ಕಿ.ಮೀ. ವರೆಗೆ- 10 ರೂಪಾಯಿ; 2-4 ಕಿ.ಮೀ.ವರೆಗೆ -20 ರೂಪಾಯಿ; 4-6 ಕಿ.ಮೀ.ವರೆಗೆ 30 ರೂಪಾಯಿ; 6-8 ಕಿ.ಮೀ.ವರೆಗೆ 40 ರೂಪಾಯಿ; 8-10 ಕಿ.ಮೀ.ವರೆಗೆ 50 ರೂಪಾಯಿ; 10-15 ಕಿ.ಮೀ.ವರೆಗೆ 60 ರೂಪಾಯಿ; 15-20 ಕಿ.ಮೀ.ವರೆಗೆ- 70 ರೂಪಾಯಿ; 20-25 ಕಿ.ಮೀ.ವರೆಗೆ 80 ರೂಪಾಯಿ; 25-30 ಕಿ.ಮೀ.ವರೆಗೆ 90 ರೂಪಾಯಿ ನಿಗದಿಪಡಿಸಲಾಗಿದೆ.
ಸಮಿತಿ ಮಾಡಿರುವ ಇತರೆ ಶಿಫಾರಸುಗಳು:
* ಸ್ಮಾರ್ಟ್ ಕಾರ್ಡ್ಗಳ ಮೇಲೆ ಮಾತ್ರ ಅಸ್ತಿತ್ವದಲ್ಲಿರುವ ಶೇ 5 ರಿಯಾಯಿತಿಯನ್ನು ಮುಂದುವರಿಸಿದೆ.
* ಆಫ್-ಪೀಕ್ ಸಮಯದಲ್ಲಿ ಪ್ರಯಾಣಕ್ಕಾಗಿ ಮೆಟ್ರೋ ವ್ಯವಸ್ಥೆಗೆ ಪ್ರವೇಶಿಸುವ ಸಮಯವನ್ನು ಆಧರಿಸಿ, ಸ್ಮಾರ್ಟ್ ಕಾರ್ಡ್ಗಳ ಮೇಲೆ ಹಚ್ಚುವರಿ ಶೇ 5 ರಿಯಾಯಿತಿ ಶೇ 5 ಪೀಕ್ ಅವರ್ +ಶೇ. 5ಆಫ್ ಪೀಕ್ ಅವರ್ ಒಟ್ಟು ಶೇ. 10 ರಿಯಾಯಿತಿ). ಆಫ್ ಪೀಕ್ ಸಮಯ: ವಾರದ ದಿನಗಳಲ್ಲಿ ಬೆಳಗ್ಗೆ ಕಾರ್ಯಾಚರಣೆ ಆರಂಭದಿಂದ 8 ಗಂಟೆಯವರೆಗೆ, ಮಧ್ಯಾಹ್ನ 12 ಗಂಟೆಯಿಂದ 4 ಗಂಟೆಯವರೆಗೆ ಮತ್ತು ರಾತ್ರಿ 9 ಗಂಟೆಯಿಂದ ಕಾರ್ಯಾಚರಣೆ ಮುಕ್ತಾಯದವರೆಗೆ.
* ಎಲ್ಲಾ ಭಾನುವಾರ ಮತ್ತು ರಾಷ್ಟ್ರೀಯ ರಜಾದಿನಗಳಲ್ಲಿ (ಜನವರಿ 26, ಆಗಸ್ಟ್ 15, ಅಕ್ಟೋಬರ್ 2) ದಿನವಿಡೀ ಏಕರೂಪವಾಗಿ ಸ್ಮಾರ್ಟ್ ಕಾರ್ಡ್ಗಳ ಮೇಲೆ ಶೇ 10 ರಿಯಾಯಿತಿ.
* ಪ್ರಯಾಣಕ್ಕೆ ಬಳಸುವ ಸ್ಮಾರ್ಟ್ ಕಾರ್ಡಿನಲ್ಲಿ ಕನಿಷ್ಠ ಮೊತ್ತ ರೂ 90 ಹೊಂದಿರಬೇಕು.
* ಪರಿಷ್ಕೃತ ಪ್ರವಾಸಿ ಕಾರ್ಡ್ (ದಿನದ ಪಾಸ್‌ಗಳು) ಮತ್ತು ಗ್ರೂಪ್ ಟಿಕೆಟ್ ದರಗಳು ಈ ಕಳಕಂಡಂತಿವೆ.
* ಪ್ರವಾಸಿ ಕಾರ್ಡ್ ಒಂದು ದಿನಕ್ಕೆ 300 ರೂ; 3 ದಿನಕ್ಕೆ 600 ರೂಪಾಯಿ; 5 ದಿನಕ್ಕೆ 800 ರೂಪಾಯಿ ನಿಗದಿಪಡಿಸಲಾಗಿದೆ.
* ಒಂದೇ ನಿಲ್ದಾಣವನ್ನು ಪ್ರವೇಶಿಸಿ ಮತ್ತು ಒಂದೇ ನಿಲ್ದಾಣದಿಂದ ನಿರ್ಗಮಿಸಲು ಅನ್ವಯವಾಗುವ ದರದಲ್ಲಿ ರಿಯಾಯಿತಿ ಹೀಗಿದೆ. 1 ದಿನಕ್ಕೆ 15 ರೂಪಾಯಿ; 3 ದಿನಕ್ಕೆ 20 ರೂಪಾಯಿ ಮತ್ತು 5 ದಿನಕ್ಕೆ 25 ರೂಪಾಯಿ ರಿಯಾಯಿತಿ ಇರುತ್ತದೆ.
* ವಿವಿಧ ನಿಲ್ದಾಣಗಳಿಂದ ಪ್ರವೇಶಿಸಿ ಮತ್ತು ಒಂದೇ ನಿಲ್ದಾಣದಲ್ಲಿ ನಿರ್ಗಮಿಸಲು ಅಥವಾ ಅದೇ ನಿಲ್ದಾಣಗಳಿಂದ ಪ್ರವೇಶಿಸಿ ಮತ್ತು ನಿಲ್ದಾಣಗಳಲ್ಲಿ ನಿರ್ಗಮಿಸಲು ಫ್ಲಾಟ್ ದರ ಪ್ರತಿ ವ್ಯಕ್ತಿಗೆ ಹೀಗಿದೆ. ಒಂದು ದಿನಕ್ಕೆ ಯಾವುದೇ ರಿಯಾಯಿತಿ ಇರುವುದಿಲ್ಲ. 3 ದಿನಕ್ಕೆ 60 ರೂ ಮತ್ತು 5 ದಿನಕ್ಕೆ 50 ರೂ ರಿಯಾಯಿತಿ ಇರುತ್ತದೆ.