ಕೋಲ್ಕತ್ತದಲ್ಲಿ ಫುಟ್‌ ಬಾಲ್‌ ಮಾಂತ್ರಿಕ ಮೆಸ್ಸಿ ಕಾರ್ಯಕ್ರಮದಲ್ಲಿ ಅವ್ಯವಸ್ಥೆ: ಸಂಘಟಕನ ಬಂಧನ; ಟಿಕೆಟ್‌ ಮೊತ್ತ ಹಿಂತಿರುಗಿಸುವ ಭರವಸೆ

Most read

ಕೋಲ್ಕತ್ತ: ಅರ್ಜೆಂಟೀನಾದ ವಿಶ್ವಖ್ಯಾತಿ ಪಡೆದಿರುವ ಖ್ಯಾತ ಫುಟ್‌ ಬಾಲ್‌ ಆಟಗಾರ ಲಿಯೋನೆಲ್‌ ಮೆಸ್ಸಿ ಕೋಲ್ಕತ್ತದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ದಾಂಧಲೆ ಉಂಟಾಗಿದೆ. ಹೀಗಾಗಿ ಕ್ರೀಡಾಂಗಣಕ್ಕೆಆ ಗಮಿಸಿದ ಮೆಸ್ಸಿ ಕೆಲವೇ ಕ್ಷಣಗಳಲ್ಲಿ ನಿರ್ಗಮಿಸಿದ್ದಾರೆ.

2011ರ ನಂತರ ಇದೇ ಮೊದಲ ಬಾರಿಗೆ ಕೋಲ್ಕತ್ತ ನಗರಕ್ಕೆ ಭೇಟಿ ನೀಡಿದ್ದ ಅವರು ಸೌಹಾರ್ದ ಪಂದ್ಯದಲ್ಲಿ ಆಡಬೇಕಿತ್ತು. ಆದರೆ, ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಕ್ರೀಡಾಂಗಣದಲ್ಲಿ ನೆರೆದಿದ್ದರಿಂದ ಗೊಂದಲ, ಗದ್ದಲ ಉಂಟಾಗಿ, ಅವ್ಯವಸ್ಥೆ ಸೃಷ್ಟಿಯಾಯಿತು. ಹೀಗಾಗಿ, ಮೆಸ್ಸಿ ಅಲ್ಲಿಂದ ತೆರಳಬೇಕಾದ ಅನಿವಾರ್ಯತೆ ಉಂಟಾಗಿತ್ತು. ಮೆಸ್ಸಿ ನಿರ್ಗಮಿಸುತ್ತಿದ್ದಂತೆ ಅಭಿಮಾನಿಗಳ ಆಕ್ರೋಶ ಕಟ್ಟೆಯೊಡದಿದೆ. 20 ಸಾವಿರ ರೂ.ವರೆಗೆ ಟಿಕೆಟ್‌ ಖರೀದಿಸಿ ತಮ್ಮ ಆರಾಧ್ಯ ದೈವ ಮೆಸ್ಸಿಯನ್ನು ನೋಡಲು ಆಗಮಿಸಿದ್ದ ಅಭಿಮಾನಿಗಳು ನೀರಿನ ಬಾಟಲ್ ಮತ್ತು ಕುರ್ಚಿಗಳನ್ನು ಕ್ರೀಡಾಂಗಣದತ್ತ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿ, ಮೆಸ್ಸಿ ಅವರನ್ನು ರಾಜಕೀಯ ನಾಯಕರು, ಚಿತ್ರ ನಟರೇ ಸುತ್ತುವರಿದಿದ್ದರು. ಅವರನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಭಿಮಾನಿಗಳಿಗೆ ಟಿಕೆಟ್‌ ಮೊತ್ತವನ್ನು ಮರುಪಾವತಿಸುವುದಾಗಿ ಆಯೋಜಕರು ಲಿಖಿತವಾಗಿ ಬರೆದುಕೊಟ್ಟಿದ್ದಾರೆ ಎಂದೂ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮಧ್ಯೆ ಕಾರ್ಯಕ್ರಮದ ಸಂಘಟಕ ಸತದ್ರು ದತ್ತಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಕ್ರೀಡಾಂಗಣದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸಂಘಟಕರಿಂದ ಆದ ಲೋಪಗಳನ್ನು ಪರಿಶೀಳಿಸುತ್ತಿದ್ದೇವೆ ಎಂದು ಎಂದು ಪಶ್ಚಿಮ ಬಂಗಾಳ ಪೊಲೀಸ್‌ ಮಹಾ ನಿರ್ದೇಶಕ ರಾಜೀವ್‌ ಕುಮಾರ್ ಹೇಳಿದ್ದಾರೆ.

ಮೆಸ್ಸಿ ಅವರ ‘ಗೋಟ್‌’ ಟೂರ್ ಆಫ್‌ ಇಂಡಿಯಾ ಪ್ರವಾಸ ಇಂದಿನಿಂದ ಆರಂಭವಾಗಿದೆ.

ಮೂರು ದಿನ ಭಾರತದಲ್ಲಿ ಉಳಿಯುವ ಅವರು, ಇಂದು ಸಂಜೆ ಹೈದರಾಬಾದ್‌,  ಡಿಸೆಂಬರ್‌ 14 ರಂದು ಮುಂಬೈ ಹಾಗೂ  15ರಂದು ನವದೆಹಲಿಗೆ ಭೇಟಿ ನೀಡಲಿದ್ದಾರೆ.

More articles

Latest article