ಅನುಮತಿ ಇಲ್ಲದೇ ಇದ್ದರೂ ಕಪ್ಪು ಬಟ್ಟೆ ಧರಿಸಿ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಮಾತನಾಡಿದರು.
ಎಂಇಎಸ್ ಗೆ ಕರಾಳ ದಿನಾಚರಣೆ, ಪ್ರತಿಭಟನೆ ಅಥವಾ ಮೆರವಣಿಗೆಗೆ ಅನುಮತಿ ನೀಡಿರಲಿಲ್ಲ. ಆದರೂ ಆ ಸಮಿತಿಯವರು ಕಪ್ಪು ಬಟ್ಟೆ ಧರಿಸಿ ಬೈಕ್ ರ್ಯಾಲಿ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗವುದು. ಎಂಇಎಸ್ ಉಪಟಳ ಈ ಹಿಂದೆ ಇದ್ದಷ್ಟು ಈಗ ಇಲ್ಲ. ಕನ್ನಡಿಗರ ಸಡಗರ ಸಂಭ್ರಮದ ಮುಂದೆ ಅವರು ಮಂಕಾಗಿ ಹೋಗಿದ್ದಾರೆ. ಬೆರಳೆಣಿಕೆಯಷ್ಟು ಮಂದಿ ಮೆರವಣಿಗೆ ಮಾಡಿರಬಹುದು. ಹಾಗೆಂದು ಅವರನ್ನು ನೇರವಾಗಿ ಬಂಧಿಸುವುದು ಸರಿಯಾದ ಕ್ರಮ ಆಗುವುದಿಲ್ಲ. ರಾಜ್ಯೋತ್ಸವ ಸಂದರ್ಭದಲ್ಲಿ ಅದು ಗಲಾಟೆಗೆ ಎಡೆಮಾಡಿ ಕೊಡುತ್ತದೆ. ಮುಂದೆ ಪೊಲೀಸರು ಸೂಕ್ತ ಕ್ರಮ ಜರುಗಿಸುತ್ತಾರೆ ಎಂದರು.
ಯಾರು ಯಾರು ಮೆರವಣಿಗೆ ನಡೆಸಿದ್ದಾರೆ, ಯಾರು ಯಾರು ನಾಡ ವಿರೋಧಿ ಘೋಷಣೆ ಕೂಗಿದ್ದಾರೆ ಎಂಬುದನ್ನೂ ಪರಿಶೀಲಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಬೆಳಗಾವಿಯಲ್ಲಿ ಇಂದು ರಾಜ್ಯೋತ್ಸವ ಆಚರಣೆಯನ್ನು ವಿರೋಧಿಸಿ ಎಂಇಎಸ್ ಸದಸ್ಯರು ಕಪ್ಪು ಪಟ್ಟಿ ಧರಿಸಿ ಕರಾಳ ದಿನಾಚರಣೆ ಅಂಗವಾಗಿ ಮೆರವಣಿಗೆ ನಡೆಸಿದರು. ಸಂಭಾಜಿ ಉದ್ಯಾನವನ, ಮಾಧವ ರಸ್ತೆ ಮೂಲಕ ಸಾಗಿ ಮರಾಠ ಭವನ ತಲುಪಿದರು. ಕೆಲವರು ನಾಡ ವಿರೋಧಿ ಘೋಷಣೆ ಕೂಗಿದ್ದಾರೆ ಎಂದು ತಿಳಿದು ಬಂದಿದೆ.