ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ಉದ್ಯೋಗಸ್ಥ ಮಹಿಳೆಯರಿಗೆ ವೇತನ ಸಹಿತ ವಾರ್ಷಿಕ 12 ಋತುಚಕ್ರ ರಜೆ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಪದಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಅಭಿನಂದಿಸಿ ಸನ್ಮಾನಿಸಿದರು.
ವಿಧಾನಸೌಧದ ಕಚೇರಿಯಲ್ಲಿ ಸಚಿವರನ್ನು ಭೇಟಿಯಾದ ಸಂಘದ ಅಧ್ಯಕ್ಷರಾದ ರೋಷಿನಿಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಶಶಿಕಲಾ, ಸರ್ಕಾರದ ಈ ಮಹತ್ವದ ನಿರ್ಧಾರಕ್ಕಾಗಿ ಧನ್ಯವಾದ ಅರ್ಪಿಸಿದರು.
ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಇಂತಹ ತೀರ್ಮಾನ ಕೈಗೊಂಡಿರುವ ಮೊದಲ ರಾಜ್ಯವಾಗಿದ್ದು, ಇದಕ್ಕಾಗಿ ರಾಜ್ಯದ ಸಮಸ್ತ ಮಹಿಳೆಯರ ಪರವಾಗಿ ಧನ್ಯವಾದಗಳು ಎಂದು ಹೇಳಿದ ರೋಷಿನಿಗೌಡ ಅವರು, ಮುಂದಿನ ದಿನಗಳಲ್ಲಿ ಋತುಚಕ್ರ ರಜೆ ನೀತಿಯನ್ನು ಕಾಯ್ದೆಯನ್ನಾಗಿ ಜಾರಿಗೊಳಿಸಬೇಕು ಎಂದು ಮನವಿ ಸಲ್ಲಿಸಿದರು.

