ಋತುಚಕ್ರ ರಜೆ ಘೋಷಣೆ;  ಸಿಎಂ , ಡಿಸಿಎಂಗೆ ಸರ್ಕಾರಿ ಮಹಿಳಾ ನೌಕರರ ಸಂಘದ ವತಿಯಿಂದ ಅಭಿನಂದನಾ ಸಮಾರಂಭ: ಬೆಳ್ಳಿ ಕಿರೀಟ ತೊಡಿಸಿ ಸನ್ಮಾನ

Most read

ಬೆಂಗಳೂರು: ಸರ್ಕಾರಿ ಮಹಿಳಾ ನೌಕರರಿಗೆ ಋತುಚಕ್ರದ ರಜಾ ದಿನ ಕೊಡಬೇಕು ಎಂದು ಮಹಿಳಾ ನೌಕರರ ಸಂಘ ಮತ್ತು ಶಿಕ್ಷಕರ ಸಂಘ ಒತ್ತಡ ಹೇರುತ್ತಲೇ ಇದ್ದವು.  ಇದರ ಅಗತ್ಯ ಇದೆ ಪರಿಗಣಿಸಿ ಸರ್ಕಾರ ತಿಂಗಳಲ್ಲಿ ಒಂದು ವೇತನಸಹಿತ ರಜೆಯನ್ನು ಘೋಷಣೆ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸೌಧದಲ್ಲಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ(ರಿ)ವತಿಯಿಂದ ಮಹಿಳಾ ಸಮ್ಮೇಳನ ಮತ್ತು ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಋತುಚಕ್ರ ರಜೆ ಘೋಷಿಸಿರುವ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಂಪುಟ ಸಚಿವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಮತ್ತು ಸಂಘದ ವೆಬ್ ಸೈಟ್ ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸೆಪ್ಟೆಂಬರ್ 13ಮಹಿಳಾ ನೌಕರರ ದಿನಾಚರಣೆ ಮಹಿಳಾ ದಿನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಮಹಿಳಾ ನೌಕರರ ಸಂಘಕ್ಕೆ ಕಚೇರಿ ಬೇಕು ಎಂಬ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಬಾಲಭವನದಲ್ಲಿ ಕೊಠಡಿ ನೀಡಲಾಗುವುದು ಎಂದರು.

ಸಮಾಜದಲ್ಲಿ ಗಂಡು ಮತ್ತು ಹೆಣ್ಣು ಎಂಬ ಬೇಧಬಾವವಿಲ್ಲ, ಕಾನೂನಿನಲ್ಲಿ ಎಲ್ಲರು ಸರಿಸಮಾನರು, ಲಿಂಗತಾರತಮ್ಯ  ಹೋಗಲಾಡಿಸಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ರಾಜ್ಯ ಬಜೆಟ್ ನಲ್ಲಿ ರೂ. 95 ಸಾವಿರ ಕೋಟಿಯನ್ನು  ಮಹಿಳೆಯರ ಅಭಿವೃದ್ದಿಗಾಗಿ ಮೀಸಲಿಡಲಾಗಿದೆ. ಸಂವಿಧಾನ ಜಾರಿಯಾದ ಮೇಲೆ ಎಲ್ಲರಿಗೂ ಹಕ್ಕುಗಳು ನೀಡಿದ್ದಾರೆ. ಸಾರಕ್ಷತೆ ಶೇ.12 ರಷ್ಟಿತ್ತು. ಆದರೆ ಇಂದು ಶೇಕಡ 82ಕ್ಕೆ ಹೆಚ್ಚಳವಾಗಿದೆ. ಮೂಢನಂಬಿಕೆ,ಅಂಧಶ್ರದ್ದೆಗಳಿಂದ ದೂರ ಇದ್ದಾಗ ಅರೋಗ್ಯವಂತ, ಸಮಾನತೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.

ಎಲ್ಲ ಶಾಲೆ ಕಾಲೇಜುಗಳಲ್ಲಿ  ಸಂವಿಧಾನ ಪೀಠಿಕೆ ಓದುವಂತೆ ಕ್ರಮ ಕೈಗೊಳ್ಳಲಾಗಿದೆ. ಶಿಕ್ಷಣದಿಂದ ಜಾತಿ ನಿರ್ಮೂಲನೆ ಆಗಬೇಕು. ವೈದ್ಯರೂ ಸಹ ಮೂಢನಂಬಿಕೆ, ಮೌಡ್ಯಗಳನ್ನು ನಂಬುತ್ತಾರೆ. ಮಹಿಳಾ ನೌಕರರು ಜಾತ್ಯತೀತರಾಗಿ ಬಾಳಬೇಕು. ರಾಜ್ಯದಲ್ಲಿ 3.5ಕೋಟಿ ಮಹಿಳೆಯರು ಇದ್ದಾರೆ. ಅವರಿಗೆ ಶಕ್ತಿ ಮತ್ತು 200ಯೂನಿಟ್ ಗೃಹಜ್ಯೋತಿ ಯೋಜನೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಲಾಭ ಪಡೆದು ಹಣ ಉಳಿತಾಯ ಮಾಡಿ ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಾರೆ. 7ನೇ ವೇತನ ಆಯೋಗ ಜಾರಿ ಮಾಡಿ ಸಂಬಳ ಹೆಚ್ಚಿಸಲಾಗಿದೆ. ಎಲ್ಲರೂ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲರಾಗಿದ್ದ ಮಾತ್ರ ಸಮಾನತೆ ತರಲು ಸಾಧ್ಯ ಎಂದು ಅಂಬೇಡ್ಕರ್ ರವರು ಹೇಳಿದ್ದರು ಎಂದು ಹೇಳಿದರು.

ಡಿಸಿಎಂ ಡಿ.ಕೆ.ಶಿವಕುಮಾರ್  ಮಾತನಾಡಿ ಸಂಘಟನೆ ಬಹಳ ಮುಖ್ಯ. ಶಿಕ್ಷಣ ಇಲಾಖೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ನೌಕರರು ಇದ್ದಾರೆ. ಕರುಣೆ, ಮಮತೆಯ ಮಡಿಲು ಮಹಿಳೆ. ಮಹಿಳೆ ಇಲ್ಲದೇ ಜಗತ್ತು ಇಲ್ಲ. ನನಗೂ ಸಹ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಬಹಳ ಬುದ್ದಿವಂತರು ಎಂದರು.

ಹೆಣ್ಣನ್ನು ಗ್ರಾಮದೇವತೆ, ನಾಡದೇವತೆ, ಭೂಮಿತಾಯಿ ಎಂದು ಹೇಳುತ್ತೇವೆ. ಮಹಿಳೆಯರಿಗೆ ಹೆಚ್ಚಿನ ಗೌರವ ನೀಡುತ್ತೇವೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶೇ.50ರಷ್ಟು ಲೋಕಸಭೆಯಲ್ಲಿ ಶೇ. 33ರಷ್ಟು ಮಹಿಳಾ ಮೀಸಲಾತಿ ನೀಡಲಾಗಿದೆ.  ಜಾತಿ ಆಧಾರದಲ್ಲಿ ಸಂಘಟನೆ ಮಾಡಬೇಡಿ, ಒಂದೇ ಸಂಘ ಇರಬೇಕು ಎಂದು ಸಲಹೆ ನೀಡಿದರು.

ಮಹಿಳಾ ನೌಕರರಿಗೆ ಕಾಂಗ್ರೆಸ್ ಸರ್ಕಾರ ಬಂದಾಗ ಹೆಚ್ಚಿನ ಸಹಕಾರ, ಸಹಾಯ ದೊರಕಿದೆ. ಮಹಿಳಾ ಪರ ಹಲವಾರು ಕಾನೂನು ಜಾರಿಗೆ ತರಲಾಗಿದೆ.  ಸರ್ಕಾರಕ್ಕೆ ಒಳ್ಳೆ ಹೆಸರು ಅಥವಾ ಕೆಟ್ಟ ಹೆಸರು ನೌಕರರು ನಡವಳಿಕೆ ಮೇಲೆ ನಿಂತಿದೆ. ಮಹಿಳೆಯರ ಸುರಕ್ಷತೆ ಎಲ್ಲ ಜಿಲ್ಲೆಗಳಲ್ಲಿ ಅಕ್ಕಪಡೆ ರಚಿಸಲಾಗಿದೆ ಎಂದು ಹೇಳಿದರು.

ವಿಧಾನಪರಿಷತ್‌  ಸಭಾಪತಿ ಬಸವರಾಜ್ ಹೊರಟ್ಟಿ, ಸಚಿವರಾದ  ಹೆಚ್.ಕೆ.ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್, ದಿನೇಶ್ ಗುಂಡೂರಾವ್ ,ಶಾಸಕರಾದ ಅಲ್ಲಮಪ್ರಭು ಪಾಟೀಲ್, ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ, ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷರಾದ ಡಾ||ಅಶೋಕ್ ಬಿ.ಹಿಂಚಿಗೇರಿ, ವಿಧಾನಪರಿಷತ್ ಸದಸ್ಯರುಗಳಾದ ಡಾ||ಆರತಿಕೃಷ್ಣ, ಪುಟ್ಟಣ್ಣ, ಬಿಲ್ಕಿಸ್ ಬಾನು,ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಮಾಜಿ ಶಾಸಕಿ ಸೌಮ್ಯರೆಡ್ಡಿ ಹಾಜರಿದ್ದರು.

More articles

Latest article