Wednesday, December 10, 2025

ಮಹಿಳೆಯರಿಗೆ ಋತು ಚಕ್ರ ರಜೆ; ಬಿಪಿಎಲ್ ಪಡಿತರರಿಗೆ 5 ಅಕ್ಕಿ ಜತೆ  5  ಕೆಜಿ ಆಹಾರ ಕಿಟ್‌ ವಿತರಣೆ: ಸಚಿವ ಸಂಪುಟ ನಿರ್ಧಾರ

Most read

ಬೆಂಗಳೂರು: ರಾಜ್ಯದ ಸರ್ಕಾರಿ ಉದ್ಯೋಗಿಗಳು, ಬಹುರಾಷ್ಟ್ರೀಯ ಕಂಪನಿಗಳು, ಗಾರ್ಮೆಂಟ್ಸ್‌, ಐಟಿ ಮತ್ತು ಇತರ ಖಾಸಗಿ ಕೈಗಾರಿಕೆಗಳು ಸೇರಿದಂತೆ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ ನೀಡುವ ‘ಋತು ಚಕ್ರ ರಜೆ ನೀತಿ 2025’ ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.  ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಋತುಚಕ್ರದ ಆರೋಗ್ಯವನ್ನು ಮಹಿಳೆಯರ ಮೂಲಭೂತ ಹಕ್ಕು ಎಂದು ಪರಿಗಣಿಸಲಾಗಿದೆ. ಋತುಚಕ್ರ ರಜೆ ನೀತಿಯು ಮಹಿಳೆಯರು ಯಾವುದೇ ಕಳಂಕ ಅಥವಾ ಪರಿಣಾಮಗಳ ಭಯವಿಲ್ಲದೆ ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡಬಹುದಾದ ಸಹಾಯಕ ವಾತಾವರಣವನ್ನು ಸೃಷ್ಟಿಸುವ ಸಕ್ರಿಯ ಹೆಜ್ಜೆಯಾಗಿದೆ ಎಂದು ಹೇಳಿದರು.

ಋತುಚಕ್ರ ರಜೆಗೆ ದೇಶದಲ್ಲಿ ಏಕರೂಪದ ಕಾನೂನು ಇಲ್ಲವಾದರೂ ಹಲವು ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಕಂಪನಿಗಳು ತಮ್ಮ ಮಹಿಳಾ ಉದ್ಯೋಗಿಗಳಿಗೆ ಋತುಚಕ್ರ ರಜೆ ನೀಡುವ ನೀತಿಗಳನ್ನು ಅಳವಡಿಸಿಕೊಂಡಿವೆ ಎಂದರು.

ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುಗಳಿಗೆ ಅನ್ನಭಾಗ್ಯದ 10 ಕೆಜಿ ಅಕ್ಕಿಗೆ ಬದಲಾಗಿ 5 ಕೆಜಿ ಅಕ್ಕಿ ಹಾಗೂ ಉಳಿದ 5 ಕೆಜಿ ಅಕ್ಕಿ ಲೆಕ್ಕದಲ್ಲಿ ಆಹಾರ ಧಾನ್ಯ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

ʻಇಂದಿರಾ ಆಹಾರ ಕಿಟ್‌ʼ ಕಿಟ್‌ ನೀಡಲು ಸರ್ಕಾರ ನಿರ್ಧರಿಸಿದೆ. 

ಈ ಕಿಟ್‌ನಲ್ಲಿ ತೊಗರಿ, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ಸೇರಿದಂತೆ ಇತರ ಅಗತ್ಯ ವಸ್ತುಗಳಿರುತ್ತವೆ. ಈ ಕಿಟ್ ನೀಡುವುದರಿಂದ ಸರ್ಕಾರದ ಮೇಲೆ ಸ್ವಲ್ಪಮಟ್ಟಿಗೆ ಆರ್ಥಿಕ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ. ಕಿಟ್ ವಿತರಣೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಯಾವ ತಿಂಗಳಿನಿಂದ ಜಾರಿಗೊಳಿಸಬೇಕು ಎಂದು ತೀರ್ಮಾನಿಸಲಾಗುತ್ತದೆ ಎಂದು ತಿಳಿಸಿದರು.

ಇಂದಿರಾ ಆಹಾರ ಕಿಟ್ನಲ್ಲಿ ಏನಿರಲಿದೆ?:

ತೊಗರಿ ಬೇಳೆ – 1 ಕೆಜಿ; ಹೆಸರು ಕಾಳು – 1 ಕೆಜಿ; ಅಡುಗೆ ಎಣ್ಣೆ – 1 ಕೆಜಿ; ಸಕ್ಕರೆ – 1 ಕೆಜಿ; ಉಪ್ಪು – ಕೆಜಿ

More articles

Latest article