ಜನವರಿ 30- ಮಹಾತ್ಮ ಗಾಂಧೀಜಿ ಹುತಾತ್ಮ ದಿನ
ಗಾಂಧಿಯ ವ್ಯಕ್ತಿತ್ವವನ್ನು ಸರಿಯಾಗಿ ತಿಳಿದುಕೊಳ್ಳದೆ ಯಾರೋ ಸಮಯ ಕಳೆಯುವುದಕ್ಕೆ ಹೇಳಿದ ದಂತಕಥೆಗಳನ್ನು ಕೇಳಿ, ಅದನ್ನೇ ಪ್ರಚಾರಮಾಡುವ ಅಜ್ಞಾನಿಗಳು ಹಾಗೂ ತಮ್ಮ ತಾತ್ವಿಕತೆಯನ್ನು ಸಮರ್ಥಿಸಲು ಉದ್ದೇಶಪೂರ್ವಕವಾಗಿ ಈ ರೀತಿಯ ಕಥೆ ಹೇಳುವವರಿಗೆ ಗಾಂಧಿಯ ಎತ್ತರ ಅರ್ಥವಾಗುವುದಾದರೂ ಹೇಗೆ? – ಡಾ. ಗಣನಾಥ ಎಕ್ಕಾರು, ಜಾನಪದ ವಿದ್ವಾಂಸರು.
ಕೆಲವೊಂದು ವಿಚಾರಗಳನ್ನು ನಾವು ಬಲ್ಲವರಿದ್ದೇವೆ ಎಂದು ತಿಳಿಯುತ್ತೇವೆ. ಆದರೆ ಅವು ನಿಜವಾಗಿಯೂ ನಮಗೆ ತಿಳಿದಿರುವುದಿಲ್ಲ. ನಮಗೆ ಗೊತ್ತಿದೆ ಎಂದು ಭಾವಿಸುತ್ತೇವೆ. ನೈಜವಾಗಿ ನಮಗೆ ಗೊತ್ತಿರುವುದಿಲ್ಲ. ಅಂತ ವಿಷಯಗಳಲ್ಲಿ ಒಂದು ಗಾಂಧಿ ಅಥವಾ ಮೋಹನದಾಸ ಕರಮಚಂದ ಗಾಂಧಿ. ಗಾಂಧಿಯ ಬಗ್ಗೆ ಮುಗ್ಧ ಹುಡುಗರು ಕೆಲವರು ಬುದ್ಧಿವಂತರೆನಿಸಿಕೊಂಡವರು ಹಗುರವಾಗಿ ಮಾತನಾಡುವುದನ್ನು ಕೇಳಿದ್ದೇವೆ. ಗಾಂಧಿಯ ವ್ಯಕ್ತಿತ್ವವನ್ನು ಸರಿಯಾಗಿ ತಿಳಿದುಕೊಳ್ಳದೆ ಯಾರೋ ಸಮಯ ಕಳೆಯುವುದಕ್ಕೆ ಹೇಳಿದ ದಂತಕಥೆಗಳನ್ನು ಕೇಳಿ, ಅದನ್ನೇ ಪ್ರಚಾರಮಾಡುವ ಅಜ್ಞಾನಿಗಳು ಹಾಗೂ ತಮ್ಮ ತಾತ್ವಿಕತೆಯನ್ನು ಸಮರ್ಥಿಸಲು ಉದ್ದೇಶಪೂರ್ವಕವಾಗಿ ಈ ರೀತಿಯ ಕಥೆ ಹೇಳುವವರಿಗೆ ಗಾಂಧಿಯ ಎತ್ತರ ಅರ್ಥವಾಗುವುದಾದರೂ ಹೇಗೆ?
ಪ್ರಾಚೀನ ಕಾಲದಿಂದಲೂ ಭಾರತ ಸಾಂಸ್ಕೃತಿಕವಾಗಿ ಒಂದು ನಾಡಾಗಿತ್ತು. ಆದರೆ ರಾಜಕೀಯವಾಗಿ ಒಂದು ರಾಷ್ಟ್ರ ಎಂಬ ರಾಷ್ಟ್ರೀಯತೆಯ ಪರಿಕಲ್ಪನೆ ಇರಲಿಲ್ಲ. ಸಾವಿರಾರು ಸ್ವತಂತ್ರ ರಾಷ್ಟ್ರಗಳ ನಾಡಾಗಿತ್ತು. ಈ ರಾಷ್ಟ್ರಗಳ ನಡುವೆ ಹಿಂಸಾತ್ಮಕವಾದ ರಾಜಕೀಯ ಹೋರಾಟವು ನಡೆಯುತ್ತಿತ್ತು. ಬ್ರಿಟೀಷರು ಇದರಿಂದಲೇ ಭಾರತವನ್ನು ತಮ್ಮ ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಸೇರಿಸಿಕೊಂಡರು. ಸ್ವಾತಂತ್ರ್ಯ ಹೋರಾಟವು ಭಾರತದಲ್ಲಿ ರಾಷ್ಟ್ರೀಯತೆಯ ಚಿಂತನೆಗೆ ಕಾರಣವಾಯಿತು. ಆದರೆ ಈ ಪರಿಕಲ್ಪನೆಗೆ ಅಹಿಂಸಾತ್ಮಕ ಹೋರಾಟದ ಮೂಲಕ ಸ್ಪಷ್ಟ ರೂಪ ನೀಡಿದವರು ಗಾಂಧಿ. ದೇಶದ ಜನ ಮಾನಸಿಕವಾಗಿ ಒಂದಾಗುವುದಕ್ಕೆ ಸಂಕೇತವಾದರು ಗಾಂಧಿ. ವಿವಿಧ ಸಂಸ್ಕೃತಿಯ ಜನರು ರೂಪಿಸಿಕೊಂಡ ವಿಶಿಷ್ಟ ತತ್ವವೇ ಗಾಂಧಿವಾದ. ಸಾಂಸ್ಕೃತಿಕ ವೈವಿಧ್ಯತೆಯು ನಮ್ಮ ನಾಡಿನ ವಿಶಿಷ್ಟ ವೈಶಿಷ್ಟ್ಯವಾಗಿರುವಂತೆ ಹಲವು ಸಮಸ್ಯೆಗಳಿಗೂ ಕಾರಣವಾಗಿತ್ತು. ಇದರಿಂದ ಇಡೀ ದೇಶ ಒಬ್ಬ ನಾಯಕನನ್ನು ಹುಡುಕಿಕೊಳ್ಳಲು ಸಾಧ್ಯವಾಗಲಿಲ್ಲ. ಇಂದು ನಾವು ರಾಷ್ಟ್ರೀಯ ನಾಯಕರೆಂದು ಗುರುತಿಸುವ ಗಾಂಧಿಪೂರ್ವ ನಾಯಕರಲ್ಲಿ ಹೆಚ್ಚಿನವರು ಒಂದು ಧರ್ಮ, ಪ್ರದೇಶ, ಜನಾಂಗ, ಜಾತಿಗಳನ್ನು ಪ್ರತಿನಿಧಿಸುವ ನಾಯಕರು. ಆದರೆ ಗಾಂಧೀಜಿಯವರನ್ನು ಇಡೀ ದೇಶದ ಜನರು ನಾಯಕನೆಂದು ಸ್ವೀಕರಿಸಿದರು. ಮಹಾತ್ಮಾ ಎಂದು ಗುರುತಿಸಿದರು. ರಾಷ್ಟ್ರೀಯ ಪರಿಕಲ್ಪನೆಯನ್ನು ರೂಪಿಸಿಕೊಳ್ಳುವುದಕ್ಕೆ ಒಂದು ಶಕ್ತಿಯಾಗಿ ಅಂಗೀಕರಿಸಿದರು. ಇದರಿಂದಲೇ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ವಾತಂತ್ರ್ಯ ಹೋರಾಟದ ಸ್ಪಷ್ಟ ರೂಪ ದೊರೆಯಿತು.

ಗಾಂಧಿಯನ್ನು ನೋಡದ, ಗಾಂಧಿಯ ಭಾಷಣವನ್ನು ಕೇಳದ, ಗಾಂಧಿಯ ವಿಚಾರಧಾರೆಯ ಬಗ್ಗೆ ಯಾವುದೇ ಅರಿವು ಇಲ್ಲದ ಜನ ಕೂಡ ಗಾಂಧಿಯನ್ನು ಸಂಕೇತವಾಗಿ ಭಕ್ತಿ ಮತ್ತು ಪ್ರೀತಿಯಿಂದ ಸ್ವೀಕರಿಸಿದರು. ಈ ಮ್ಯಾಜಿಕ್ ಹೇಗೆ ಸಾಧ್ಯವಾಯಿತು?. ಇದಕ್ಕೆ ಮುಖ್ಯ ಕಾರಣವೆಂದರೆ-ಗಾಂಧೀಜಿಯವರು ಈ ದೇಶದ ಜನರ ಬಹುಮುಖಿ ಸಂಸ್ಕೃತಿ ಮತ್ತು ಅದರಿಂದ ರೂಪುಗೊಂಡ ಮನೋಭಾವವನ್ನು ಅರ್ಥ ಮಾಡಿಕೊಂಡಿದ್ದರು. ಅದನ್ನು ತಮ್ಮ ಸಿದ್ಧಾಂತವನ್ನಾಗಿ ಬೆಳೆಸಿದರು. ಅವರ ಎಲ್ಲಾ ಕ್ರಿಯೆ ಹಾಗೂ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ. ಎರಡು ವಿಚಾರಗಳಲ್ಲಿ ಭಾರತದ ರಾಷ್ಟ್ರೀಯ ಹಿತಾಸಕ್ತಿ ಅಡಗಿರುವುದನ್ನು ಅವರು ಗುರುತಿಸಿದರು. ಒಂದು ಸಾಂಸ್ಕೃತಿಕ ಸಾಮರಸ್ಯ, ಎರಡನೇಯದು ಗ್ರಾಮ ಸ್ವರಾಜ್ಯ. ಈ ದೇಶದಲ್ಲಿ ಹಲವು ಧರ್ಮ, ಭಾಷೆ, ಜನಾಂಗಗಳಿರುವುದರಿಂದ ಯಾವುದೇ ಒಂದನ್ನು ರಾಷ್ಟ್ರೀಯವೆಂದು ಪರಿಗಣಿಸಲು ಸಾಧ್ಯವಿಲ್ಲ. ಎಲ್ಲವನ್ನೂ ಗೌರವಿಸಿ, ಸಾಮರಸ್ಯದ ಮೂಲಕ ರಾಷ್ಟ್ರೀಯತೆಯನ್ನು ರೂಪಿಸಲು ಸಾಧ್ಯ. ಇದರಿಂದ ಹಿಂದೂ ಫಕೀರನಂತೆ ಇದ್ದರೂ ಮುಸ್ಲಿಮರನ್ನು ಪ್ರೀತಿಸಲು ಗಾಂಧೀಜಿಗೆ ಸಾಧ್ಯವಾಯಿತು. ಹಿಂದೂ ರಾಷ್ಟ್ರೀಯವಾದಿಗಳಲ್ಲಿ ಕಲ್ಪಿಸಲೂ ಸಾಧ್ಯವಾಗದ ತಾಯ್ತನದ ಪ್ರೀತಿ ಗಾಂಧಿಗೆ ಸಾಧ್ಯವಾಯಿತು.
ಈ ದೇಶದ ನಿಜವಾದ ಐಕ್ಯತೆ ಹಿಂದೂ-ಮುಸಲ್ಮಾನರ ಏಕತೆಯಲ್ಲಿದೆಯೆಂಬುದನ್ನು ಗಾಂಧಿ ಮನಗಂಡಿದ್ದರು. ತಮ್ಮ ಧರ್ಮದ ಸರಳ ಮತ್ತು ಮಾನವೀಯ ತತ್ವಗಳನ್ನು ನಂಬಿ ಇತರ ಧರ್ಮಗಳ ಹಿತಾಸಕ್ತಿಗಳನ್ನು ಪ್ರತಿಪಾದಿಸುತ್ತಿದ್ದರು. ಅವರು ಗೊಡ್ಡು ಸಂಪ್ರದಾಯವಾದಿಯಾಗಿರಲಿಲ್ಲ. “ಹಿಂದೂ ಧರ್ಮ ಅಳಿದರೂ ಅಳಿಯಲಿ, ಜಾತಿ ಪದ್ಧತಿ ಮಾತ್ರ ಉಳಿಯುವುದು ಬೇಡ” ಎಂಬ ಅವರ ಅಭಿಪ್ರಾಯ ಕ್ರಾಂತಿಕಾರಕವಾದುದು. ಜಾತಿಪದ್ಧತಿಯನ್ನು ತೀವ್ರವಾಗಿ ವಿರೋಧಿಸಿ, ಸಮಾನತೆಯನ್ನು ಪ್ರತಿಪಾದಿಸಿದರು. ಅಸ್ಪೃಶ್ಯತೆಯನ್ನು ವಿರೋಧಿಸಿ, ಅಸ್ಪೃಶ್ಯರನ್ನು ಹರಿಜನ ಎಂದು ಕರೆದರು. ಮಾತೃಭಾಷೆಯಿಂದ ಮಾತ್ರ ವ್ಯಕ್ತಿ ವಿಕಸನ ಸಾಧ್ಯ ಎಂಬ ಪ್ರತಿಪಾದನೆ ಅವರ ಸೂಕ್ಷ್ಮವಾದ ಆಲೋಚನೆಗೆ ಸಾಕ್ಷಿಯಾಗಿದೆ.
ಬಹುಮುಖಿ ಸಂಸ್ಕೃತಿಯೇ ನಿಜವಾದ ಭಾರತೀಯ ಸಂಸ್ಕೃತಿ ಎಂಬುದನ್ನು ಗಾಂಧೀಜಿ ಒಪ್ಪಿಕೊಂಡಿದ್ದರು. ಅವರ ‘ಈಶ್ವರ-ಅಲ್ಲಾ ತೇರೇ ನಾಮ್ ʼಎಂಬಲ್ಲಿ ಇದನ್ನು ಗುರುತಿಸಬಹುದು. ಭಾರತೀಯ ಮನಸ್ಸು ಹಿಂಸೆಗಿಂತ ಅಹಿಂಸೆಗೆ ಹೆಚ್ಚು ಸ್ಪಂದಿಸುತ್ತದೆ ಎಂಬುದನ್ನು ಕಂಡುಕೊಂಡಿದ್ದರು. ಸಹನೆ ಮತ್ತು ಸಹಿಷ್ಣುತೆ ಭಾರತೀಯ ಮನಸ್ಸಿನ ಮೂಲಾಧಾರ ಎಂಬುದನ್ನು ಗ್ರಹಿಸಿದ್ದರು. ಅದು ಬಹುಮುಖಿ ಸಂಸ್ಕೃತಿಯಿಂದ ರೂಪುಗೊಂಡ ಮನಸ್ಥಿತಿ ಎಂಬುದನ್ನು ಅವರು ಅರ್ಥಮಾಡಿಕೊಂಡಿದ್ದರು. ಭಾರತೀಯ ರಾಷ್ಟ್ರೀಯತೆ ಈ ದೃಷ್ಟಿಕೋನದಿಂದ ರೂಪುಗೊಳ್ಳುವುದನ್ನು ಅವರು ಬಯಸಿದ್ದರು. ಈ ರೀತಿಯ ಸಾಂಸ್ಕೃತಿಕ ಸಿದ್ಧಾಂತದಿಂದಲೇ ಭಾರತೀಯ ಸಂವಿಧಾನ ರೂಪುಗೊಂಡಿತ್ತು.
‘ಎಡಕೆನ್ನೆಗೆ ಹೊಡೆದರೆ ಬಲಕೆನ್ನೆ ತೋರಿಸು’ ಎಂಬ ಪದ ಅಹಿಂಸಾವಾದಿ ಗಾಂಧಿಯ ದೌರ್ಬಲ್ಯವಲ್ಲ. ವ್ಯಕ್ತಿಯ ವರ್ತನೆಯಲ್ಲಿ ಪರಿಣಾಮಕಾರಿ ಬದಲಾವಣೆಯನ್ನು ಅವರು ಬಯಸಿದ್ದರು. ಇದರಿಂದ ಕ್ರಾಂತಿಕಾರಿ ಬದಲಾವಣೆ ಸಾಧ್ಯ ಎಂಬ ನಂಬಿಕೆ ಅವರದ್ದು. ಇದನ್ನು ‘ಕ್ರಾಂತಿಕಾರಿ ಅಹಿಂಸೆ’ ಎಂದು ಕರೆಯಬಹುದು. ಒಮ್ಮೆ ಬರೋಡದಲ್ಲಿ ಹುಚ್ಚು ನಾಯಿಗಳ ಕಾಟ ಹೆಚ್ಚಾಯಿತು. ಆಗ ಅಲ್ಲಿನ ನಗರಸಭೆಯವರು ನಾಯಿಗಳನ್ನು ಕೊಲ್ಲುವ ಕಾರ್ಯವನ್ನು ಆರಂಭಿಸಿದರು. ಆಗ ಅಲ್ಲಿನ ಪ್ರಾಣಿದಯಾ ಸಂಘದವರು ಗಾಂಧೀಜಿಯವರಲ್ಲಿ ಮನವಿ ಸಲ್ಲಿಸಿ, ನಾಯಿಗಳನ್ನು ಕೊಲ್ಲದಂತೆ ಹೇಳಿಕೆ ನೀಡುವಂತೆ ವಿನಂತಿಸಿದರು. ಆದರೆ ಗಾಂಧೀಜಿಯವರು ಅವರ ಮನವಿಯನ್ನು ಪರಿಗಣಿಸದೆ-‘ಹುಚ್ಚು ಹಿಡಿದರೆ ನಾಯಿ ಮಾತ್ರವಲ್ಲ ಮನುಷ್ಯನೂ ಕೂಡ ಅಪಾಯಕಾರಿಯೇ’ ಎಂದರಂತೆ. ಅಂದರೆ ಅಹಿಂಸೆ ಒಂದು ಗೊಡ್ಡು ಆಚರಣೆಯಲ್ಲ. ಅದು ಪರಿವರ್ತನೆಯ ಕ್ರಾಂತಿಕಾರಕ ಅಸ್ತ್ರ.
ಗಾಂಧೀಜಿಯ ಗ್ರಾಮ ಸ್ವರಾಜ್ಯದ ಮೌಲ್ಯ ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಪ್ರಸ್ತುತವಾಗಿದೆ. ಒಂದು ಗ್ರಾಮವನ್ನು ಅಲ್ಲಿನ ಸಂಪನ್ಮೂಲಗಳಿಂದ ರಚನಾತ್ಮಕವಾಗಿ ರೂಪಿಸುವುದು ಗ್ರಾಮ ಸ್ವರಾಜ್ಯದ ಮುಖ್ಯ ತತ್ವ. ಆ ಮೂಲಕ ಅವರು ಒಂದು ಗ್ರಾಮದ ಸ್ವಾವಲಂಬನೆಯನ್ನು ಪ್ರತಿಪಾದಿಸಿದರು. ಗ್ರಾಮಗಳ ಸಂಪನ್ಮೂಲ ಮತ್ತು ದುಡಿಮೆಯ ಲಾಭವನ್ನು ಇನ್ಯಾರೋ ಪಡೆಯುವ ಶೋಷಣೆಯನ್ನು ತಪ್ಪಿಸಲು ಅವರು ಬಯಸಿದ್ದರು. ಭಾರತೀಯ ಸಂದರ್ಭದಲ್ಲಿ ಇದರಿಂದಲೇ ಪ್ರಗತಿ ಸಾಧ್ಯ ಎಂಬುದನ್ನು ಕಂಡುಕೊಂಡಿದ್ದರು. ಆದರೆ ಸ್ವಾತಂತ್ರ್ಯದ ಬಳಿಕ ನಮ್ಮ ಸರಕಾರಗಳ ನೀತಿ ನಿಯಮಗಳಲ್ಲಿ ಈ ವಿಚಾರಧಾರೆಯನ್ನು ಸಂಪೂರ್ಣ ನಿರ್ಲಕ್ಷಿಸಲಾಯಿತು. ಅದಕ್ಕಾಗಿ ನಾವೀಗ ಬೆಲೆ ತೆರಬೇಕಾಗಿದೆ.
ಪ್ರಯೋಗದ ಮೂಲಕ ಜೀವನದ ತತ್ವಗಳನ್ನು ಕಂಡುಕೊಳ್ಳಲು ಗಾಂಧೀಜಿ ಬಯಸಿದ್ದರು. ಬಡ ಸಿದ್ಧಾಂತಗಳಿಂದ ಜೀವನಾನುಭವಗಳಿಂದ ಸಿದ್ಧಾಂತಗಳನ್ನು ಕಂಡುಕೊಳ್ಳುವ ತತ್ವ ಅವರದ್ದಾಗಿತ್ತು. ಇದರಿಂದಲೇ ಅವರ ದೌರ್ಬಲ್ಯಗಳು ಕಣ್ಣಿಗೆ ರಾಚುವಂತೆ ಕಂಡು ಹೆಚ್ಚು ವಿಮರ್ಶೆಗೆ ಒಳಗಾಗಿದೆ. ಮೂರ್ಖರಿಗೆ ಗಾಂಧಿಯ ತೇಜೋವಧೆಗೆ ಅದು ಸಾಧನವಾಯಿತು. ಬಹುಮುಖಿ ಸಂಸ್ಕೃತಿಯ ಪ್ರತಿಪಾದನೆಯಿಂದ ಬೆಳೆಯುತ್ತಿರುವ ಗಾಂಧಿವಾದ ಏಕಮುಖ ಸಂಸ್ಕೃತಿಯ ಪ್ರತಿಪಾದಕರಾದ ಫ್ಯಾಸಿಸ್ಟರಿಗೆ ಸವಾಲಾಗಿತ್ತು. ಇದರಿಂದಲೇ ಗೋಡ್ಸೆ ಗುಂಡಿಗೆ ಗಾಂಧಿ ಬಲಿಯಾದರು.
ಕನಿಷ್ಠ ಅವರ ‘ಸತ್ಯದೊಂದಿಗೆ ನನ್ನ ಪ್ರಯೋಗ’ ಆತ್ಮಚರಿತ್ರೆಯನ್ನು ಓದಿದರೂ ನಮಗೆ ಗಾಂಧಿಯ ನಿಜದರ್ಶನವಾಗುತ್ತದೆ.
ಡಾ. ಗಣನಾಥ ಎಕ್ಕಾರು, ಜಾನಪದ ವಿದ್ವಾಂಸರು.
ಮೊ: 9964583433


