ಮುಂಬೈ: ಕೆನರಾ ಬ್ಯಾಂಕ್ ನಿಂದ ಸಾಲ ಪಡೆದು ಸುಮಾರು ರೂ. 55 ಕೋಟಿ ವಂಚಿಸಿದ ಪ್ರಕರಣದಲ್ಲಿ ವಜ್ರೋದ್ಯಮಿ ಮೆಹುಲ್ ಚೋಕ್ಸಿ ವಿರುದ್ಧ ಇಲ್ಲಿನ ನ್ಯಾಯಾಲಯವೊಂದು ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಬಹುಕೋಟಿ ವಂಚನೆ ಪ್ರಕರಣದಲ್ಲಿಯೂ ಚೋಕ್ಸಿ ಪ್ರಮುಖ ಆರೋಪಿ. ಈತನನ್ನು ಭಾರತ ಗಡೀಪಾರು ಮಾಡುವಂತೆ ಮನವಿ ಮಾಡಿದ ಬೆನ್ನಲ್ಲೇ, ಏಪ್ರಿಲ್ 12ರಂದು ಬೆಲ್ಜಿಯಂನಲ್ಲಿ ಬಂಧಿಸಲಾಗಿತ್ತು.
ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಆರ್.ಬಿ ಠಾಕೂರ್ ಅವರು ಜಾಮೀನು ರಹಿತ ವಾರಂಟ್ ಹೊರಡಿಸಿ ಜೂನ್ 2ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ.
ಕೆನರಾ ಬ್ಯಾಂಕ್ ರೂ. 30 ಕೋಟಿ ಹಾಗೂ ಬ್ಯಾಂಕ್ ಆಫ್ ಮಹಾರಾಷ್ಟ್ರ ರೂ. 25 ಕೋಟಿ ಸಾಲ ನೀಡಿದ್ದವು. ಚಿನ್ನ ಮತ್ತು ವಜ್ರ ಖಚಿತ ಆಭರಣಗಳ ತಯಾರಿಕೆ ಮತ್ತು ಮಾರಾಟಕ್ಕಾಗಿ ಸಾಲವನ್ನು ನೀಡಲಾಗಿತ್ತು, ಆದರೆ ಕಂಪನಿಯು ಅದನ್ನು ಆ ಉದ್ದೇಶಗಳಿಗಾಗಿ ಬಳಸಿಕೊಂಡಿಲ್ಲ ಎಂದು ಸಿಬಿಐ ತಿಳಿಸಿದೆ. ಕಂಪನಿಯು ಸಾಲವನ್ನು ಮರುಪಾವತಿ ಮಾಡದಿದ್ದರಿಂದ ರೂ. 55.27 ಕೋಟಿ ನಷ್ಟ ಉಂಟಾಗಿದೆ ಎಂದು ಎರಡೂ ಬ್ಯಾಂಕ್ ಗಳು ತಿಳಿಸಿವೆ.