ಬೆಂಗಳೂರು: ಪತ್ರಿಕಾರಂಗ ಎಂಬುದು ಸಮಾಜದ ನಾಲ್ಕನೇ ಅಂಗವಾಗಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಷ್ಟೇ ಪತ್ರಿಕಾರಂಗವೂ ಪ್ರಮುಖವಾಗಿದೆ. ಸ್ವಸ್ಥ ಸಮಾಜ ಕಟ್ಟಲು ದಿನ ಪತ್ರಿಕೆಗಳು ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳು ಹಗಲಿರುಳು ಕೆಲಸ ಮಾಡುತ್ತಿವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನ ಜೆ.ಎನ್.ಟಾಟಾ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ ಕರ್ನಾಟಕ ಮಾಧ್ಯಮ ಅಕಾಡೆಮಿಯ 2023 ಹಾಗೂ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ಈ ರಂಗದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ಎಲ್ಲಾ ಪತ್ರಕರ್ತ ಮಿತ್ರರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ರಾಜಕಾರಣ ಮತ್ತು ಪತ್ರಿಕಾ ರಂಗ ಬೇರ್ಪಡಿಸಲು ಸಾಧ್ಯವಿಲ್ಲ. ಪತ್ರಿಕೆ ಇಲ್ಲದೆ ರಾಜಕಾರಣ ನಡೆಯಲ್ಲ. ಸರ್ಕಾರ ನಿರ್ಣಯಗಳನ್ನು ತೆಗೆದುಕೊಂಡರೂ ಅದನ್ನು ಜನರಿಗೆ ಮುಟ್ಟಿಸಲು ಪತ್ರಿಕೆಗಳು ಬೇಕು. ಹಾಗಾಗಿ ಜನ ಸಾಮಾನ್ಯರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಾಮಾಜಿಕ ವರದಿ ಬಿತ್ತರಿಸುವ ಮೂಲಕ ಪತ್ರಿಕೆಗಳು ಸಾಮಾಜಿಕ ಹೊಣೆಗಾರಿಕೆ ನಿರ್ವಹಿಸುತ್ತಿವೆ. ಅಲ್ಲದೆ ಸಮಾಜದ ಬದಲಾವಣೆಯಲ್ಲಿ, ಜ್ಞಾನ ಹೆಚ್ಚಿಸುವಲ್ಲಿ, ಭಾಷೆ ಬೆಳವಣಿಗೆಯಲ್ಲಿ ಪತ್ರಿಕೆಗಳು ಮಹತ್ತರ ಪಾತ್ರವನ್ನು ವಹಿಸುತ್ತವೆ. ಪತ್ರಕರ್ತರನ್ನು ಗೌರವಿಸುತ್ತಿರುವ ಕರ್ನಾಟಕ ಮಾಧ್ಯಮ ಅಕಾಡೆಮಿಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.
ಪತ್ರಿಕೋಧ್ಯಮ ಜನರ ಪ್ರಾಣವಾಯು: ಕೆ.ವಿ.ಪ್ರಭಾಕರ್:
ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಪತ್ರಿಕೋಧ್ಯಮ ಜನರ ಪ್ರಾಣವಾಯು ಎನ್ನುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತು ಮತ್ತು ಮೌಲ್ಯವನ್ನು ಕಾಪಾಡಲು ಮತ್ತು ವಿಸ್ತರಿಸಲು ಪೂರಕವಾದ ಕಾರ್ಯಕ್ರಮಗಳನ್ನು ಮಾಧ್ಯಮ ಅಕಾಡೆಮಿ ರೂಪಿಸಬೇಕು ಎಂದರು.
ಜನರ, ಸಮಾಜದ ಪ್ರಾಣವಾಯು ಆಗಿರುವ ಪತ್ರಿಕಾ ವೃತ್ತಿಯ ಉಸಿರನ್ನು ಕಾಪಾಡಲು ನಮ್ಮ ಸಂವಿಧಾನ ಇದೆ. ನಮ್ಮ ಸಂವಿಧಾನ ಕತೃ ಆದ ಅಂಬೇಡ್ಕರ್ ಅವರೇ ಹೇಳಿರುವ ರೀತಿ ಪತ್ರಿಕಾ ವೃತ್ತಿ ನಿಜವಾದ ಪ್ರಾಣವಾಯು ಆಗಿ ಉಳಿಯಬೇಕು. ಈ ದಿಕ್ಕಿನಲ್ಲಿ ನಮ್ಮ ಮಾಧ್ಯಮ ಅಕಾಡೆಮಿ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಕರೆ ನೀಡಿದರು.
ಅಚ್ಚುಮೊಳೆ ಅವಧಿಯಿಂದ ಕೃತಕ ಬುದ್ದಿಮತ್ತೆವರೆಗೂ ಪತ್ರಿಕಾ ವೃತ್ತಿ ಬೆಳೆದಿದೆ. ತಂತ್ರಜ್ಞಾನದಲ್ಲಿ ನಮ್ಮ ವೃತ್ತಿ ಎಷ್ಟೇ ಮುಂದುವರೆದಿದ್ದರೂ ಸತ್ಯ ಮತ್ತು ನಿಷ್ಠುರ ಮೌಲ್ಯಗಳು ಮಾತ್ರ ಬದಲಾಗಬಾರದು. ಆದರೆ ಇಂದು ಊಹಾ ಪತ್ರಿಕೋದ್ಯಮ, ಕಾಲ್ಪನಿಕ ಪತ್ರಿಕೋದ್ಯಮ ಮತ್ತು ಸುಳ್ಳು ಸುದ್ದಿಗಳ ಹಾವಳಿ ಇಂದು ಹೆಚ್ಚಾಗಿದೆ. ಈ ವಿಚಾರದಲ್ಲಿ ನ್ಯೂಸ್ ರೂಮ್ ಗಳು ಬಹಳ ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವ ಅಗತ್ಯವಿದೆ ಎಂದರು.
ಎರಡು ವರ್ಷಗಳಿಂದ ಪ್ರಶಸ್ತಿ ಗಳನ್ನು ನೀಡಿರಲಿಲ್ಲ. ನಮ್ಮ ಇಲಾಖೆಯ ನಾನಾ ವಿಭಾಗಗಳ ಪ್ರಶಸ್ತಿಗಳು ಐದು ವರ್ಷಗಳಿಂದ ಬಾಕಿ ಇದ್ದವು. ನಮ್ಮ ಅವಧಿಯಲ್ಲಿ ಎಲ್ಲವನ್ನೂ ವಿತರಿಸುವ ಕೆಲಸ ಮಾಡಿದ್ದೇವೆ ಎಂದರು.
ಪತ್ರಕರ್ತ ಕುಟುಂಬಗಳ ಆರೋಗ್ಯ, ಆರೋಗ್ಯ ವಿಮೆ, ಉಚಿತ ಬಸ್ ಪಾಸ್, ನಿವೃತ್ತಿ ವೇತನ ಹೆಚ್ಚಳ ಸೇರಿದಂತೆ ಹತ್ತಾರು ವರ್ಷಗಳಿಂದ ಬಾಕಿ ಇದ್ದ ನಮ್ಮ ಸಮುದಾಯದ ಬೇಡಿಕೆಗಳೆಲ್ಲವನ್ನೂ ಈಡೇರಿಸುತ್ತಿದ್ದೇವೆ ಎಂದು ವಿವರಿಸಿದರು.