ಖಾಸಗಿ ಬಸ್ನಲ್ಲಿ ಯಾವುದೇ ದಾಖಲೆಗಳಿಲ್ಲದೇ ಸಾಗಾಟ ಮಾಡುತ್ತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಸಿಸಿಬಿ ಮತ್ತು ಹುಬ್ಬಳ್ಳಿಯ ವಿದ್ಯಾಗಿರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಲಭ್ಯವಾದ ಖಚಿತ ಮಾಹಿತಿ ಮೇರೆಗೆ ದಿ. 16ರಂದು ಧಾರವಾಡ ಎಸ್.ಡಿ.ಎಂ. ಕಾಲೇಜ್ ಬಳಿ ಖಾಸಗಿ ಬಸ್ ಪರಿಶೀಲನೆ ಮಾಡಲಾಯಿತು. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಅಭಿಷೇಕ್ ಎಂಬಾತ ಈ ಆಭರಣಗಳನ್ನು ಸಾಗಾಣೆ ಮಾಡುತ್ತಿದ್ದ. ಈತನಿಂದ 1 ಕೆಜಿ. 101 ಗ್ರಾಂ ಚಿನ್ನದ ಆಭರಣಗಳು ಹಾಗೂ 1 ಕೆ.ಜಿ. 463 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹುಬ್ಬಳ್ಳಿ ನಗರದ ಡಿಸಿಪಿ ಮಹಾನಿಂಗ ನಂದಗಾಂವಿ ತಿಳಿಸಿದ್ದಾರೆ.
ಮುಂಬಯಿ ನಗರದಿಂದ ಹುಬ್ಬಳ್ಳಿಯ ಕೆಲವು ಚಿನ್ನಾಭರಣ ಅಂಗಡಿಗಳಿಗೆ ಬಿಲ್ ಮತ್ತು ಜಿಎಸ್ಟಿ ಇಲ್ಲದೆ ಆಭರಣಗಳನ್ನು ತಯಾರಿಸಿ ಕೊಡಲಾಗುತ್ತಿತ್ತು. ಇದೇ ರೀತಿ ಮುಂಬಯಿಯಿಂದ ಹುಬ್ಬಳ್ಳಿಗೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವಾಗ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಧಾರವಾಡ ವಿದ್ಯಾಗಿರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.