ಕಾರಿನ ಮೇಲೆ ಬಿದ್ದ ಟಿಪ್ಪರ್;‌ ಒಂದೇ ಕುಟುಂಬದ 9 ಮಂದಿ ದುರ್ಮರಣ

Most read

ಭೋಪಾಲ್: ಸಿಮೆಂಟ್ ಸಾಗಿಸಿತ್ತಿದ್ದ ಟಿಪ್ಪರ್ ಕಾರಿನ ಮೇಲೆ ಮಗುಚಿ ಬಿದ್ದು, ಒಂದೇ ಕುಟುಂಬದ 9 ಮಂದಿ ಮೃತಪಟ್ಟಿರುವ ಭೀಕರ ಅಪಘಾತ ಮಧ್ಯಪ್ರದೇಶದ ಝಬುವಾ ಜಿಲ್ಲೆಯಲ್ಲಿ ನಡೆದಿದೆ.
ಮೇಘನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಂಜೆಲಿ ರೈಲ್ವೇ ನಿಲ್ದಾಣದ ಸಮೀಪ ಬೆಳಗಿನ ಜಾವ 2:30ರ ವೇಳೆಗೆ ಈ ಅಪಘಾತ ಸಂಭವಿಸಿದೆ. ಮುಹುದಾ ಗ್ರಾಮದ ಒಂದೇ ಕುಟುಂಬದವರಾದ ಮೃತರು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಿಂದಿರುಗುತ್ತಿದ್ದಾಗ ಈ ದುರಂತ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂಜೆಲಿ ರೈಲ್ವೆ ಕ್ರಾಸಿಂಗ್ ಬಳಿ ತಾತ್ಕಾಲಿಕ ರಸ್ತೆಯ ಮೂಲಕ ನಿರ್ಮಾಣ ಹಂತದಲ್ಲಿರುವ ರೈಲು ಮೇಲ್ಸೇತುವೆಯ ರಸ್ತೆಗೆ ತಿರುಗುತ್ತಿದ್ದಾಗ ಟಿಪ್ಪರ್ ನಿಯಂತ್ರಣ ತಪ್ಪಿ ಕಾರಿನ ಮೇಲೆ ಬಿದ್ದಿದೆ. ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ 9 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮೇಘನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.

More articles

Latest article