ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಜನಪ್ರಿಯ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ವಿವಾಹ ಗುರುವಾರ ಕನಕಪುರ ರಸ್ತೆಯ ಖಾಸಗಿ ರೆಸಾರ್ಟ್ನಲ್ಲಿ ನೆರವೇರಿತು. ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ವಿವಾಹ ನಡೆಯಿತು. ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ, ಕೇಂದ್ರ ಸಚಿವ ವಿ. ಸೋಮಣ್ಣ ಸೇರಿದಂತೆ ಅನೇಕ ಮುಖಂಡರು ವಿವಾಹ ಸಮಾರಂಭಕ್ಕೆ ಹಾಜರಾಗಿ ವಧೂವರರಿಗೆ ಶುಭ ಹಾರೈಸಿದರು.
ಶಿವಶ್ರೀ ಸ್ಕಂದಪ್ರಸಾದ್ ಮತ್ತು ತೇಜಸ್ವಿ ಸೂರ್ಯ ಸರಳ ಮತ್ತು ಸಾಂಪ್ರದಾಯಿಕ ಉಡುಪುಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದರು. ಮಾರ್ಚ್ 9 ರಂದು ಬೆಂಗಳೂರಿನ ಗಾಯತ್ರಿ ವಿಹಾರ್ ಮೈದಾನದಲ್ಲಿ ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ರ ವರೆಗೆ ಆರತಕ್ಷತೆ ನಡೆಯಲಿದೆ.
ಶಿವಶ್ರೀ ಸ್ಕಂದಪ್ರಸಾದ್ ಪ್ರಸಿದ್ಧ ಕರ್ನಾಟಕ ಸಂಗೀತ ಗಾಯಕಿ ಮತ್ತು ಚೆನ್ನೈನ ಭರತನಾಟ್ಯಂ ಕಲಾವಿದೆ. 1996 ರ ಆಗಸ್ಟ್ 1 ರಂದು ಜನಿಸಿದ ಅವರು, ಮೃದಂಗ ಕಲಾವಿದ ಸೀರ್ಕಾಳಿ ಜೆ ಸ್ಕಂದಪ್ರಸಾದ್ ಅವರ ಪುತ್ರಿ. ಅವರು ಶಾಸ್ತ್ರ ವಿಶ್ವವಿದ್ಯಾಲಯದಿಂದ ಬಯೋ ಎಂಜಿನಿಯರಿಂಗ್ನಲ್ಲಿ ಪದವಿಯನ್ನೂ ಗಳಿಸಿದ್ದಾರೆ. ಅಲ್ಲದೆ, ಪಿವಿಎ ಆಯುರ್ವೇದ ಆಸ್ಪತ್ರೆಯಿಂದ ಆಯುರ್ವೇದ ಕಾಸ್ಮೆಟಾಲಜಿಯಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಮದ್ರಾಸ್ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಸಹ ಪಡೆದಿದ್ದಾರೆ.