ಆವತ್ತು ಇಡೀ ಚಿತ್ರಮಂದಿರನೇ ಗೋಳೋ ಅತ್ತಿತ್ತು. ಆ ದಿನ, ಅವಳು ಒಂದು ಗಿರಾಕಿ ಮುಗಿಸಿ ಬಂದು ಆ ಗೋಡೆಯ ಹಿಂದೆ ನಿಂತಳು. ಅಷ್ಟು ಹೊತ್ತಿಗೆ ಮೀನ ಕೂಡ ಗಿರಾಕಿ ಮುಗಿಸಿ ಬಂದು ಇವಳ ಜೊತೆ ನಿಂತು ಬೀಡಿಗೆ ಕೈ ಒಡ್ಡಿದಳು. ಆಗ ಇವಳು “ಇಪ್ಪತ್ತೇಳನೇ ಬೀಡಿ ಸಾಲ ಕೊಡ್ತಿರೋದು ನೆನಪಿರಲಿ” ಅಂತ ಛೇಡಿಸಿದಳು ಅದಕ್ಕೆ ಮೀನಾ “ಹೋಗೆಲೆ, ಇಪ್ಪತ್ತನಾಕನೇದು ಇಪ್ಪತ್ತೇಳಲ್ಲ” ಅಂದ್ಲು. ಅವಳ ಜೊತೆ ಹುಸಿ ಜಗಳ ಆಡ್ತಾ ಒಂದು ಬೀಡಿ ಬಾಯಿಗಿಟ್ಟಳು….ಹಾಗೇ ಒಂದು ಫೋನ್ ಬಂತು. ಇವಳು ಈ ಕಡೆಯಿಂದ ಒಂದೂ ಮಾತನಾಡದೆ ಬೀಡಿಯ ಮೇಲೆ ಬೀಡಿ ಹತ್ತಿಸಿ ಹತ್ತಿಸಿ ಮತ್ತೆ ಮತ್ತೆ ಕೇಳುತ್ತಾ “ಇನ್ನೊಂದ್ ಸರ್ತಿ ಹೇಳಿ, ಇನ್ನೊಂದ್ ಸರ್ತಿ ಹೇಳಿ” ಅಂತ ಅಂದಾಗ ಕೈಯಿಂದ ಫೋನ್ ಕೆಳಗೆ ಬಿತ್ತು. ಮೀನ “ಏನಾಯ್ತು ಹೇಳೇ ಏನಾಯ್ತು ಹೇಳೇ ಅಂತ ಕೇಳ್ತಾನೇ ಇದ್ಲು. ಇವಳು ಕಲ್ಲಿನಂತೆ ನಿಂತಿದ್ಲು ಬಾಯಿಂದ ಮಾತೇ ಹೊರಡದಂತಾಯಿತು ಅವಳಿಗೆ ….. ಕಡೆಗೆ ಆ ಗೋಡೆಯ ಮೇಲೆ ಇರುವ ಸಾಹಿತ್ಯದ ಮಧ್ಯೆ ತಾನು ಕಲ್ಲು ತಗೊಂಡು ಬರೆದಳು ….. “ತಾಯಿ ಸೂಳೆ – ಮಗಳು ಆತ್ಮಹತ್ಯೆ”.
ಮೀನಾ ಅದನ್ನು ಓದಿ ಜೋರಾಗಿ “ಚಾಚಾ ಬೇಗ ಬಾ” ಅಂತ ಕೂಗ್ತಾ ಅವಳನ್ನು ಹಿಡಿದಪ್ಪಿ ಅಳಕ್ಕೆ ಶುರು ಮಾಡಿದಳು. ಆದರೆ ಇವಳು ಕಲ್ಲಿನಂತೆ ನಿಂತವಳು ಅಲುಗಾಡಲೇ ಇಲ್ಲ. ಅವಳ ನೋಟ ಎಲ್ಲೋ ಕಳೆದು ಹೋಗಿತ್ತು. ಚಾಚಾ ಮತ್ತು ಮಿಯಾನ್ ಓಡಿ ಬಂದ್ರು. ಅರ್ಧಂಬರ್ದ ವಿಷಯ ಮಾತ್ರ ಗೊತ್ತಾಗಿತ್ತು. ಅವಳ ಮೊಬೈಲು ಮತ್ತೆ ರಿಂಗುಣಿಸ ತೊಡಗಿತು. ಆಗ ಮೀನ ಫೋನ್ ತಗೊಂಡು ಆಕಡೆಯವರು ಹೇಳಿದ್ದನ್ನು ಕೇಳಿಸಿಕೊಂಡು ಜೋರಾಗಿ ಅಳ್ತಾ ಹೇಳಿದ್ಲು “ರಮಾ ಮನೇಲಿ ನೇಣಾಕ್ಕಂಡೌಳೆ”. ಆಗ ಚಾಚಾ, ಮಿಯಾನ್ ಮತ್ತು ಇತರರು ಹೌಹಾರಿ ನಿಂತರು. ಅವಳು ಹಾಗೇ ನಿಂತಿದ್ದಳು. ಕಣ್ಣೀರಿಲ್ಲ. ಮೀಯಾನ್ ಕಾರಲ್ಲಿ ಎಲ್ಲರೂ ಅವಳ ಮನೆಗೆ ಹೊರಟರು. ದಾರಿ ಉದ್ದಕ್ಕೂ ಮೀನ ಅವಳನ್ನು ಗಟ್ಟಿಯಾಗಿ ಅಪ್ಪಿ ಹಿಡಿದಿದ್ದಳು. ಮನೆಯ ಹತ್ರ ಜನ ತುಂಬಿದ್ದರು. ಹೆಣ ಇಳಿಸಿದ್ದರು.
ಭಾಗ 1 ಓದಿದ್ದೀರಾ ? ಮನೋರಮ ಎಂಬ ಥಿಯೇಟರಿನ ಒಡಲ ಕಥೆಗಳು
ಅವಳನ್ನು ಹೂಳಲು ಹೋದಾಗ್ಲೂ ಇವಳು ಅತ್ತಿರಲಿಲ್ಲ. ಈಗ ಮೂರ್ ತಿಂಗ್ಳಾಗ್ತಾ ಇದೆ. ಇವಳಿಗೆ ರಮಾ ಇಲ್ಲದ ಬದುಕು ಸಾವಿಗೆ ಸಮಾನವಾಗಿದೆ. ತಾನೇ ಸಾವನ್ನ ಅಪ್ಪೋದು ಪಾಪ ಅಂತ ಚಾಚಾ ಯಾವಾಗಲೂ ಹೇಳಿ, ತಾವೆಲ್ಲಾ ಇದ್ದೀವಿ ಅವಳಿಗೆ ಅಂತ ಸಮಾಧಾನ ಮಾಡ್ತಿದ್ದ. ಮೀನ ಇವಳ ಜೊತೆ ಕೋಳಿ ಜಗಳವಾಡಿದ್ರೂ ಇವಳು ಸಪ್ಪಗಾದಾಗೆಲ್ಲಾ ಅವಳು ಇವಳನ್ನು ಬಿಟ್ಟು ಹೋಗ್ತಿರ್ಲಿಲ್ಲ. ಅಷ್ಟರಲ್ಲಿ ಗೇಟ್ ಬಾಗಿಲ ಹತ್ರ ಒಂದು ಗಿರಾಕಿ ಕಂಡಳು. ತುಂಬಾ ಸಾಧು ಮುಖ, ಕೈಯಲ್ಲೊಂದು ಚೀಲ, ಅದರಲ್ಲೊಂದು ಪುಸ್ತಕದ ತರ ಇತ್ತು. ಅಬ್ಬ ಒಳ್ಳೆ ಗಿರಾಕಿ!!! ಅಂತ ಒಲ್ಲದ ಮನಸ್ಸು ಮತ್ತೆ ಕೆಲಸಕ್ಕೆ ಎಳೆಯಿತು. “ಏನ್ ಮಾಡೋದು ಬದುಕಬೇಕಲ್ಲ, ಫೈನಾನ್ಸ್ ಕಟ್ಬೇಕು, ಬ್ಲೇಡಿಗೆ ಕೊಡ್ಬೇಕು, ಮನೆ ಬಾಡ್ಗೆ, ಊಟ…. ಏನೆಲ್ಲ” ಅಂತ ಯೋಚನೆ ಮಾಡ್ಕೊಂಡು ಕಣ್ಣೊರೆಸಿಕೊಂಡು, ಆ ಗಿರಾಕಿಯ ಹತ್ರ ಹೋಗಿ ನಲಿಯಲು ಶುರು ಮಾಡಿ ಪಿಕಪ್ ಮಾಡಲು ಶ್ರಮಿಸಿದಳು.
ಆ ಗಿರಾಕಿಗೆ ಇಪ್ಪತೈದು ವಯಸ್ಸಿರಬಹುದು. ತನಗಿಂತ ಎಷ್ಟು ಚಿಕ್ಕವನು ಅಂತ ಮನಸ್ಸಿನಲ್ಲಿ ಯೋಚಿಸುತ್ತಾ ಛೇ! ಬೇಡಾ ಅಂತ ಹಾಗೇ ನಿಂತಿದ್ಲು. ಅಷ್ಟೊತ್ಗೆ ಮೀನ ಆ ಕಡೆಯಿಂದ ಬಂದು ಗಿರಾಕಿಯನ್ನು ನೋಡಿ “ಸರ್ ಟೈಮೆಷ್ಟು” ಎಂದಳು. ಮೀನ ಗಿರಾಕಿನ ಮಾಮೂಲಿ ಪಿಕಪ್ ಮಾಡೋ ಲೈನ್ ಹೇಳಿದಳು. ಆ ಗಿರಾಕಿ ಅವಳಿಗೆ ಕಾಳು ಹಾಕದೆ ಹಾಗೇ ನಿಂತಿದ್ದ. ಹಾಗಂತ ಇವಳಿಗೂ ಕಾಳು ಹಾಕದೇ ಸುತ್ತಾ ತಿರುಗಿ ಆ ಕಡೆ ಈ ಕಡೆ ನೋಡುತ್ತಿದ್ದ. ಇವಳಿಗೆ ಆ ಹುಡುಗ ಏನೋ ಹುಡುಕುತ್ತಿರುವ ಹಾಗೆ ಕಂಡಿತು. ಅಷ್ಟೊತ್ತಿಗೆ ಮಧ್ಯಾಹ್ನ 2 ಗಂಟೆ ಆಗಿರಬಹುದು. ಆಗ ಅವಳು ಮಾಮೂಲಿನಂತೆ ತನ್ನ ಡಬ್ಬದಲ್ಲಿ ತಂದ ಅವಲಕ್ಕಿಯನ್ನು ತಿನ್ನಲು, ಥಿಯೆಟರ್ ಪಕ್ಕದ ಸೈಯದ್ ಚಾಚಾನ ಅಂಗಡಿಗೆ ಹೋದ್ಲು.
ಭಾಗ 2 ಓದಿದ್ದೀರಾ? ಮನೋರಮ ಥಿಯೇಟರಿನ ಒಡಲ ಕಥೆಗಳು- 2
ಸೈಯದ್ ಚಾಚಾ ಅವಳನ್ನು ಮಾತನಾಡಿಸುತ್ತಾ ಅವಳ ಮಾಮೂಲು ಚಹ ಕೊಟ್ಟ. ಇಬ್ಬರೂ ಮಾತಾಡ್ತಾ ಇವಳು ಅವಲಕ್ಕಿ ಚಾಚಾಗೂ ಕೊಟ್ಟು ಚಹವನ್ನು ಏರಿಸುತ್ತಾ ಅತ್ತ ಕಣ್ಣಾಡಿಸಿದಾಗ…. ಆ ಹುಡುಗ ಕಂಡ. ಏನೋ ಹುಡುಕುತ್ತಿದ್ದ ಆ ಥಿಯೆಟರ್ ನಲ್ಲಿ. ಆ ಹುಡುಗ ಆ ಗೋಡೆಯ ಹತ್ತಿರ ಹೋಗಿ ಸ್ವಲ್ಪ ಹೊತ್ತಾಗಿತ್ತು.
ಚಾಚಾ ಮತ್ತು ಇವಳು ನೋಡುತ್ತಾ ನೋಡುತ್ತಾ ಮೆಲ್ಲಗೆ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. ಸ್ವಲ್ಪ ಆತಂಕ ಆಯ್ತು. ಚಾಚಾ ತಮ್ಮ ಕನ್ನಡಕ ಹಾಕ್ಕೊಂಡು “ಅವನು ಅಲ್ ಯಾಕ್ ಹೋಗ್ತಿದ್ದಾನೆ” ಅಂತ ನೋಡಿದ್ರು. ಅಷ್ಟು ಹೊತ್ತಿಗೆ ಮಿಯಾನ್ ಅಲ್ಲಿ ಬಂದು “ಆ ಪೀಸು ಗಿರಾಕಿ ನೈಯ್, ಆದ್ರೆ ಮಾಲೂಮೀಚ್ ನೈ ಪಡ್ತಾ”. ಮೂವರಿಗೂ ಏನನ್ನೂ ಊಹಿಸಲಾಗಲಿಲ್ಲ. ಆ ಹುಡುಗ ಹಾಗೇ ಗೋಡೆಯ ಹತ್ರ ಏನೋ ನೋಡ್ತಾ ಇರುವಾಗ ಚಾಚಾ ಅಂಗಡಿ ಬಿಟ್ಟು ಹೋಗಿ ಅವನ ಹತ್ತಿರ ಮಾತನಾಡ ತೊಡಗಿದರು. ಅಷ್ಟೊತ್ತಿಗೆ ಆ ಕಡೆಯಿಂದ ಮೀನಾನೂ ಬಂದ್ಲು. ಅವಳು ಮೀಯಾನ ಕೇಳಿದಳು “ಏಯ್ ಸೂಳೆ, ನಿನ್ ಪೀಸಾ?” ಅಂತ. ಆಗ ಮಿಯಾನ್ “ನೈ ಬಾ ಮೆರಾ ಪೀಸ್ ನೈಯಿ,” ಅಂದ. ಚಾಚಾ ಅಂಗಡಿಯ ಹತ್ರ ಬಂದ ಕೂಡಲೇ ಹೇಳಿದರು “ನೀವು ಹುಡುಕುತ್ತಿರುವ ಆ ಅಮ್ಮ ಇವರೇ!”. ಇವಳು ತಬ್ಬಿಬ್ಬಾಗಿ ಎಲ್ ನೋಡ್ಬೇಕು ಅಂತಾನೇ ಗೊತ್ತಾಗ್ದೇ … ತಲೆ ಬಗ್ಗಿಸಿದ್ಲು.
ಕಡೆಗೂ ಚಾಚಾನೇ ಮೌನ ಮುರಿದು “ಸುಜಿ, ಈ ಹುಡುಗ ನಿನ್ನ ಮಗಳು ರಮಾಳ ದೋಸ್ತ್. ಇವರು ನಿನ್ನ ಹುಡುಕಿಕೊಂಡು ಬಂದಿದಾರೆ ಬೇಟ” ಅಂತ ಹೇಳಿದ್ರು. ‘ಸುಜಿ’, ಅವಳ ಹೆಸರು ಕೇಳಿ ಸುಮಾರು ತಿಂಗಳುಗಳೇ ಆಗಿದ್ವು. ರಮಾ ಬಾಯಿ ತುಂಬಾ “ಸುಜಿಮಾ, ಸುಜಿ” ಅಂತ ಕರೀತಿದ್ಲು. ಅವಳ ಕಣ್ಣಲ್ಲಿ ಮತ್ತೆ ನೀರು. ಆ ಹುಡುಗ ತನ್ನ ಚೀಲದಿಂದ ಆ ಪುಸ್ತಕ ತೆಗೆದ. ಸುಜಿಗೆ ಪರಿಚಯದ ಪುಸ್ತಕ. ಚಾಚಾ ಆ ಪುಸ್ತಕವನ್ನು ಸುಜಿ ಕೈಲಿಟ್ಟರು. ಸುಜಿ ಕೈ ಥರಥರ ನಡುಗುತ್ತಿತ್ತು… ಆ ಪುಸ್ತಕ ತನ್ನಿಂದ ತಾನೇ ಆ ಹಾಳೆ ತೆಗೆಯಿತು. ಆ ಗೋಡೆಯ ಫೋಟೊ ತರದ ಚಿತ್ರ ಇತ್ತು. ಅದು ರಮಾ ಬರೆಯುತ್ತಿದ್ದ ಚಿತ್ರಗಳು. ರಮಾ ಎಲ್ಲಿದ್ದರೂ ಆ ಜಾಗದ ಚಿತ್ರ ತನ್ನ ಪುಸ್ತಕದಲ್ಲಿ ಬರೆದು ಅಲ್ಲಿಯ ಪುರಾವೆ ನೀಡುತ್ತಿದ್ದಳು. ರಮಾ ಬಿಡಿಸಿದ ಆ ಗೋಡೆಯ ಚಿತ್ರದಲ್ಲಿ ಸುಜಿಯ ಫೋನ್ ನಂಬರ್, ಸುಜಿಯ ಹೆಸರು ಎದ್ದು ಕಾಣುತ್ತಿದ್ದು ರಮಾಗೆ ತನ್ನ ತಾಯಿ ಮಾಡುವ ಕೆಲಸದ ಪುರಾವೆ ಅದಾಗಿತ್ತು.
ಭಾಗ 3 ಓದಿದ್ದೀರಾ? ಮನೋರಮ ಥಿಯೇಟರ್ ನ ಒಡಲ ಕಥೆಗಳು – ಭಾಗ 3
ಆದ್ರೆ, ಆ ಪುರಾವೆಯಲ್ಲಿ ತನ್ನ ತಾಯಿ ಬರೆದಿದ್ದನ್ನು ಅಂದು ನೋಡಿದ ಆ ಹುಡುಗ ಸ್ಯಾಮ್ ಆ ಗೋಡೆಯ ಮುಂದೆ ಕೂತು ಸುಮಾರು ಹೊತ್ತು ಅಳುತ್ತಿದ್ದ. “ತಾಯಿ ಸೂಳೆ – ಮಗಳು ಆತ್ಮಹತ್ಯೆ” -ಅದನ್ನು ನೋಡಿ ಸ್ಯಾಮ್ ಬಿಕ್ಕಿ ಬಿಕ್ಕಿ ಅತ್ತಿದ್ದ. “ರಮಾ ಸ್ವಲ್ಪ ಯೋಚ್ನೆ ಮಾಡಿದ್ರೆ ಇಂದು ನಮ ಜೊತೆ ಇರ್ತಿದ್ಲು” ಅಂತ ಜೋರಾಗಿ ಬಿಕ್ಕಿದ ಸ್ಯಾಮ್. ಮಿಯಾನ್ ಸ್ಯಾಮ್ ನ್ನು ಅಪ್ಪಿ ಹಿಡಿದು ಕೊಂಡಿದ್ದ. ಈ ಕಡೆ ಸುಜಿ ಕಣ್ಣಲ್ಲಿ ನೀರು ಬರುತ್ತಲೇ ಇತ್ತು. ಸುಜಿ ಅಳುತ್ತಿದ್ದುದು ಮೀನಾಗೆ ಅರ್ಥ ಆಯ್ತು. ಮೀನ ಸುಜಿಯ ಭುಜದ ಮೇಲೆ ಕೈ ಹಾಕಿ ಸಮಾಧಾನ ಮಾಡ್ತಾ ಮೆಲ್ಲಗೆ ಕಿವಿಯಲ್ಲಿ ಹೇಳಿದಳು, “ಗೊತ್ತಾಗ್ದೆ ಮಾಡಿದ್ದ, ಅವನು ತಪ್ಪು ತಿಳಿಯಲ್ಲ, ಡೋಂಟ್ ವರಿ”. ಸುಜಿ ಸುಮ್ಮನಿರಲಾಗದೆ ಸ್ಯಾಮ್ ಮುಖ ನೋಡಿ ಏನೋ ಹೇಳ ಹೊರಟಳು ಆಗ ಸ್ಯಾಮ್ “ಅಮ್ಮ, ಅದು ಬಿಡಿ, ನಿಮ್ಮ ಕೆಲಸ, ಏನೂ ಮಾಡಕ್ಕಾಗಲ್ಲ. ರಮಾ ನಿಮ್ಮನ್ನ ಅರ್ಥ ಮಾಡಿಕೊಂಡಿದ್ದರೆ…. ನಾನು ಅವಳಿಗೆಷ್ಟು ತಿಳಿಸಿ ಹೇಳಿದ್ರೂ ರಚ್ಚೆ ಹಿಡಿಯುತ್ತಿದ್ದಳು. ನಾನು ಅವಳು ಎಷ್ಟೆಲ್ಲಾ ಕನಸು ಕಂಡಿದ್ವಿ ಬದುಕಲು. ಅಮ್ಮನೂ ಸೇರಿ ಅಂದ ಕೂಡಲೆ ಅವಳು ತೀರಾ ರೊಚ್ಚಿಗೇಳುತ್ತಿದ್ದಳು” ಅಂತ ತಿರ್ಗಾ ಜೋರಾಗಿ ಮಿಯಾನ ಹಿಡಿದು ಅತ್ತ. ಮಿಯಾನ್ ಅವನಿಗೆ ಸಮಾಧಾನ ಮಾಡ್ತಿದ್ದ. ಚಾಚಾ ಅವನಿಗೆ ನೀರು, ಚಹ ಕೊಟ್ಟು ತಿನ್ನಲು ಬನ್ ಕೊಟ್ಟ. ಆ ಐದೂ ಜನ ಸ್ವಲ್ಪ ಸಮಾಧಾನಗೊಂಡರು.
ಸ್ಯಾಮ್ ಸಮಾಧಾನವಾಗಿ ಮಾತಾಡಿ ಎದ್ದು ಹೊರಡಲು ನಿಂತಾಗ ಚಾಚಾ ಹೇಳಿದರು “ಮಗೂ ಆ ಲಡ್ಕಿ ಹೆಸ್ರು ರಮಾ ಅಲ್ಲ. ಆ ಬೇಟ ಬಂದಿದ್ದು ಗುಜ್ರಾತ್ ಗಲಭೆಯ ನಂತರ. ಆ ಮಗು ಹೆಸ್ರು ಜಾತಿ ಮಜ್ಹಬ್ ಯಾವ್ದೂ ಗೊತ್ತಿಲ್ಲ. ಗುಜರಾತಿನಿಂದ ತಪ್ಪಿಸಿಕೊಂಡು ವಲಸೆ ಬಂದ ಒಬ್ಬ ಮುದುಕ ದೇವನ ಹಳ್ಳಿಯ ಹತ್ರ ಗುಡಿಸಲು ಮಾಡಿಕೊಂಡು ಒಂದು ಟೀ ಅಂಗಡಿ ಇಟ್ಟಿದ್ದ. ಆ ಅಜ್ಜನ ಜೊತೆ ಒಂದು ಕೈ ಕೂಸು ಇತ್ತು. ಅದರ ಅಮ್ಮಿ ಅಬ್ಬು ರಿಶ್ತೆ ಯಾರು ಇಲ್ಲದೇ ಗಲಭೆಯಲ್ಲಿ ಬೀದಿಗೆ ಬಿದ್ದು ಅಳ್ತಿತ್ತು. ಅದನ್ನ ಎತ್ಕೊಂಡು ಆ ಅಜ್ಜ ಇಲ್ಲಿ ಓಡಿ ಬಂದ್ರು. ಅದೇ ಸಮಯದಲ್ಲಿ ಈ ಸುಜಿ ಹೊಸದಾಗಿ ಮದ್ವೆ ಆಗಿ ದೇವ್ನಳ್ಳಿಯಲ್ಲಿ ಒಂದು ಗುಡಿಸಲಿನಲ್ಲಿ ತನ್ನ ಗಂಡನ ಜೊತೆ ಇದ್ಲು. ಸುಜಿ ಈ ಮಗುನ ಯಾವಾಗ್ಲು ತಗೊಂಡು ತನ್ನ ಮನೆಯಲ್ಲೆ ನೋಡ್ಕೊಳಕ್ಕೆ ಶುರು ಮಾಡಿದ್ಲು. ಸುಜಿ ಗಂಡನಿಗೆ ಒಂದು ವಿಚಿತ್ರ ಕೋಪ ಅ ಮಗುನ ಕಂಡ್ರೆ. ಆ ಟೈಮಿಗೆ ಆ ಅಜ್ಜ ಸತ್ತ. ಆ ಬಚ್ಚಾನ ಸುಜಿನೇ ತಗೊಂಡ್ಳು ಅಂತ ಸುಜಿ ಗಂಡ ಇವಳನ್ನೂ ಮಗುವನ್ನೂ ಯಾರಿಗೋ ಮಾರಿ ದುಡ್ಡು ತಗೊಂಡು ಓಡೋದ. ಆಗ ಈ ತಾಯಿ ಈ ಧಂಧೆಗೆ ಬಲವಂತದಿಂದ ಬಂದು ದುಡಿದು ಮಗಳನ್ನು ಉಣಿಸಿ ಓದ್ಸಿದ್ಲು. ಅದು ನೋಡಿದ್ರೆ ಹೀಗಾಯ್ತು… ಯಾರಿಗೆ ಯಾರು ಹೇಗೆ ಅಂತನೇ ಗೊತ್ತಿಲ್ಲ. ಸುಜಿ ನಿದ್ದೆ ಮಾಡಿ ವರ್ಷಗಳೆ ಆಗಿವೆ…. ಸುಜಿ ಗಂಡ ನೋಡಿದ್ರೆ ಒಬ್ಬ ದರಿದ್ರ, ಕ್ರೂರಿ. ಮಗಳು ಏನೂ ತಿಳಿದುಕೊಳ್ಳುವ ಸಹನೆ ಇಲ್ಲದೇ ಹೀಗ್ ಮಾಡ್ಕೊಂಡ್ಳು. ಈಗ ಸುಜಿ ನಮ್ಮೆಲ್ಲರ ಮಗಳು, ನಾವಿದ್ದೀವಿ”. ಸುಜಿ ಜೋರಾಗಿ ಬಿಕ್ಕಿ ಬಿಕ್ಕಿ ಅಳ್ತಿದ್ಲು. ಮಿಯಾನ್ ಅವಳನ್ನ ಹಿಡಿದಪ್ಪಿದ್ದ. ಸ್ಯಾಮ್ ಕಣ್ಣಲ್ಲಿ, ಮೀನಳ ಕಣ್ಣಲ್ಲಿ ನೀರು.
ಆ ಐದೂ ಜನರ ಕಣ್ಣಲ್ಲಿ ನೀರಿತ್ತು. ಎಲ್ರೂ ನಿಧಾನವಾಗಿ ಸಮಾಧಾನ ಮಾಡಿಕೊಂಡು ತಮ್ಮ ತಮ್ಮ ಕೆಲಸದ ಕಡೆ ಹೊರಟರು. ರಮಾಳ ರೂಹ್ – ಆತ್ಮ ಇದನ್ನೆಲ್ಲಾ ಕೇಳಿ ಕಿರುಚಿ ಕಿರುಚಿ ಅಳುತ್ತಿತ್ತು. ಆದರೆ ಯಾರಿಗೂ ಅದು ಕೇಳದೇ ಉಳಿಯಿತು.
ರೂಮಿ ಹರೀಶ್
ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು ಕಳೆದ ಸುಮಾರು 2೫ ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ ಮತ್ತು ಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ.