ಶಿವಮೊಗ್ಗ: ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ಗುಂಡಿಗೆ ಬಲಿಯಾದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ ರಾವ್ ಅವರ ಪಾರ್ಥೀವ ಶರೀರ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ನಾಳೆ ಬೆಳಗ್ಗೆ 8 ಗಂಟೆಗೆ ಆಗಮಿಸಲಿದೆ.
ಬುಧವಾರ ಸಂಜೆ ಕಾಶ್ಮೀರದಿಂದ ಹೊರಟ ವಿಶೇಷ ವಿಮಾನ ರಾತ್ರಿ ಮುಂಬೈ ಮೂಲಕ ತಡರಾತ್ರಿ 2 ಗಂಟೆಗೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಹೊರಟು ಬೆಳಿಗ್ಗೆ ಶಿವಮೊಗ್ಗ ತಲುಪಲಿದೆ.
ಕಾಶ್ಮೀರಕ್ಕೆ ತೆರಳಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್, ಮಂಜುನಾಥರಾವ್ ಅವರ ಪತ್ನಿ ಪಲ್ಲವಿ ಹಾಗೂ ಪುತ್ರ ಅಭಿಜಯ ರಾವ್ ಅವರನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಜತೆಗೆ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ತರಲು ಊರಿಗೆ ತರಲು ನೆರವಾಗಿದ್ದಾರೆ.
ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ದಾಳಿ ಖಂಡಿಸಿ ಹಾಗೂ ಮೃತ ಮಂಜುನಾಥ ರಾವ್ ಅವರ ಗೌರವಾರ್ಥ ಶಿವಮೊಗ್ಗದಲ್ಲಿ ಅರ್ಧದಿನ ಬಂದ್ ಮಾಡಲು ನಿರ್ಧರಿಸಲಾಗಿದೆ. ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗುತ್ತದೆ. ಮಧ್ಯಾಹ್ನ ಅಂತ್ಯಕ್ರಿಯೆ ಮುಗಿದ ನಂತರ ವಹಿವಾಟು ಮತ್ತೆ ಆರಂಭಿಸಲಿದ್ದಾರೆ ಎಂದು ಸ್ಥಳೀಯ ಮುಖಂಡರು ತಿಳಿಸಿದ್ದಾರೆ.