ಮಂಗಳೂರು: ರಾಜ್ಯಾದ್ಯಂತ 14 ಕ್ಷೇತ್ರಗಳ ಲೋಕಸಭಾ ಚುನಾವಣೆ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಮಂಗಳೂರಿನಲ್ಲಿ ಪೊಲೀಸರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.
ಕಪಿತಾನಿಯೋದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರ ಮೇಲೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದ ಬಿಜೆಪಿ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದಾರೆ.
ಇಲ್ಲಿನ ಮತಗಟ್ಟೆಯೊಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಮತ ಚಲಾಯಿಸಿ ಹೊರಬರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪದ್ಮರಾಜ್ ಮತಗಟ್ಟೆಯಿಂದ ಹೊರಗೆ ಬಂದ ನಂತರ ಮಾಧ್ಯಮದವರು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಸಂದೀಪ್ ಎಕ್ಕೂರ್ ಎಂಬಾತ ಅಸಹನೆಯಿಂದ ಜಗಳ ತೆಗೆದಿದ್ದಾನೆ. ಆತನನ್ನು ಅಲ್ಲಿಂದ ಪೊಲೀಸರು ಹೊರಗೆ ಕರೆದೊಯ್ಯುತ್ತಿದ್ದಂತೆ ಆತನ ಇನ್ನಷ್ಟು ಸಹಚರರು ಮಾಧ್ಯಮ ಪ್ರತಿನಿಧಿಗಳಿಗಳೊಂದಿಗೆ ಜಗಳ ಶುರು ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಪೊಲೀಸರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದರು.
ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ಸಂಜೆಯೊಳಗೆ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ಟಿ.ಡಿ.ನಾಗರಾಜ್ ಹೇಳಿದ್ದಾರೆ.