ಬೆಂಗಳೂರು: ಮಂಡ್ಯದ ಗಂಡು ಸಿನಿಮಾ ಖ್ಯಾತಿಯ ಹಿರಿಯ ನಿರ್ದೇಶಕ ಎ.ಟಿ.ರಘು ನಿಧನ ಹೊಂದಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ರಘು ಅವರಿಗೆ 72 ವರ್ಷ ವಯಸ್ಸಾಗಿತ್ತು.
ಇವರು 32 ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದು, ಈ ಪೈಕಿ 22 ಸಿನಿಮಾಗಳು ಅಂಬರೀಶ್ ಅವರದ್ದು ಎನ್ನುವುದು ಮತ್ತೊಂದು ವಿಶೇಷ.
ಮಡಿಕೇರಿಯಲ್ಲಿ ಜನಿಸಿದ ರಘು ಅವರು ವಿದ್ಯಾರ್ಥಿಯಾಗಿದ್ದಾಗ ‘ಮಿಸ್ ಲೀಲಾವತಿ’ ಎಂಬ ಸಿನಿಮಾದಲ್ಲಿ ಸಣ್ಣ ಪಾತ್ರವೊಂದಕ್ಕೆ ಬಣ್ಣ ಹಚ್ಚುವುದರ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ‘ಮೂರೂವರೆ ವಜ್ರಗಳು’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಅವರು ನಂತರ ಹಲವು ಚಿತ್ರಗಳಲ್ಲಿ ಸಹಾಯಕ, ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು.
‘ದೇವರ ಕಣ್ಣು’ ಚಿತ್ರದ ಸಂದರ್ಭದಲ್ಲಿ ರಘು ಹಾಗೂ ಅಂಬರೀಶ್ ಸ್ನೇಹಿತರಾದರು. ಆ ಚಿತ್ರದಲ್ಲಿ ರಘು ಸಹ ನಿರ್ದೇಶಕರಾಗಿದ್ದರು. ‘ನ್ಯಾಯ ನೀತಿ ಧರ್ಮ’ ಸಿನಿಮಾ ಮೂಲಕ ನಿರ್ದೇಶಕರಾದ ರಘು, ಅಂಬರೀಶ್ ಅವರಿಗೆ ಆ್ಯಕ್ಷನ್ ಕಟ್ ಹೇಳಿದರು. ಬಳಿಕ ‘ಶಂಕರ್ ಸುಂರ್ದ’, ‘ಪ್ರೀತಿ’, ‘ಆಶಾ’, ‘ಇನ್‌ಸ್ಪೆಕ್ಟರ್ ಕ್ರಾಂತಿಕುಮಾರ್’, ‘ಗುರು ಜಗದ್ಗುರು’ ಮುಂತಾದ ಸಿನಿಮಾಗಳನ್ನು ರಫ್ತು ನಿರ್ದೇಶಿಸಿದರು. ಟೈಗರ್ ಪ್ರಭಾಕರ್ ನಟಿಸಿದ ‘ಕಾಡಿನ ರಾಜ’ ಸಿನಿಮಾವನ್ನೂ ರಘು ನಿರ್ದೇಶಿಸಿದ್ದರು.