ಮಂಡ್ಯ: ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ, ನಾಡು ನುಡಿ ಚರ್ಚೆಗಿಂತ ಆಹಾರದ ವಿಷಯವೇ ಪ್ರಧಾನವಾಗಿ ಚರ್ಚೆಯಾಗುತ್ತಿದೆ. ಉದ್ದೇಶಪೂರ್ವಕವಾಗಿ ಮಾಂಸಾಹಾರವನ್ನು ನಿಷೇಧಿಸಲಾಗಿರುವುದು ಮಾಂಸಾಹಾರ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ನಿಲುವನ್ನು ಖಂಡಿಸಿ ಸಮಾನ ಮನಸ್ಕರು ಮನೆಗೊಂದು ಕೋಳಿ, ಊರಿಗೊಂದು ಕುರಿ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ. ಈ ಅಭಿಯಾನಕ್ಕೆ ಚಾಲನೆ ಸಿಕ್ಕಿದ್ದು, ಕುರಿ ಕೋಳಿ ಸಂಗ್ರಹ ಆರಮಭವಾಗಿದೆ.
ಅಂದು ವಿಚಾರ ಕ್ರಾಂತಿ, ಇಂದು ಆಹಾರ ಕ್ರಾಂತಿ ಎಂಬ ಘೋಷಣೆಯಡಿ ಮಂಡ್ಯದ ಹಳೆ ಬೂದನೂರಿನಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರವಿ ಅವರು ಕೋಳಿ ಸಂಗ್ರಹಕ್ಕೆ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಕರುನಾಡು ಸೇವಕರ ಸಂಘಟನೆಯ ಎಂ.ಬಿ.ನಾಗಣ್ಣಗೌಡ ಅವರು, ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ಬಡಿಸಲು ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಕುರಿ, ಕೋಳಿ ಸಂಗ್ರಹಿಸುವಂತೆ ಕರೆ ನೀಡಿದ್ದೇವೆ. ಸಾಹಿತ್ಯ ಸಮ್ಮೇಳನ ನಡೆಯುವ ಸ್ಥಳದಿಂದ 1 ಕಿ.ಮೀ ದೂರದಲ್ಲಿರುವ ಮಂಡ್ಯದ ಹಳೆ ಬೂದನೂರಿನಲ್ಲಿ ಕುರಿ, ಕೋಳಿ ಸಂಗ್ರಹ ಪ್ರಾರಂಭಿಸಿದ್ದೇವೆ ಎಂದು ಹೇಳಿದ್ದಾರೆ.
ಈಗಾಗಲೇ ರಾಜ್ಯದಾದ್ಯಂತ ಸಮಾನ ಮನಸ್ಕರು ಕುರಿ, ಕೋಳಿ ಕೊಡುತ್ತೇವೆ ಎಂದು ಮುಂದೆ ಬಂದಿದ್ದಾರೆ. ಸುಮಾರು 5-6 ಟನ್ ಕೋಳಿ ಸಂಗ್ರಹವಾಗುವ ನಿರೀಕ್ಷೆಯಿದೆ. ಇದರಿಂದ 50 ಸಾವಿರದಿಂದ 1 ಲಕ್ಷ ಜನರಿಗೆ ಮಾಂಸದ ಊಟ ಬಡಿಸಬಹುದಾಗಿದೆ ಎನ್ನುವುದು ಸಂಘಟಕರ ನಿರೀಕ್ಷೆಯಾಗಿದೆ.
ಒಂದು ವೇಳೆ ಸರ್ಕಾರವೇ ಸಾಹಿತ್ಯ ಸಮ್ಮೇಳನದ ಆಹಾರ ಸಮಿತಿ ಮೂಲಕ ಮಾಂಸಾಹಾರ ನೀಡಲು ಮುಂದೆ ಬಂದರೆ ನಾವು ಸಂಗ್ರಹಿಸಿರುವ ಸಾಮಗ್ರಿಗಳನ್ನು ಸಮಿತಿಗೆ ನೀಡುತ್ತೇವೆ. ಇಲ್ಲದಿದ್ದರೆ ನಾವೇ ಮಾಂಸಾಹಾರ ತಯಾರಿಸಿ ಸಾಹಿತ್ಯ ಸಮ್ಮೇಳನದ ಮೈದಾನದಲ್ಲೇ ವಿತರಿಸುತ್ತೇವೆ ಎಂದು ಅವರು ಹೇಳಿದ್ದಾರೆ.