ಟಿಕೆಟ್‌ ಕಳೆದುಕೊಂಡರೂ ಬಿಜೆಪಿ ಸೇರಿದ ಮಂಡ್ಯ ಸಂಸದೆ ಸುಮಲತಾ

Most read

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಬಯಸಿ ಕೊನೆ ಗಳಿಗೆವರೆಗೂ ಪ್ರಯತ್ನ ನಡೆಸಿದ್ದ ಸುಮಲತಾ ಟಿಕೆಟ್‌ ವಂಚಿತರಾದರೂ ಇಂದು ಅಧಿಕೃತವಾಗಿ ಭಾರತೀಯ ಜನತಾ ಪಕ್ಷ ಸೇರ್ಪಡೆಗೊಂಡರು.

ಕಳೆದ ಅವಧಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಸುಮಲತಾ ನಂತರ ಬಿಜೆಪಿ ಪಕ್ಷದ ಸಹಸದಸ್ಯತ್ವ ಪಡೆದಿದ್ದರಾದರೂ ನಿಯಮಾವಳಿಗಳ ಪ್ರಕಾರ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಲು ಸಾಧ್ಯವಿರಲಿಲ್ಲ. ಈ ಲೋಕಸಭಾ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿಕೊಂಡಿದ್ದಾರೆ.

ಇಂದು ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್.‌ಯಡಿಯೂರಪ್ಪ ಸಮ್ಮುಖದಲ್ಲಿ ಸುಮಲತಾ ಬಿಜೆಪಿ ಸೇರ್ಪಡೆಗೊಂಡರು.

ಇದೇ ಸಂದರ್ಭದಲ್ಲಿ ಕೊಪ್ಪಳ ಮಾಜಿ ಸಂಸದ ಎಸ್. ಶಿವರಾಮೇಗೌಡ. ಸಚಿವ ಶಿವಾನಂದ ಪಾಟೀಲ್ ಅಣ್ಣನ ಮಗ ಹರ್ಷಗೌಡ ಕೂಡ ಭಾರತೀಯ ಜನತಾ ಪಕ್ಷ ಸೇರ್ಪಡೆಗೊಂಡರು.

ದೇಶದಲ್ಲಿ ಮೋದಿ ಪರ ಅಲೆ ಇದ್ದು, 400ಕ್ಕೂ ಹೆಚ್ಚು ಸ್ಥಾನ ಗೆದ್ದು ಅಧಿಕಾರಕ್ಕೆ ಬರುತ್ತೇವೆ. ರಾಜ್ಯದಲ್ಲೂ ಮೋದಿ ಪರ ವಾತಾವರಣವಿದೆ. ಮೋದಿ ನಾಯಕತ್ವ ಮೆಚ್ಚಿ ಸುಮಲತಾ ಬಿಜೆಪಿ ಸೇರುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಸಮಾರಂಭಕ್ಕೂ ಮುನ್ನ ಸುಮಲತಾ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಷ್‌ ಅವರ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ್ದರು.

More articles

Latest article