ಮಂಡ್ಯ ಕಸಾಪ ಸಮ್ಮೇಳನ; ಮಾಂಸಾಹಾರದ ಊಟಕ್ಕೆ ಆಗ್ರಹ

Most read

ಮಂಡ್ಯಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜತೆಗೆ ಮಾಂಸಾಹಾರವನ್ನೂ ನೀಡಬೇಕು ಎಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರಿನಲ್ಲಿ ಮೊಟ್ಟೆ ತಿನ್ನುವ ಮೂಲಕ ಪ್ರತಿಭಟನೆ ನಡೆಸಿ, ಬೇಳೆಯ ಜೊತೆ ಮೂಳೆಯೂ ಇರಲಿ, ಹಪ್ಪಳದ ಜೊತೆ ಕಬಾಬ್ ಇರಲಿ, ಕೋಸಂಬರಿ ಜೊತೆ ಎಗ್ ಬುರ್ಜಿ ಇರಲಿ, ಮುದ್ದೆ ಜೊತೆ ಬೋಟಿ ಇರಲಿ ಎಂದು ಘೋಷಣೆ ಕೂಗಿ ಮಾಂಸಹಾರದ ಊಟಕ್ಕೆ ಒತ್ತಾಯಿಸಿದರು.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯುವುತ್ತಿರುವುದು ಹೆಮ್ಮೆಯ ಸಣಗತಿ. ಆದರೆ ಸಾಹಿತ್ಯ ಸಮ್ಮೇಳನದ ವಾಣಿಜ್ಯ ಮಳಿಗೆಗಳಲ್ಲಿ ಮಾಂಸಾಹಾರಕ್ಕೆ ನಿಷೇಧ ವಿಧಿಸಿ ಸಮ್ಮೇಳನಕ್ಕೆ ಆಗಮಿಸುವ ಲಕ್ಷಾಂತರ ಜನತೆಗೆ ಸಸ್ಯಾಹಾರ ನೀಡಲು ಮುಂದಾಗಿರುವುದು ಜನರ ಆಹಾರದ ಹಕ್ಕನ್ನು ಉಲ್ಲಂಘಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಂಸಾಹಾರವನ್ನು ನಿಷೇಧಿಸುವುದು ಸರಿಯಲ್ಲ. ಅದರಲ್ಲೂ ಮಂಡ್ಯ ಜಿಲ್ಲೆ ಹರಿದಿನಗಳಲ್ಲಿ ಮಾಂಸಾಹಾರಿ ಊಟೋಪಚಾರಕ್ಕೆ ಹೆಸರುವಾಸಿಯಾಗಿವೆ. ಸಮ್ಮೇಳನದಲ್ಲಿ ಭಾಗವಹಿಸುವ ಬಹುಸಂಖ್ಯಾತರು ಮಾಂಸಾಹಾರಿಗಳೇ ಆಗಿರುವಾಗ ನಿಷೇಧ ಏತಕ್ಕಾಗಿ ಎಂದು ಪ್ರಶ್ನಿಸಿದರು.

ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರಕ್ಕೆ ಬೇಡಿಕೆ ಏಕೆ ಎಂದು ಪ್ರಶ್ನಿಸುವುದೇ ಸರಿಯಾದ ಕ್ರಮ ಅಲ್ಲ. ಆಹಾರ ಎನ್ನುವುದು ಆಹಾರ ಅಷ್ಟೇ. ಅದನ್ನು ಸಸ್ಯಾಹಾರ ಮತ್ತು ಮಾಂಸಾಹಾರ ಎಂದು ಬೇರ್ಪಡಿಸಿ ಮಾಂಸಾಹಾರ ಅಪವಿತ್ರ ಎಂಬ ಭಾವನೆಯನ್ನು ಜನರಲ್ಲಿ ಬಿತ್ತುವ ಕೆಲಸ ದೇಶದಲ್ಲಿ ನಡೆಯುತ್ತಾ ಇದೆ. ಈ ಮೂಲಕ ಬಹುಜನರ ಆಹಾರ ಪದ್ಧತಿಗಳನ್ನು ಅಕ್ರಮವಾಗಿಸುವ ಪ್ರಯತ್ನಗಳು ಶತಮಾನಗಳಿಂದಲೂ ನಡೆಯುತ್ತಿವೆ ಎಂದು ಆಪಾದಿಸಿದರು.

ಕನ್ನಡ ಸಾಹಿತ್ಯ ಪರಂಪರೆಯಲ್ಲಿ 12-13 ಶತಮಾನದ ಚಾಲುಕ್ಯ ಅರಸ ಮೂರನೇ ಸೋಮೇಶ್ವರನು ಬರೆದ ಮಾನಸೋಲ್ಲಾಸ ಕೃತಿಯಲ್ಲಿ ಮಾಂಸಾಹಾರಗಳ ಬಹುದೊಡ್ಡ ಪಟ್ಟಿಯೇ ಇದೆ. ಹೀಗಿರುವಾಗ ಮಾಂಸಾಹಾರ ನಿಷೇಧ ಮಾಡುವುದು ಅಪಾಯಕಾರಿ ಅಜೆಂಡವಾಗಿದೆ. ನಾಗರಿಕರ ಮೂಲಭೂತ ಅಗತ್ಯವಾದ ಆಹಾರದ ವಿಚಾರದಲ್ಲಿ ಸಮ್ಮೇಳನದ ಅಧ್ಯಕ್ಷರು ತಾರತಮ್ಮ ತೋರುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ನಿಲುವು ಎಂದರು.

ಸಾಹಿತ್ಯ ಸಮ್ಮೇಳನದ ವಾಣಿಜ್ಯ ಮಳಿಗೆಗಳಲ್ಲಿ ಮಾಂಸಾಹಾರದ ಮಾರಾಟಕ್ಕೆ ವಿಧಿಸಿರುವ ನಿರ್ಬಂಧವನ್ನು ತೆಗೆದುಹಾಕಿ ಮುಕ್ತ ಅವಕಾಶ ಒದಗಿಸಬೇಕು, ಸಮ್ಮೇಳನದ ಊಟದಲ್ಲಿ ಸಸ್ಯಾಹಾರ ಊಟದ ಜೊತೆಗೆ ಎಲ್ಲರೂ ತಿನ್ನಬಹುದಾದ ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಕಡ್ಡಾಯವಾಗಿ ನೀಡಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಸಮ್ಮೇಳನದಲ್ಲಿ ಮಾಂಸಾಹಾರ ನೀಡದಿದ್ದರೆ ಸಾರ್ವಜನಿಕರಿಂದ ಕೋಳಿ, ಮೊಟ್ಟೆ ಮತ್ತು ಪಡಿತರ ಸಂಗ್ರಹಿಸಿ ಮಾಂಸಾಹಾರ ವಿತರಿಸಲಾಗುವುದು ಎಂದು ಎಚ್ಚರಿಸಿದರು

ಸಿಐಟಿಯುನ ಸಿ.ಕುಮಾರಿ, ಎ.ಎಲ್.ಕೃಷ್ಣೇಗೌಡ, ಕರುನಾಡು ಸೇವಕರು ಸಂಘಟನೆಯ ಎಂ.ಬಿ. ನಾಗಣ್ಣಗೌಡ, ಕರವೇ ಮುಖಂಡ ಎಚ್‍.ಡಿ.ಜಯರಾಮ್, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಎಂ.ವಿ.ಕೃಷ್ಣ, ಹಿಂದುಳಿದ ವರ್ಗಗಳ ಒಕ್ಕೂಟದ ಸಂದೇಶ್, ವಕೀಲ ಬಿ.ಟಿ ವಿಶ್ವನಾಥ್, ಡಾ.ಬಿ.ಆರ್ ಅಂಬೇಡ್ಕರ್ ವಾರಿಯರ್ಸ್‌ನ ಗಂಗರಾಜು, ನಿರಂಜನ್, ಟಿ.ಡಿ ನಾಗರಾಜ್, ನರಸಿಂಹಮೂರ್ತಿ, ಎಂ.ಸಿ.ಲಂಕೇಶ್ ಮಂಗಲ, ಲಕ್ಷ್ಮಣ್ ಚೀರನಹಳ್ಳಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

More articles

Latest article