ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಮಾಜಿ ಶಾಸಕ ಕೆ.ಅನ್ನದಾನಿ ಒತ್ತಾಯಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಅವರು ಸಮ್ಮೇಳನದ ಖರ್ಚಿನ ಬಗ್ಗೆ ಲೆಕ್ಕ ನೀಡದಿರುವುದು ಸರಿಯಲ್ಲ. ಈ ಸಂಬಂಧ ರಾಜ್ಯಪಾಲರು ಮತ್ತು ಕೇಂದ್ರ ಸರ್ಕಾರಕ್ಕೆ ದೂರು ನೀಡಲಾಗುವುದು ಎಂದರು.
ಜರ್ಮನ್ ಟೆಂಟ್ ನಿರ್ಮಾಣಕ್ಕೆ ಮಾರುಕಟ್ಟೆಯಲ್ಲಿ ಚದರ ಅಡಿಗೆ ರೂ.15ರಿಂದ ರೂ.18 ಬಾಡಿಗೆ ಇದೆ. ಆದರೆ 68 ರೂ ವೆಚ್ಚ ಮಾಡಲಾಗಿದೆ. ಒಟ್ಟಾರೆ ಸಮ್ಮೇಳನದ ಹೆಸರಿನಲ್ಲಿ ಸುಮಾರು ರೂ.15 ಕೋಟಿ ಭ್ರಷ್ಟಾಚಾರ ನಡೆಸಿರುವ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು ಎಂದು ಆಗ್ರಹಪಡಿಸಿದರು.
ರೂ.500 ಬೆಲೆಯ ಹಣ್ಣಿನ ಬುಟ್ಟಿಗೆ ರೂ.2,500, ರೂ.900 ಬೆಲೆಯ ರೇಷ್ಮೆ ಸಾಲಿಗೆ ರೂ.1,680 ಬಿಲ್ ಹಾಕಿದ್ದಾರೆ. ಸಚಿವರು ಮತ್ತು ಮುಖ್ಯಮಂತ್ರಿಗೆ ನೀಡಿರುವ ನೆನಪಿನ ಕಾಣಿಕೆಗೆ ರೂ.31,500 ಭರಿಸಿರುವುದು ಭ್ರಷ್ಟಾಚಾರದ ಪರಮಾವಧಿಯಾಗಿದೆ. ಸಮ್ಮೇಳನಕ್ಕೆ ರೂ.30 ಕೋಟಿ ವ್ಯಯಿಸಲಾಗಿದೆ ಎಂದು ಲೆಕ್ಕಪತ್ರ ನೀಡಲಾಗಿದೆ. 1 ರೂಪಾಯಿಗೆ ಆಗುವ ಕೆಲಸಕ್ಕೆ 100 ರೂ ನೀಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕಸಾಪ ಸಮ್ಮೇಳನ ಭ್ರಷ್ಟಾಚಾರ ಕುರಿತು ಹಾಲಿ ಅಥವಾ ಮಾಜಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ, ಸಿಐಡಿ, ಇಡಿ ಅಥವಾ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಪಡಿಸಿದರು.