ಕೋಲ್ಕತ್ತ: ರಾಮ ಮಂದಿರ ನಿರ್ಮಾಣವಾದ ಬಳಿಕ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ ಎನ್ನುವ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಇತಿಹಾಸವನ್ನು ನಾಶಗೊಳಿಸುವ ಯತ್ನ ಎಂದು ಅವರ ವಿರುದ್ಧ ಕಿಡಿ ಕಾರಿದ್ದಾರೆ.
ಇದು ದೇಶದ್ರೋಹ ಹೇಳಿಕೆ, ಇದನ್ನು ಖಂಡಿಸುತ್ತೇನೆ. ಈ ಹೇಳಿಕೆಯನ್ನು ಹಿಂಪಡೆಯಬೇಕು. ಇದು ಇತಿಹಾಸವನ್ನು ನಾಶಪಡಿಸುವ ಹೇಳಿಕೆಯಾಗಿದೆ. ನಮ್ಮ ಸ್ವಾತಂತ್ರ್ಯವನ್ನು ಅಖಂಡವಾಗಿ ಉಳಿಸಿಕೊಳ್ಳಲು ನಾವು ಸಮರ್ಪಿತರಾಗಿದ್ದೇವೆ, ಭಾರತಕ್ಕಾಗಿ ನಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧರಿದ್ದೇವೆ, ಆದರೆ ಇದನ್ನು ಸಹಿಸುವುದಿಲ್ಲ ಎಂದಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯ ದಿನವನ್ನು ‘ಪ್ರತಿಷ್ಠಾ ದ್ವಾದಶಿ’ಯಾಗಿ ಆಚರಿಸಬೇಕು. ಏಕೆಂದರೆ ಹಲವಾರು ಶತಮಾನಗಳಿಂದ ಶತ್ರುಗಳ ದಾಳಿ ಎದುರಿಸಿದ ಭಾರತಕ್ಕೆ ಬಾಲರಾಮನ ಪ್ರತಿಷ್ಠಾಪನೆಯ ದಿನ ‘ನಿಜವಾದ ಸಾತಂತ್ರ್ಯ’ ಲಭಿಸಿತು ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ಪ್ರತಿಪಕ್ಷದ ನಾಯಕ ರಾಹಲ್ ಗಾಂಧಿ ಅವರೂ ಮೋಹನ್ ಭಾಗವತ್ ಹೇಳಿಕೆಯನ್ನು ತರಾಟೆಗೆ ತೆಗೆದುಕೊಂಡಿದ್ದರು.