ಕಲಬುರಗಿ: ಇಂದು ಎಲ್ಲ ನಾಯಕರು ನಿಮ್ಮ ಮನೆಗೆ ಬಂದು ಮತದಾನ ಕೇಳುತ್ತಿದ್ದಾರೆ. ಆ ಹಕ್ಕನ್ನು ನಿಮಗೆ ಕೊಟ್ಟಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನ. ಮೋದಿಯವರು ಇಂತಹ ಸಂವಿಧಾನ ಬದಲಾವಣೆ ಮಾಡಲು ಹೊರಟಿದ್ದಾರೆ. ಪ್ರಜಾಪ್ರಭುತ್ವ ಕಿತ್ತು ಹಾಕಿ ನಿರಂಕುಶ ಪ್ರಭುತ್ವ ತರಲು ಹೊರಟಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುಡುಗಿದರು.
ಕಲಬುರಗಿಯಲ್ಲಿ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷದ ನಾಯಕರು ಹೋರಾಟ ಮಾಡಿ ದೇಶ ಕಟ್ಟಿದ್ದಾರೆ. ಆ ನಮ್ಮ ಮಹನೀಯರಿಗೆ ಈ ಮೋದಿ ಕೇಳ್ತಾನೆ ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು ಎಂದು. ಆಗ ನೀ ಇನ್ನೂ ಹುಟ್ಟಿರಲಿಲ್ಲ. ಈ ದೇಶದ ಜನರಿಗೆ ಶಾಂತಿಯಿಂದ ಬದುಕಲು ಎಲ್ಲ ಹಕ್ಕುಗಳನ್ನು ಕೊಟ್ಟಿದ್ದು ಕಾಂಗ್ರೆಸ್. ಈ ಮೋದಿ ಪರಿವಾರ ಅದನ್ನ ಜನರಿಂದ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಉಚಿತ ಶಿಕ್ಷಣ, ಆಹಾರ ಧಾನ್ಯ ಕಾನೂನು, ನರೇಗಾ, ಹಳ್ಳಿಗಳಲ್ಲಿ ಆರೋಗ್ಯಕ್ಕಾಗಿ ಆಸ್ಪತ್ರೆ ಸೇರಿದಂತೆ ಎಲ್ಲಾ ಕೊಡುಗೆ ಕೊಟ್ಟಿದ್ದು ಕಾಂಗ್ರೆಸ್. ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶದಲ್ಲಿ ಒಂದು ಸೂಜಿಯೂ ತಯಾರಾಗುತ್ತಿರಲಿಲ್ಲ. ಇಂಜಿನಿಯರಿಂಗ್, ಡಿಗ್ರಿ, ಮೆಡಿಕಲ್ ಸೇರಿದಂತೆ ಎಲ್ಲ ಕಾಲೇಜುಗಳು ಬಂದಿದ್ದು ಕಾಂಗ್ರೆಸ್ ಅವಧಿಯಲ್ಲಿ. ನಿಮ್ಮ ಹತ್ತು ವರ್ಷದ ಅವಧಿಯಲ್ಲಿ ನೀವು ದೇಶಕ್ಕೆ ಏನು ಕೊಟ್ಟಿದ್ದೀರಿ ಎಂದು ಪ್ರಶ್ನೆಮಾಡಿದರು.
ದೇಶಕ್ಕಾಗಿ ದುಡಿದಿದ್ದು ನಾವು, ದೇಶ ಕಟ್ಟಿದ್ದುನಾವು. ಎಲ್ಲಾ ಕಡೆ ಹಸಿರು ಕ್ರಾಂತಿ ಮಾಡಿ, ಜನರ ಹೊಟ್ಟೆ ತುಂಬಿಸಿದ್ದೇವೆ. ಇಷ್ಟೆಲ್ಲಾ ಆದ್ರೂ ನೀವೇನ್ ಮಾಡಿದ್ದೀರಿ ಅಂತಾರೆ. ಅಚ್ಚೇ ದೀನ್ ಮಾಡ್ತೀವಿ ಅಂತಾರೆ. ಡಿಸೇಲ್, ಪೆಟ್ರೋಲ್, ಎಲ್ಪಿಜಿ ದರ ನೂರು, ಸಾವಿರದ ಗಡಿ ದಾಟಿದೆ. ಗೊಬ್ಬರ ಸೇರಿದಂತೆ ರೈತರ ಎಲ್ಲ ಸಾಮಾಗ್ರಿ ಮೇಲೆ ಜಿಎಸ್ಟಿ ಹಾಕಿದ್ದಾರೆ. ಇಂಥಾ ಸರ್ಕಾರವನ್ನ ತೆಗೆಯಬೇಕು. ಅಂದರೆ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆಗೆ ಅವರಿಗೆ ಮತ ನೀಡಬೇಕು.
ಇತ್ತೀಚೆಗೆ ಏರ್ಪೋರ್ಟ್ ಲ್ಲಿ ಬಾಬಾರಾಮ್ ದೇವ್ ಸಿಕ್ಕು ತಮ್ಮಿಂದ ತಪ್ಪಾಗಿದೆ ಎಂದು ಕೈ ಮುಗಿದ. ಮೋದಿ ದೇಶ ಉದ್ಧಾರ ಮಾಡುವುದಕ್ಕೆ ಬಂದಿಲ್ಲ. ಡಿಕ್ಟೇಟರ್ಶಿಪ್ ಮಾಡೋದಕ್ಕೆ ಬಂದಿದ್ದಾನೆ. ಇವನ ಶಿಷ್ಟ ಭಗವಂತ ಖೂಬಾ. ಇವನನ್ನು ತೆಗೆದುಹಾಕಬೇಕು ಎಂದರು.
ನರೇಂದ್ರ ಮೋದಿಯವರ ಮಂಗಳ ಸೂತ್ರದ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜಾತಿ ಗಣತಿ ಮಾಡೋದು ದೇಶದಲ್ಲಿ ಬಡವರ ಸಂಖ್ಯೆ ಎಷ್ಟು, ಬಡವರ ಮಕ್ಕಳ ಸಂಖ್ಯೆ ಎಷ್ಟು ಎನ್ನುವುದನ್ನು ಲೆಕ್ಕ ಹಾಕಲು. ಇದನ್ನು ಮೋದಿ ‘ಕಾಂಗ್ರೆಸ್ ತಾಳಿ ಕಿತ್ತುಕೊಳ್ಳುತ್ತಾರೆ’ ಅಂತಾನೆ. ಮುಸಲ್ಮಾನರ ಬಳಿ ಒಂದು, ಹಿಂದೂಗಳಿಗೆ ಒಂದು ಹೇಳಿ ಮೋದಿ ಕೀಳು ರಾಜಕೀಯ ಮಾಡುತ್ತಿದ್ದಾನೆ. ಈ ರೀತಿ ಹೇಳಿ ಹೇಳಿ ದೇಶದ ಜನರಲ್ಲಿ ದ್ವೇಷ ವೈಷಮ್ಯ ಹುಟ್ಟುಹಾಕುತ್ತಿದ್ದಾರೆ. ಮನಸು ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲಾ ಒಂದಾಗಿ ಹಸ್ತಕ್ಕೆ ಓಟು ಕೊಟ್ಟು ನಮ್ಮ ಪಕ್ಷದ ನಾಯಕರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದ್ದಾರೆ.