ನಾಳೆಯಿಂದ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ

Most read

ಬೆಂಗಳೂರು: ಬಸವನಗುಡಿ ಕಡಲೆಕಾಯಿ ಪರಿಷೆಗೂ ಮುನ್ನ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ ನಡೆಯಲಿದೆ. ಕಾಡುಮಲ್ಲೇಶ್ವರ ಗೆಳೆಯರ ಬಳಗ ಆಯೋಜಿಸಿರುವ ಕಡಲೆಕಾಯಿ ಪರಿಷೆ ನಾಳೆ ನ. 15 ರಿಂದ 18 ರವರೆಗೆ ನಾಲ್ಕು ದಿನ ಜರುಗಲಿದೆ.


ಕಡಲೆಕಾಯಿ ಪರಿಷೆ ಪ್ಲಾಸ್ಟಿಕ್ ಮುಕ್ತ ಹಾಗೂ ರೈತ ಸ್ನೇಹಿಯಾಗಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದು, ಈ ವರ್ಷ ಪ್ಲಾಸ್ಟಿಕ್ ಬದಲಿಗೆ ಕಾಗದ ಮತ್ತು ಬಟ್ಟೆಯ ಚೀಲಗಳನ್ನೇ ಬಳಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಅಂದಾಜು 40 ಸಾವಿರ ಕಾಗದದ ಚೀಲಗಳನ್ನು ಮಾರಾಟಗಾರರಿಗೆ ವಿತರಿಸಲಾಗುತ್ತದೆ. ವಿದ್ಯಾರ್ಥಿ ಸ್ವಯಂಸೇವಕರು ತಯಾರಿಸಿದ ಚೀಲಗಳು ಎರಡರಿಂದ ಮೂರು ಕಿಲೋ ಕಡಲೆಕಾಯಿಯನ್ನು ತುಂಬಿಸಬಲ್ಲದ್ದಾಗಿದೆ ಎಂದು ಕಾಡುಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿಕೆ ಶಿವರಾಂ ತಿಳಿಸಿದ್ದಾರೆ. ಜತೆಗೆ ಹಳೆಯ ಸೀರೆ ಮತ್ತು ಇತರ ವಸ್ತುಗಳನ್ನು ಬಳಸಿ 6,000 ಬಟ್ಟೆ ಚೀಲಗಳನ್ನು ಸಿದ್ಧಪಡಿಸಲಾಗಿದೆ.

ಕಡಲೆಕಾಯಿ ರೈತರು ತಮ್ಮ ಬೆಳೆಯನ್ನು ಜಾನುವಾರುಗಳಿಂದ ರಕ್ಷಿಸಿಕೊಳ್ಳಲು ಬಸವನನ್ನು ಪೂಜಿಸುತ್ತಾರೆ. ಜಾನುವಾರುಗಳು ಜಮೀನಿಗೆ ಬರುವಂತೆ ಮಾಡುವ ಶಕ್ತಿಗಳನ್ನು ಹತ್ತಿಕ್ಕಲು ರೈತರು ಸಾಂಪ್ರದಾಯಿಕವಾಗಿ ತಮ್ಮ ಮೊದಲ ಬೆಳೆಯನ್ನು ಬಸವ ದೇವರಿಗೆ ಅರ್ಪಿಸುತ್ತಾರೆ. ಇದರಿಂದ ಬೆಳೆ ರಕ್ಷಣೆಯಾಗುತ್ತದೆ ಎಂಬ ನಂಬಿಕೆ ಇದೆ. ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಿಂದ ಹಾಗೂ ತಮಿಳುನಾಡು, ಆಂಧ್ರಪ್ರದೇಶದ ರೈತರೂ ಪರಿಷೆಯಲ್ಲಿ ಭಾಗಿಯಾಗಲಿದ್ದಾರೆ. ಬಸವನಗುಡಿ ಕಡಲೆಕಾಯಿ ಪರಿಷೆ ನವೆಂಬರ್ 25ರಿಂದ ಆರಂಭವಾಗಲಿದೆ.

More articles

Latest article