ಮಲಯಾಳಂ ಸಾಹಿತಿ ಎಂ.ಟಿ. ವಾಸುದೇವನ್ ನಾಯರ್ ಇನ್ನಿಲ್ಲ

Most read

ಕೋಯಿಕ್ಕೋಡ್: ಎಂಟಿ ಎಂದೇ ಪ್ರಖ್ಯಾತಿ ಪಡೆದಿದ್ದ ಜ್ಞಾನಪೀಠ ಪುರಸ್ಕೃತ ಮಲಯಾಳಂ ಸಾಹಿತಿ ಎಂ.ಟಿ. ವಾಸುದೇವನ್ ನಾಯರ್ ಬುಧವಾರ ಕೋಯಿಕ್ಕೋಡ್ನಲ್ಲಿ ನಿಧನರಾಗಿದ್ದಾರೆ. ಕಳೆದ ವಾರ ಹೃದಯಾಘಾತಕ್ಕೊಳಗಾಗಿದ್ದ 91 ವರ್ಷದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರಿಗೆ ಗೌರವ ಪೂರ್ವಕವಾಗಿ ಕೇರಳ ಸರ್ಕಾರ ಎರಡು ದಿನಗಳ ಶೋಕಾಚರಣೆ ಘೋಷಿಸಿದೆ. ಜ್ಞಾನಪೀಠ, ಪದ್ಮಭೂಷಣ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮೂರು ಬಾರಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು, ಏಳು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು 21 ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಅವರಿಗೆ ದಕ್ಕಿವೆ.

ಆಧುನಿಕ ಮಲಯಾಳಂ ಸಾಹಿತ್ಯದಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಎಂಟಿ ಅವರು ಸುಮಾರು ಹತ್ತು ಕಾದಂಬರಿಗಳು ಮತ್ತು 15 ಕ್ಕೂ ಹೆಚ್ಚು ಸಣ್ಣ ಕಥೆಗಳು ಮತ್ತು ಮಕ್ಕಳ ಸಾಹಿತ್ಯವನ್ನು ಬರೆದಿದ್ದಾರೆ. ಅವರು ಸುಮಾರು 54 ಚಿತ್ರಗಳಿಗೆ ಚಿತ್ರಕಥೆ ಬರೆದಿದ್ದಾರೆ ಮತ್ತು ಆರು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಎಂಟಿ ಅವರಿಗೆ 1995 ರಲ್ಲಿ ಜ್ಞಾನಪೀಠ ಮತ್ತು 2005 ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಅವರು ನಾಲ್ಕು ಬಾರಿ ಅತ್ಯುತ್ತಮ ಚಿತ್ರಕಥೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಎಂಟಿ ಅವರು ಮೂಲತಃ ವಿಜ್ಞಾನ ಶಿಕ್ಷಕರು. ಆದರೆ ಅವರು ಸಾಹಿತ್ಯ ಕ್ಷೇತ್ರದಲ್ಲಿ ಜನಪ್ರಿಯರಾಗಿದ್ದರು. ಪ್ರಶಸ್ತಿ ವಿಜೇತ ಕೃತಿ ನಾಲುಕೆಟ್ಟು 1958 ರಲ್ಲಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿತ್ತು. ರಂಡಾಂ ವಳಂ ಎಂಟಿಯವರ ವ್ಯಾಪಕ ಮೆಚ್ಚುಗೆ ಪಡೆದ ಕೃತಿ. ಅವರ ಒರು ವಡಕ್ಕನ್ ವೀರಗಾಥ, ಕಡವು, ಸದಯಂ ಮತ್ತು ಪರಿಣಯಂ ಚಿತ್ರಗಳ ಚಿತ್ರಕಥೆಗಳು ಅತ್ಯುತ್ತಮ ಚಿತ್ರಕಥೆಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಗಳಿಸಿವೆ. ಅವರು ಮಾತೃಭೂಮಿ ಪ್ರಕಾಶನದ ನಿಯತಕಾಲಿಕಗಳ ವಿಭಾಗದ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು.

More articles

Latest article