Saturday, October 26, 2024

ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಸಭೆ; ಸದಸ್ಯನಲ್ಲದ ಮಹೇಶ್ ಜೋಷಿ ಭಾಗಿ: ಭಂಡತನ ಪ್ರದರ್ಶಿಸಿದ ಕಸಾಪ ಅಧ್ಯಕ್ಷ

Most read

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮೊನ್ನೆ ನಡೆದ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಸಭೆಯಲ್ಲಿ ಸದಸ್ಯರಲ್ಲದ, ಆಹ್ವಾನಿತರಲ್ಲದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿ‌ ಭಾಗವಹಿಸಿ ಭಂಡತನ‌ ಪ್ರದರ್ಶಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

2024-2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಉನ್ನತ ಮಟ್ಟದ ಆಯ್ಕೆ ಸಮಿತಿ ಸಭೆ ಅ.24ರಂದು ಸಂಜೆ‌ 6 ಗಂಟೆಗೆ ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಸಂದರ್ಭದಲ್ಲಿ ಪದನಿಮಿತ್ತ ಸದಸ್ಯರೂ ಅಲ್ಲದ ಮಹೇಶ್ ಜೋಷಿ ಪಾಲ್ಗೊಂಡು ಇರಿಸುಮುರಿಸಿಗೆ ಕಾರಣರಾಗಿದ್ದಾರೆ.

ಸಮಿತಿಯ ಸದಸ್ಯರಲ್ಲದವರು ಹೊರಗೆ ಹೋಗಿ ಎಂದು ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ವಿನಂತಿಸಿದರು. ಹೀಗೆ ಹೇಳಿದ ಮೇಲೂ ಮಹೇಶ್ ಜೋಷಿ ಎದ್ದುಹೋಗಲಿಲ್ಲ. ಕೊನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸದಸ್ಯರಲ್ಲದವರು, ಅಧಿಕಾರಿಗಳು, ಪಿಎಗಳು ಎಲ್ಲರೂ ಹೊರಗೆ ಹೋಗಿ ಎಂದು ಹೇಳಿದರು. ಇಷ್ಟಾದ ಮೇಲೂ ಮಹೇಶ್ ಜೋಷಿ ಹೊರಗೆ ಹೋಗಲಿಲ್ಲ ಎಂದು ಖಚಿತ ಬಲ್ಲ ಮೂಲಗಳು #ಕನ್ನಡಪ್ಲಾನೆಟ್ ಗೆ ತಿಳಿಸಿವೆ.

ಉನ್ನತಮಟ್ಟದ‌ ಸಭೆಯ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ ಅಧ್ಯಕ್ಷರೇ ಇಷ್ಟು ಅಸೂಕ್ಷ್ಮವಾಗಿ ವರ್ತಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವಿಸಿದೆ. ಇಷ್ಟಾದ ಮೇಲೂ ಮಹೇಶ್ ಜೋಷಿಯನ್ನು ಸಭೆಯಿಂದ ಹೊರಗೆ ಕಳುಹಿಸಲಿಲ್ಲ. ಒಂದುವೇಳೆ ಹೊರಗೆ ಕಳುಹಿಸಿದ್ದರೆ ಕನ್ನಡ ಸಾಹಿತ್ಯ ಪರಿಷತ್ ಗೆ ಅಪಮಾನವೆಸಲಾಗಲಿದೆ ಎಂದು ಹುಯಿಲೆಬ್ಬಿಸುವ ಉದ್ದೇಶ ಅವರಿಗಿತ್ತೆ ಎಂಬ ಪ್ರಶ್ನೆಯೂ ಉದ್ಭವಿಸಿದೆ.

ಯಾವುದೇ ಸಭೆಗೆ ಕರೆಯದೇ ಹೋಗುವುದೇ ಸಭ್ಯತೆಯ ಲಕ್ಷಣವಲ್ಲ. ಸಾಹಿತ್ಯ-ಸಂಸ್ಕೃತಿಕ ಕ್ಷೇತ್ರದಲ್ಲಿ ಇರುವವರಂತೂ ಇಂಥ ಸೂಕ್ಷ್ಮಗಳನ್ನು ಸರಿಯಾಗಿ ಅರಿತಿರಬೇಕು. ಹೀಗಿರುವಾಗ ಮಹೇಶ್ ಜೋಷಿ ತಾನು ಸದಸ್ಯನಲ್ಲದ, ಆಹ್ವಾನವಿಲ್ಲದ ಸಭೆಗೆ ಹೋಗಿದ್ದೇ ದೊಡ್ಡ ತಪ್ಪು. ಸದಸ್ಯರಲ್ಲದವರು ಹೊರಗೆ ಹೋಗಲು ಸೂಚ್ಯವಾಗಿ ಹೇಳಿದ ಮೇಲೂ ಹೋಗದೇ ಇದ್ದಿದ್ದು ಇನ್ನೊಂದು ತಪ್ಪು. ಈ ನಡವಳಿಕೆಯಿಂದ ಕಸಾಪ ಸಂಘಟನೆಯ ಗೌರವವನ್ನು ಕಳೆದಂತಾಗುವುದಿಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ.

More articles

Latest article