ನವದೆಹಲಿ: ಕಳೆದ ವರ್ಷ ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಕುರಿತು ಸಮಗ್ರ ವಿಶ್ಲೇಷಣೆ ನಡೆಸುವುದಕ್ಕಾಗಿ ಕಾಂಗ್ರೆಸ್ ಪಕ್ಷ ರಾಜ್ಯದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.
ಸಮಿತಿಯು ಅಕ್ರಮಗಳನ್ನು ವಿಶ್ಲೇಷಣೆ ನಡೆಸುವುದರ ಜತೆಗೆ, ಚುನಾವಣಾ ಪ್ರಕ್ರಿಯೆಯ ಶುದ್ಧೀಕರಣ ಕುರಿತಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಫಾರಸುಗಳನ್ನು ಮಾಡಲಿದೆ ಎಂದು ಪೃಥ್ವಿರಾಜ್ ಚವಾಣ್ ತಿಳಿಸಿದ್ದಾರೆ.
ಮಹಾ ವಿಕಾಸ ಅಘಾಡಿ (ಎಂವಿಎ) ಮೈತ್ರಿಕೂಟದ 100ಕ್ಕೂ ಹೆಚ್ಚು ಮುಖಂಡರು ಚುನಾವಣಾ ತಕರಾರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ನಾಯಕರಿಗೆ ನೆರವು ನೀಡುವುದಕ್ಕಾಗಿ ದೆಹಲಿಯಿಂದ ಕಾನೂನು ತಂಡವೊಂದನ್ನು ಕಳುಹಿಸುವಂತೆ ಪಕ್ಷದ ವರಿಷ್ಠರಿಗೆ ಸಮಿತಿ ಮನವಿ ಮಾಡಿದೆ ಎಂದು ಚವಾಣ್ ಹೇಳಿದ್ದಾರೆ.
ಚುನಾವಣಾ ಆಯೋಗದ ಅವಹೇಳನ ನನ್ನ ಉದ್ದೇಶವಲ್ಲ. ಆದರೆ ಚುನಾವಣಾ ಪ್ರಕ್ರಿಯೆಯ ಶುದ್ಧೀಕರಣಕ್ಕೆ ಅವಕಾಶ ಇದೆ. ನನ್ನ ಕ್ಷೇತ್ರ ಕರಾಡ್ ದಕ್ಷಿಣ ಸೇರಿ ಮಹಾರಾಷ್ಟ್ರದ ಹಲವು ಕ್ಷೇತ್ರಗಳಲ್ಲಿ ಜನರು ಅಳಿಸಲಾಗದ ಶಾಯಿಯನ್ನು ತೆಗೆದು ಹಾಕಿ, ಹಲವು ಬಾರಿ ಮತದಾನ ಮಾಡಿದ್ದಾರೆ ಎಂದು ಅವರು ಆಪಾದಿಸಿದ್ದಾರೆ.
ಮತಪತ್ರ ಬಳಸುವ ಚುನಾವಣಾ ಪ್ರಕ್ರಿಯೆಯನ್ನು ಮತ್ತೆ ಅಳವಡಿಸಿಕೊಳ್ಳಲು ಸಾಧ್ಯವೇ ಎನ್ನುವುದು ಸಮಿತಿ ಮುಂದಿರುವ ಕಾರ್ಯಸೂಚಿಯ ಪ್ರಮುಖ ಅಂಶವಾಗಿದ್ದು, ಮತದಾರರೊಂದಿಗೆ ಚರ್ಚಿಸಿ ಶಿಫಾರಸು ಮಾಡುವುದಾಗಿಯೂ ಅವರು ಹೇಳಿದ್ದಾರೆ.
ಈ ಸಂಬಂಧ ದೆಹಲಿಯಲ್ಲಿ ಹಲವು ಸುತ್ತಿನ ಸಭೆಗಳು ನಡೆದಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ಹಿರಿಯ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.
ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡುವಿನ ಐದು ತಿಂಗಳ ಅವಧಿಯಲ್ಲಿ 41 ಲಕ್ಷ ಹೊಸ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಪಾದಿಸಿದ್ದರು.