ಮುಂಬಯಿ: ಕನ್ನಡದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಶ್ರೀಕಾಂತ್ ಪಾಂಗಾರ್ಕರ್ ಮಹಾರಾಷ್ಟ್ರದ ಜಾಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾನೆ. ಇಲ್ಲಿ ಜನವರಿ 15ರಂದು ಮತದಾನ ನಡೆಯಲಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ಆತನಿಗೆ ಕರ್ನಾಟಕ ಹೈಕೋರ್ಟ್ 2024ರ ಸೆಪ್ಟೆಂಬರ್‌ನಲ್ಲಿ ಜಾಮೀನು ನೀಡಿದೆ.
ಈತ 13ನೇ ವಾರ್ಡ್‌ನಿಂದ ಕಣಕ್ಕಿಳಿದಿದ್ದಾನೆ. ಇಲ್ಲಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಇಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಆದರೆ ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
2024ರ ವಿಧಾನಸಭಾ ಚುನಾವಣೆಗೂ ಮುನ್ನ, ಶ್ರೀಕಾಂತ್ ಶಿವಸೇನಾಗೆ ಸೇರ್ಪಡೆಗೊಂಡಿದ್ದ. ಆದರೆ ಈತನ ಸೇರ್ಪಡೆಗೆ ತೀವ್ರ ವಿರೋಧ ಕಂಡು ಬಂದ ಕಾರಣ ಆತನನ್ನು ಶಿಂದೆ ತಡೆಹಿಡಿದಿದ್ದರು. ಈ ಹಿಂದೆ ಶ್ರೀಕಾಂತ್ ಜಾಲ್ನಾ ನಗರಸಭೆಗೆ 2001ರಲ್ಲಿ ಆಯ್ಕೆಯಾಗಿದ್ದ. ಆಗ ಆತ ವಿಭಜಿತ ಶಿವಸೇನಾದಿಂದ ಸ್ಪರ್ಧಿಸಿದ್ದ. 2011ರಲ್ಲಿ ಶಿವಸೇನಾ ಟಿಕೆಟ್ ನಿರಾಕರಿಸಿದಾಗ ಹಿಂದು ಜನಜಾಗೃತಿ ಸಮಿತಿ ಸೇರ್ಪಡೆಗೊಂಡಿದ್ದ.
ಬೆಂಗಳೂರಿನ ರಾಜರಾಜೇಶ್ವರಿ ನಿವಾಸದ ಎದುರೇ ಗೌರಿ ಲಂಕೇಶ್ ಅವರನ್ನು ಸೆಪ್ಟೆಂಬರ್ 5, 2017 ರಂದು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು.
ಈತನ ವಿರುದ್ಧ ಮಹಾರಾಷ್ಟ್ರದಲ್ಲಿ ಹಲವಾರು ಗಂಭೀರ ಪ್ರಕರಣಗಳು ದಾಖಲಾಗಿವೆ. ಕಚ್ಚಾ ಬಾಂಬ್‌ಗಳು ಮತ್ತು ಶಸ್ತ್ರಾಸ್ತ್ರಗಳ ಜಪ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 2018 ರಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಶ್ರೀಕಾಂತ್ ನನ್ನು ಬಂಧಿಸಿತ್ತು. ಸ್ಫೋಟಕ ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

