ಮಹಾಲಯ, ನವರಾತ್ರಿ, ದುರ್ಗಾ ಪೂಜೆ ಮತ್ತು ಬಂಗಾಳಿ ಮುಸ್ಲಿಮರು

Most read

ನಮ್ಮ ನಾಡಿನಲ್ಲಿ ಕೋಮು ದ್ವೇಷ ಹುಟ್ಟು ಹಾಕಲು ಹೊಸ ಹೊಸ ಪಿಳ್ಳೆ ನೆಪ ಹುಡುಕುತ್ತಿರುವ ದ್ವೇಷಮಯ ವಾತಾವರಣ ಈಗ ಹೆಚ್ಚುತ್ತಿರುವ ಸಮಯದಲ್ಲಿ, ಪವಿತ್ರ ಹಿಂದೂ ಹಬ್ಬಗಳಲ್ಲಿ ಮುಸ್ಲಿಮರ ಕಲಾಕಾರಿಕೆಯೇ ಅತಿ ಮುಖ್ಯ ಪಾತ್ರ ವಹಿಸುತ್ತಿರುವುದು ಹಾಗೂ ಮುಸ್ಲಿಮರು ತಯಾರಿಸಿದ ಮೂರ್ತಿಗಳು ಕೋಟ್ಯಂತರ ಸನಾತನಿಗಳಿಂದಲೇ ಪೂಜೆಗೊಳ್ಳುತ್ತಿರುವುದು ಕಗ್ಗತ್ತಲಲ್ಲಿ ದೂರದಲ್ಲೆಲ್ಲೋ ಮಿನುಗುತ್ತಿರುವ ಆಶಾ ಕಿರಣದಂತೆ ಕಾಣಿಸುತ್ತಿದೆ! –  ಪ್ರವೇಣ್‌ ಎಸ್‌ ಶೆಟ್ಟಿ, ಚಿಂತಕರು.

ಈ ಸಾರಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯ ಜಯಂತಿಯ ಜತೆಗೆ ಮಹಾಲಯ ಅಮಾವಾಸ್ಯೆಯೂ ಬಂದಿದೆ. ನಮ್ಮ ನಮ್ಮ ಮನೆತನದ ಹಿರಿಯರನ್ನು ಗೌರವಿಸುವುದರ ಜತೆಗೆ ರಾಷ್ಟ್ರಪಿತ ಗಾಂಧೀಜಿ ಮತ್ತು ಶಾಸ್ತ್ರೀಜಿಯಂತಹ ಸ್ವಾತಂತ್ರ್ಯ ಹೋರಾಟಗಾರರನ್ನು ನಮ್ಮ ದೇಶದ ಹಿರಿಯರೆಂದು ಗೌರವಿಸಲೂ ಈ ದಿನ ಅತ್ಯಂತ ಉತ್ತಮ (ಗಾಂಧಿ-ನೆಹರೂರನ್ನು ದ್ವೇಷಿಸುವ ಮಹಾ ಕೃತಘ್ನ ಬುದ್ಧಿಯವರನ್ನು ಹೊರತುಪಡಿಸಿ). ಈ ಅಮಾವಾಸ್ಯೆಯಂದು ಪಿತೃಪಕ್ಷ ಮುಗಿದು ಮರುದಿನದಿಂದ ನವರಾತ್ರಿ ಶುರುವಾಗುತ್ತದೆ. ನಮ್ಮ ಪಿತೃಗಳೆಲ್ಲಾ ತೃಪ್ತಿಪಟ್ಟು ಸೇರುವ ಕೊನೆಯ ಸ್ಥಾನವೇ ಮಹಾ “ಆಲಯ” ಅರ್ಥಾತ್ ದೊಡ್ಡ ಮನೆ. ಈ ದೊಡ್ಡ ಆಲಯ/ಕೊನೆಯ ಆಲಯದ ಅಧಿಪತಿಯೇ ಯಮಧರ್ಮ. ಹಾಗಾಗಿ ಭಾರತದ ಕೆಲವೆಡೆ ಮಹಾಲಯದಂದು ಯಮರಾಜನನ್ನೂ ಪೂಜಿಸುವ ಪದ್ದತಿ ಇದೆಯಂತೆ. 

ಮೊದಲೆಲ್ಲಾ ಬ್ರಾಹ್ಮಣರನ್ನು ಹೊರತು ಪಡಿಸಿ ಬೇರೆ ಜಾತಿಯವರು ಮಹಾಲಯ ಅಮಾವಾಸ್ಯೆಗೆ ಅಷ್ಟು ಪ್ರಾಮುಖ್ಯತೆ ಕೊಡುತ್ತಿರಲಿಲ್ಲ. ಕೇವಲ ಹಿಂದಿನ ಹುಣ್ಣಿಮೆಯಿಂದ ಈ ಅಮಾವಾಸ್ಯೆಯ ವರೆಗೆ 16 ದಿನಗಳ ಕಾಲವನ್ನು ಪಿತೃಪಕ್ಷ ಎಂದು ಕರೆದು ಯಾವುದೇ ಶುಭಕಾರ್ಯ ಮಾಡುತ್ತಿರಲಿಲ್ಲ ಅಷ್ಟೇ. ಆದರೆ ಸಾವಿರಾರು ರೂಪಾಯಿ ಖರ್ಚು ಮಾಡಿ ಪುರೋಹಿತರನ್ನು ಕರೆದು ಮಹಾಲಯದಂದು ಗಡದ್ದಾಗಿ ತಿಂದು ಹಿರಿಯರಿಗೆ ತರ್ಪಣ ಮಾಡುವ ಪೂಜಾ ವಿಧಿವಿಧಾನ ಬ್ರಾಹ್ಮಣೇತರರು ಹೆಚ್ಚಾಗಿ ಅನುಸರಿಸುತ್ತಿರಲಿಲ್ಲ. ಯಾಕೆಂದರೆ ಬ್ರಾಹ್ಮಣರು ತಮ್ಮ ಮನೆಯಲ್ಲಿ ವರ್ಷಕ್ಕೆ ಒಂದು ಬಾರಿ ಮಾತ್ರ ತಮ್ಮ ಹಿರಿಯರಿಗೆ ಗೌರವ ಅರ್ಪಿಸುತ್ತಾರೆ, ಆದರೆ ನಾವು ಬ್ರಾಹ್ಮಣೇತರರು ಪ್ರತಿದಿನವೂ ಒಂದಿಲ್ಲೊಂದು ರೀತಿಯಲ್ಲಿ ನಮ್ಮ ಹಿರಿಯರಿಗೆ ಗೌರವ ಕೊಡುತ್ತಿರುತ್ತೇವೆ. ಆದರೆ ಇತ್ತೀಚೆಗೆ ಬ್ರಾಹ್ಮಣರ ಕುರುಡು ಅನುಕರಣೆ ಶೂದ್ರ-ಮೇಲ್ವರ್ಗದಲ್ಲಿ ಹೆಚ್ಚಾಗುತ್ತಿದ್ದು ಮಹಾಲಯ- ತರ್ಪಣ ಎಂದೆಲ್ಲಾ ಶುರುವಾಗಿದೆ.

ವರ್ಷದ ಯಾವುದೇ ತಿಂಗಳು ಆಗಿರಲಿ ನಮ್ಮ ಮನೆಯಲ್ಲಿ ಯಾವುದೇ ವಿಶೇಷ ಅಡುಗೆ, ಪಾಯಸ ಸಿಹಿತಿಂಡಿ ಮಾಡಿದರೂ ಮೊದಲು ಒಂದು ತುತ್ತನ್ನು ಬಾಳೆ ಎಲೆಯಲ್ಲಿ ಬಡಿಸಿ ದೇವರ ಕೋಣೆಯಲ್ಲಿರುವ ಕೊಂಟು-ಪಲಯಿ ಅಥವಾ “ಪೆರಿಯೆರ ಗೂಡು” ಮೇಲೆ ಇಟ್ಟು ಹಿರಿಯರಿಗೆ ಕೈಮುಗಿದು, ನಂತರ ಆ ವಿಶೇಷ ವ್ಯಂಜನವನ್ನು ಮನೆಯವರೆಲ್ಲ ತಿನ್ನುವ ಪರಿಪಾಠ ಪುರಾತನ ಕಾಲದಿಂದಲೂ ನಡೆದು ಬರುತ್ತಿದೆ (ತುಳುವಿನಲ್ಲಿ ಪೆರಿಯೆರ್ ಅಂದರೆ ಹಿರಿಯರು). ಜೈನ ಮೂಲದ ಹಿಂದೂ ಕುಟುಂಬಗಳು ಇದಕ್ಕೆ ‘ಜೈನುಡೆ’ (ಜೈನ ಎಡೆ, ಜೈನ ಹಿರಿಯರಿಗೆ ಎಡೆ ಅರ್ಪಿಸುವುದು ) ಎಂದು ಕರೆಯುತ್ತಾರೆ. ನಮ್ಮ ಮನೆಯಲ್ಲಿ ಯಾವ ವಿಶೇಷ ಅಡುಗೆ ಮಾಡಿದರೂ ಅದನ್ನು ನಮ್ಮ ಹಿರಿಯರಿಗೆ ಮೊದಲು ಅರ್ಪಿಸಿ ಗೌರವಿಸಲೆಂದೇ ನಡೆದು ಬಂದ ಒಂದು ಪುರಾತನ ಪರಂಪರೆಯಿದು. ಮಹಾಲಯ ಅಮಾವಾಸ್ಯೆ ವರೆಗೆ ಕಾಯುವ ಅಗತ್ಯ ತುಳುನಾಡಿನ ಬ್ರಾಹ್ಮಣೇತರರಿಗೆ ಇಲ್ಲ. ಕೇವಲ ಸಂಸ್ಕೃತ ಮಂತ್ರಗಳನ್ನು ಹೇಳಿ ತರ್ಪಣ ಮಾಡಿದರೆ ಮಾತ್ರ ಅದು ನಮ್ಮ ಹಿರಿಯರಿಗೆ ಮುಟ್ಟುತ್ತದೆ ಎಂಬ ನಂಬಿಕೆ ಶೂದ್ರರಲ್ಲಿ ಇಲ್ಲ. ನಮ್ಮ ಮಾತೃಭಾಷೆ ತುಳು-ಕನ್ನಡಲ್ಲಿ ಹೇಳಿ ಅರ್ಪಿಸಿದರೂ ಅದು ಖಂಡಿತಾ ನಮ್ಮ ಹಿರಿಯರಿಗೆ ಮುಟ್ಟುತ್ತದೆ. ತುಳುವರ ಭೂತಾರಾಧನೆ ಕೂಡಾ ನಮ್ಮ ಹಿರಿಯರನ್ನು ಹಾಗೂ ಪ್ರಕೃತಿಯನ್ನು ಪೂಜಿಸುವ ಒಂದು ವಿಧಾನ ಅಷ್ಟೇ. 

ದೀಪಾವಳಿಯ ಮರುದಿನ ಬಲಿಪಾಡ್ಯದಂದು ನಾವು ಬಲೀಂದ್ರನ ಪೂಜೆ ಮಾಡುತ್ತೇವೆ. ಅದು ನಮ್ಮ ದ್ರಾವಿಡರ ಪೂರ್ವಜ ಬಲಿಚಕ್ರವರ್ತಿಯ ಜತೆ ನಮ್ಮ ಹಿರಿಯರನ್ನು ಹಾಗೂ ಕಟಾವಿಗೆ ಬಂದಿರುವ ಭತ್ತದ ಸುಗ್ಗಿ ಪೈರಿನ ಜತೆ ಭೂಮಿತಾಯಿಯನ್ನು ಪೂಜಿಸುವ ಒಂದು ವಿಧಿಯಿದು. 

ವಂಗ ದೇಶದವರಿಗೆ ಅಂದರೆ ಬಂಗಾಳಿಗಳಿಗೆ ಈ ಮಹಾಲಯ ಅಮಾವಾಸ್ಯೆ ಬಹಳ ಮುಖ್ಯ, ಯಾಕೆಂದರೆ ಬಂಗಾಲ ಮತ್ತು ಅಸ್ಸಾಮಿನ ದುರ್ಗಾದೇವಿಯ ಮೂರ್ತಿಕಾರರು ಮಳೆಗಾಲಕ್ಕಿಂತ ಮುಂಚೆಯೇ (ಜೂನೆ-ಜುಲೈಯಲ್ಲಿ) ಈ ನವರಾತ್ರಿಯ ದುರ್ಗಾ ಪೂಜೆಗಾಗಿ ಮೂರ್ತಿ ತಯಾರಿಸಲು ಬೇಕಾಗುವ ಸಾಮಾಗ್ರಿಗಳನ್ನು ಸಂಗ್ರಹಿಸಲು ಶುರು ಮಾಡುತ್ತಾರೆ. ಜೇಡಿ ಮಣ್ಣನ್ನು ತರಿಸಿ ಇಟ್ಟುಕೊಳ್ಳುತ್ತಾರೆ. ಯಾರಿಗೆ ಯಾವ ಗಾತ್ರದ ಯಾವ ವಿನ್ಯಾಸದ ದೇವಿಯ ಮೂರ್ತಿ ಬೇಕು ಎಂಬ ಆರ್ಡರ್ ಜುಲೈನಿಂದಲೇ ಪಡೆಯಲು ಶುರು ಮಾಡುತ್ತಾರೆ. ಆಗಿನಿಂದಲೇ ಮೂರ್ತಿ ತಯಾರಿ ಶುರುವಾಗುತ್ತದೆ. ಯಾಕೆಂದರೆ ಅದಕ್ಕೆ ಬಣ್ಣ ಹಚ್ಚಲು ಅದು ನೆರಳಿನಲ್ಲಿಯೇ ಸರಿಯಾಗಿ ಒಣಗ ಬೇಕು ತಾನೇ. (ಈಗ ಪಿ‌ಓ‌ಪಿ ಮೂರ್ತಿಗಳು ಹೆಚ್ಚುತ್ತಿರುವುದು ಖೇದಕರ). ಮೂರ್ತಿ ಒಣಗಿದ ನಂತರ ಅದಕ್ಕೆ ಬಣ್ಣ ಹಚ್ಚುವಿಕೆ ಮತ್ತು ಅಲಂಕಾರ ಶುರು ಮಾಡುತ್ತಾರೆ. ಆದರೆ ಒಂದೇ ಒಂದು ಕೆಲಸ ಮಾತ್ರ ಕೊನೆಯ ವರೆಗೆ ಬಾಕಿ ಇಡುತ್ತಾರೆ! ಅದೇನೆಂದರೆ ಮೂರ್ತಿಯ ಕಣ್ಣು! ಬಂಗಾಳದ ಎಲ್ಲಾ ಮೂರ್ತಿಕಾರರು ದುರ್ಗಾದೇವಿಯ ನೂರಾರು ಮೂರ್ತಿಯ ಕಣ್ಣನ್ನು ಚಿತ್ರಿಸುವುದು ಕೇವಲ ಮಹಾಲಯ ಅಮಾವಾಸ್ಯೆಯ ದಿನ ಮಾತ್ರ!  ಯಾಕೆಂದರೆ ಕಣ್ಣು ಚಿತ್ರಿಸಿದ ನಂತರವೇ ಆ ಮೂರ್ತಿಯಲ್ಲಿ ದೈವಿ ಶಕ್ತಿ ಪ್ರವಾಹಿಸುತ್ತದೆಯಂತೆ!. ಈ ಪವಿತ್ರ ಕೆಲಸಕ್ಕೆ ಬಂಗಾಳಿಯಲ್ಲಿ “ಚೊಕ್ಖು ದಾನ್” (ಚುಕ್ಷು ದಾನ ಅರ್ಥಾತ್ ಕಣ್ಣು ದಾನ) ಎಂದು ಕರೆಯುತ್ತಾರೆ.  ಮಹಾಲಯದ ದಿನ ಈ ಚೊಖ್ಖು ದಾನ್ ಪ್ರಥೆಯನ್ನು ಮುಖ್ಯ ಮೂರ್ತಿಕಾರ ಮುಗಿಸಿದರೆ ಮಾತ್ರ ಮೂರ್ತಿಯಲ್ಲಿ ದೈವಿ ಶಕ್ತಿ ಪ್ರವಾಹಿಸುವುದು. ಅದಕ್ಕೆ ಪುನಃ ಬ್ರಾಹ್ಮಣ ಪುರೋಹಿತ ಬೇಕಾಗುವುದಿಲ್ಲ. ಮೂರ್ತಿಕಾರ ಚೋಕ್ಖು ದಾನ ಮಾಡಿದ ಮರುದಿನ ಅಂದರೆ ನವರಾತ್ರಿಯ ಮೊದಲ ದಿನದಿಂದ ದುರ್ಗಾದೇವಿ ಮೂರ್ತಿಯು ಪೂಜೆಗೆ ಯೋಗ್ಯ.

ಇದರಲ್ಲಿ ನಾಸ್ತಿಕರ ಸಹಿತ ಎಲ್ಲರ ಮನಸ್ಸಿಗೆ ಮುದಕೊಡುವ ವಿಷಯವೆಂದರೆ, ಕೋಲ್ಕತ್ತಾ ಮಹಾನಗರ ಸಹಿತ ಪಶ್ಚಿಮ ಬಂಗಾಳ ಮತ್ತು ಅಸ್ಸಾಮಿನಲ್ಲಿ ದುರ್ಗಾ ದೇವಿಯ ಪವಿತ್ರ ಮೂರ್ತಿ ತಯಾರಕರಲ್ಲಿ ಶೇ.80% ರಷ್ಟು ಮೂರ್ತಿಕಾರರು ಮುಸ್ಲಿಮರು. ಮುಸ್ಲಿಮರೇ ಮೂರ್ತಿ ತಯಾರಕರು, ಮುಸ್ಲಿಮರೇ ಆ ದುರ್ಗಾ ಪ್ರತಿಮೆಗೆ ಮಹಾಲಯ ಅವಮಾವಾಸ್ಯೆ ದಿನದಂದು ಕಣ್ಣು ಚಿತ್ರಿಸಿ ಆ ಮೂರ್ತಿಯಲ್ಲಿ ದೈವಿ ಶಕ್ತಿ ತುಂಬುವವರು. ವಂಗದೇಶ (ಬಂಗಾಳ)ದಲ್ಲಿ ದುರ್ಗಾ ಮೂರ್ತಿಯಲ್ಲಿ ದೈವಿ ಶಕ್ತಿ ತುಂಬಲು ಬ್ರಾಹ್ಮಣನಿಂದ ಪ್ರಾಣ ಪ್ರತಿಷ್ಠೆಯ ಅಗತ್ಯವಿಲ್ಲ. ಮೂರ್ತಿಕಾರ ಯಾವುದೇ ಜಾತಿಯವನಿರಲಿ ಅವನು  ದೇವಿಯ ಕಣ್ಣು ಚಿತ್ರಿಸಿದ ನಂತರವೇ ಆ ಪವಿತ್ರ ಮೂರ್ತಿ ನವರಾತ್ರಿಯ ಒಂಬತ್ತು ದಿನ ಪೂಜೆಗೆ ಯೋಗ್ಯ. (ಮುಸ್ಲಿಮನೊಬ್ಬ ವೈದಿಕ ದೇವರಿಗೆ ಪರೋಕ್ಷ ಪ್ರಾಣ ಪ್ರತಿಷ್ಠೆ ಮಾಡುವುದೆ? ಎಂದು ಯಾವುದೇ ಹಿಂದುತ್ವ ನೇತಾರ ಈ ವರೆಗೆ ಆಕ್ಷೇಪಣೆ ಎತ್ತಿಲ್ಲವಂತೆ!).

ಮಹಾಲಯದಂದು ಮುಸ್ಲಿಂ ಮೂರ್ತಿಕಾರ ಕೂಡಾ ಶುದ್ಧ ಶಾಖಾಹಾರಿ ಆಗಿರುತ್ತಾನಂತೆ. ಕೊಲ್ಕತ್ತದಲ್ಲಿ ದುರ್ಗಾದೇವಿಯ ಮೂರ್ತಿಗೆ ಮತ್ತು ಪೆಂಡಾಲಿಗೆ ಬೇಕಾಗುವ ಅಲಂಕಾರಿಕ ಮತ್ತು ಸುಗಂಧ ವಸ್ತುಗಳನ್ನು ಒದಗಿಸುವವರು ಹಾಗೂ ದೇವಿಗೆ ಉಡಿಸುವ ಬಿಳಿ ಸೀರೆಯನ್ನು ತಯಾರಿಸುವ ಹೆಚ್ಚಿನ ನೇಕಾರರು ಕೂಡಾ ಮುಸ್ಲಿಮರಂತೆ. ಹಿಂದಿನ ಹಲವು ತಲೆಮಾರಿಂದ ಈ ಮುಸ್ಲಿಂ ಮೂರ್ತಿಕಾರರು ಮತ್ತು ಅಲಂಕಾರಿಕಾ ವಸ್ತು ತಯಾರಕರು ಇದೇ ಉದ್ಯೋಗದಲ್ಲಿ ತೊಡಗಿ ಕೊಂಡಿರುವವರು. ನವರಾತ್ರಿ ಮತ್ತು ದಸರೆ ಹಬ್ಬಗಳು ಬಂಗಾಳದಲ್ಲಿ ಲಕ್ಷಾಂತರ ಕುಶಲಕರ್ಮಿಗಳಿಗೆ ಜೀವನಾಧಾರವಾಗಿವೆ.

ಮಹಾರಾಷ್ಟ್ರ ಹಾಗೂ ನಮ್ಮ ಉತ್ತರ ಕರ್ನಾಟಕದಲ್ಲಿಯೂ ಗಣೇಶ ಚತುರ್ಥಿಗೆ ಬೇಕಾಗುವ ಗಣಪತಿಯ ಮೂರ್ತಿ ತಯಾರಿಸುವ ವೃತ್ತಿಯಲ್ಲಿಯೂ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಂ ಕಲಾಕಾರರು ತೊಡಗಿಕೊಂಡಿದ್ದಾರೆ (ನನ್ನ ತಂದೆ ರೇಲ್ವೆ ಇಲಾಖೆಯ ಹುಬ್ಬಳ್ಳಿ ವಲಯದಲ್ಲಿ ಸ್ಟೇಷನ್ ಮಾಸ್ಟರ್ ಆಗಿದ್ದರಿಂದ ನಾನು ಹುಟ್ಟಿ ಬೆಳೆದಿದ್ದು ಉತ್ತರ ಕರ್ನಾಟಕದಲ್ಲಿ). ನಮ್ಮ ನಾಡಿನಲ್ಲಿ ಕೋಮು ದ್ವೇಷ ಹುಟ್ಟು ಹಾಕಲು ಹೊಸ ಹೊಸ ಪಿಳ್ಳೆ ನೆಪ ಹುಡುಕುತ್ತಿರುವ ದ್ವೇಷಮಯ ವಾತಾವರಣ ಈಗ ಹೆಚ್ಚುತ್ತಿರುವ ಸಮಯದಲ್ಲಿ, ಪವಿತ್ರ ಹಿಂದೂ ಹಬ್ಬಗಳಲ್ಲಿ ಮುಸ್ಲಿಮರ ಕಲಾಕಾರಿಕೆಯೇ ಅತಿ ಮುಖ್ಯ ಪಾತ್ರ ವಹಿಸುತ್ತಿರುವುದು ಹಾಗೂ ಮುಸ್ಲಿಮರು ತಯಾರಿಸಿದ ಮೂರ್ತಿಗಳು ಕೋಟ್ಯಂತರ ಸನಾತನಿಗಳಿಂದಲೇ ಪೂಜೆಗೊಳ್ಳುತ್ತಿರುವುದು, ಕಗ್ಗತ್ತಲಲ್ಲಿ ದೂರದಲ್ಲೆಲ್ಲೋ ಮಿನುಗುತ್ತಿರುವ ಆಶಾ ಕಿರಣದಂತೆ ಕಾಣಿಸುತ್ತಿದೆ!

ಮಾರ್ಕಂಡೇಯ ಪುರಾಣದ ಮಹಾಲಯ ಕಥೆಯ ಪ್ರಕಾರ ಮಹಿಷಾಸುರನನ್ನು ಸೋಲಿಸಲು ಯಾವುದೇ ದೇವರಿಗೆ ಸಾಧ್ಯವಾಗಲಿಲ್ಲ. ಹಾಗಾಗಿ ತ್ರಿಮೂರ್ತಿಗಳಾದ ಶಿವ, ವಿಷ್ಣು, ಬ್ರಹ್ಮ ಮತ್ತು ಅವರ ಪತ್ನಿಯರಾದ ಪಾರ್ವತಿ ಲಕ್ಷ್ಮಿ ಸರಸ್ವತಿ ಇವರೆಲ್ಲಾ ತಮ್ಮತಮ್ಮ ದೈವಿಶಕ್ತಿಗಳನ್ನು ಒಂದೆಡೆ ಕೇಂದ್ರೀಕರಿಸಿ ಸೃಷ್ಟಿಸಿದ ಮಹಾಶಕ್ತಿಯೇ ದುರ್ಗಾದೇವಿ. ಈ ಎಲ್ಲಾ ದೇವರುಗಳು ತಮ್ಮ ತಮ್ಮ ದೈವಿ ಶಕ್ತಿಯನ್ನು ಮತ್ತು ಆಯುಧಗಳನ್ನೆಲ್ಲಾ ಮಹಾಶಕ್ತಿ ದುರ್ಗೆಗೆ ಧಾರೆ ಎರೆದು ಕೊಟ್ಟರಂತೆ. ಅವನ್ನೆಲ್ಲಾ ಹಿಡಿಯಲು ದುರ್ಗಾದೇವಿಗೆ ಅನೇಕ ಕೈಗಳು ಸೃಷ್ಟಿಯಾದವು. ತ್ರಿಮೂರ್ತಿಗಳು ಹಾಗೂ ಅವರ ಪತ್ನಿಯರು ಒಟ್ಟುಗೂಡಿ ದುರ್ಗಾದೇವಿಯನ್ನು ಹುಟ್ಟಿಸಿ ಭೂಮಿಗೆ ಕಳುಹಿಸಿದ ಪವಿತ್ರ ದಿನವೇ ಮಹಾಲಯ ಅಮಾವಾಸ್ಯೆ! ಆನಂತರ ಎಂಟು ದಿನಗಳ ಕಾಲ ದುರ್ಗಾದೇವಿ ಮಹಿಷಾಸುರನೊಂದಿಗೆ ಹೋರಾಡಿ, ಒಂಬತ್ತನೇ ದಿನ (ಮಹಾನವಮಿಯಂದು) ಮತ್ತೊಮ್ಮೆ ತನ್ನ ಆಯುಧಗಳನ್ನೆಲ್ಲ ದೇವತೆಗಳಿಂದ ಪೂಜಿಸಿ ಶಕ್ತಿ ಹೆಚ್ಚಿಸಿಕೊಂಡು ಹತ್ತನೆಯ ದಿನ ಮಹಿಷಾಸುರನನ್ನು ಮರ್ಧಿಸಿದಳಂತೆ. ಅದುವೇ ಮಹಾನವಮಿಯ ಆಯುಧ ಪೂಜೆ ಮತ್ತು ವಿಜಯ ದಶಮಿ ಅರ್ಥಾತ್ ದಸರೆ. 

ಆದರೆ ಕೆಲವು ಇತಿಹಾಸಕಾರರ ಪ್ರಕಾರ ಎಲ್ಲಾ ವೈದಿಕ ಪೂಜೆಗಳ ಹಿಂದೆ ಮೂಲತಃ ಬೌದ್ಧ ಧರ್ಮದ ಆಚರಣೆಗಳೇ ಇವೆ.  ಮೌರ್ಯ ಸಾಮ್ರಾಟ ಅಶೋಕನು ಕಳಿಂಗ ಯುದ್ಧದಲ್ಲಿ ಗೆದ್ದ ನಂತರ ತನ್ನ ಸುತ್ತ ಆಗಿರುವ ಘೋರ ರಕ್ತಪಾತ ಸಾವುನೋವು ನೋಡಿ ಬಹಳ ಪಶ್ಚಾತ್ತಾಪ ಪಟ್ಟು ತನ್ನೆಲ್ಲಾ ಅಸ್ತ್ರಶಸ್ತ್ರಗಳನ್ನು ತ್ಯಜಿಸಿ ಬೌದ್ಧ ಧರ್ಮ ಸ್ವೀಕರಿಸಲು ನಿರ್ಧರಿಸಿದ ದಿನವೇ ಮಹಾಲಯ ಅಮಾವಾಸ್ಯೆ (ಆಗ ಬೌದ್ಧ ಧರ್ಮವನ್ನೇ ಮಹಾ-ಆಲಯ ಅರ್ಥಾತ್ ದೊಡ್ಡ ಮನೆ ಅಥವಾ ಕೊನೆಯ ಮನೆ ಎಂದು ಕರೆದಿದ್ದಂತೆ). ಅದರ ನಂತರ ಸಾಮ್ರಾಟ ಅಶೋಕನು ಒಂಬತ್ತು ದಿನಗಳ ಕಾಲ ಉಪವಾಸ ಪ್ರಾಯಶ್ಚಿತ ಮಾಡಿ ಹತ್ತನೆಯ ದಿನ ಬೌದ್ಧ ಧಮ್ಮ ಸ್ವೀಕರಿಸಿದನು. ಇದರಿಂದಾಗಿಯೇ ಅಶೋಕನ ಸಾಮ್ರಾಜ್ಯದಲ್ಲಿ ಮೊತ್ತಮೊದಲು ಆಚರಣೆಗೆ ಬಂದಿದ್ದು ಮಹಾಲಯ, ನವರಾತ್ರಿ, ಮತ್ತು ದಸರೆ ಪರ್ವಗಳು. (“ಪರ್ವ ಶಬ್ಧ ತುಳುವಿನ ಪರ್ಬ” ಆಗಿದ್ದು).  2200 ವರ್ಷಗಳ ಹಿಂದೆ ಮಹಾಲಯ-ನವರಾತ್ರಿ-ದಸರೆ ಪರ್ವಗಳು ಅಶೋಕನು ಅಸ್ತ್ರ-ಶಸ್ತ್ರಗಳನ್ನು ತ್ಯಜಿಸಿ ತಾಮಸ ಹಿಂಸೆಯನ್ನು ತೊರೆದು ಶಾಂತಿಯುತ ಜೀವನ ನಡೆಸಲು ನಿರ್ಧರಿಸಿದ್ದ ಅತ್ಯಂತ ಪವಿತ್ರ ಸಂದರ್ಭವಾಗಿತ್ತು. ಆದರೆ ಈಗಿನ ನಮ್ಮ ವೈದಿಕ ನವರಾತ್ರಿ-ದಸರೆಯು ಹೊಸ ಶಸ್ತ್ರಾಸ್ತ್ರಗಳನ್ನು ಖರೀದಿಸಿ ಅವನ್ನು ಪೂಜಿಸಿ ಪ್ರದರ್ಶಿಸಿ, ಅವುಗಳನ್ನು ಹಿಂಸಾತ್ಮಕವಾಗಿ ಬಳಸಲು ಪ್ರೇರೇಪಿಸುವ ತಾಮಸಿಕ ಪರ್ವ ಆಗಿರುವುದು ವಿಪರ್ಯಾಸ.

 ಜೈನ ಪೂರಣಗಳ ಪ್ರಕಾರ 24 ತೀರ್ಥಂಕರರಿಗೆ ಅಂಗರಕ್ಷಕರಾಗಿ 48 ಯಕ್ಷ-ಯಕ್ಷಿಯರು ಇದ್ದಾರೆ, ಅವರಲ್ಲಿ ಒಬ್ಬಳು ಅಂಬಿಕಾ (ಉಲ್ಲಾಳ್ತಿ) ಎಂಬ ಯಕ್ಷಿ. ಅವಳಿಗೂ ಎಂಟು ಕೈಗಳಿದ್ದು ಅವಳ ರೂಪವೂ ದುರ್ಗಾದೇವಿಯಂತೆ ಇದೆ. ಈ ಯಕ್ಷಿಯನ್ನು ಕೇವಲ ಜೈನರು ಆರಾಧಿಸುತ್ತಾರೆ. ಜೈನ ಯಕ್ಷ-ಯಕ್ಷಿಯರ ಚರಿತ್ರೆ ವೈದಿಕ ದೇವರ ಚರಿತ್ರೆಗಿಂತ ಹೆಚ್ಚು ಹಳೆಯದು ಎನ್ನುತ್ತಾರೆ ನೈಜ ಚರಿತ್ರೆಕಾರರು. ಬೌದ್ಧರಲ್ಲಿಯೂ ಯಕ್ಷಪೂಜೆ ಇದೆ. ಬೌದ್ಧರ ಅತ್ಯಂತ ಕಾರ್ಣಿಕದ ಯಕ್ಷ ಎಂದರೆ ಸಾವಿರಾರು ಕೈಗಳುಳ್ಳ ಅವಲೋಕಿತೇಶ್ವರ. ಗೌತಮ ಬುದ್ಧನ ಹೆತ್ತ ತಾಯಿ ಮಾಯಾಳನ್ನು ‘ಮಹಾಮಾಯಾ’ ಎಂದು ಬೌದ್ಧರು ಆರಾಧಿಸುತ್ತಾರೆ. ಒಟ್ಟಾರೆ ಪ್ರಕೃತಿಯಲ್ಲಿ ಅಡಕವಾಗಿರುವ “ಪುನರ್ ಸೃಷ್ಟಿಯ (ಸ್ತ್ರೀತ್ವದ)” ಪ್ರತೀಕವೇ ಎಲ್ಲ ಧರ್ಮಗಳಲ್ಲಿ ಅನೇಕ ಕೈಗಳುಳ್ಳ ದೇವಿಯ ಪ್ರತಿಮೆಯಾಗಿ ಆರಾಧನೆಗೊಳ್ಳುತ್ತಿರುವುದು.

ಪ್ರವೀಣ್ ಎಸ್ ಶೆಟ್ಟಿ, ಮಂಗಳೂರು

ಚಿಂತಕರು

ಇದನ್ನೂ ಓದಿಸಾವರ್ಕರ್ ಮಾಂಸಾಹಾರಿ ಮಾತ್ರವಲ್ಲ, ಆಹಾರದಲ್ಲಿ ಅಹಿಂಸೆಯ ಕಡುವಿರೋಧಿ!

More articles

Latest article