ಚನ್ನೈ: “ತಮ್ಮ ಮಗಳು ಮದುವೆ ಮಾಡಿಕೊಂಡು ಸುಂದರ ಸಂಸಾರ ಕಟ್ಟಿಕೊಂಡಿರುವಾಗ, ಇತರ ಮಹಿಳೆಯರಿಗೆ ಪ್ರಾಪಂಚಿಕ ಜೀವನ ತ್ಯಜಿಸಿ ತಮ್ಮ ಯೋಗ ಕೇಂದ್ರದಲ್ಲಿ ಸನ್ಯಾಸಿಗಳಳಾಗಿ ಬದುಕುವಂತೆ ಇಷಾ ಫೌಂಡೇಷನ್ನ ಸದ್ಗುರು ಜಗ್ಗಿ ವಾಸುದೇವ ಅವರು ಪ್ರಚೋದಿಸುವುದು ಏಕೆ” ಎಂದು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಸ್.ಎಂ. ಸುಬ್ರಮನಿಯನ್ ಮತ್ತು ವಿ. ಸಿವಜ್ಞಾನಂ ಅವರು ಡೋಂಗಿ ಆಧ್ಯಾತ್ಮವಾದಿ ಜಗ್ಗಿವಾಸುದೇವ್ ಗೆ ಪ್ರಶ್ನೆ ಮಾಡಿದ್ದಾರೆ.
ಕೋಯಮತ್ತೂರ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಎಸ್. ಕಾಮರಾಜ ಅವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಸೋಮವಾರ ಈ ಪ್ರಶ್ನೆ ಎತ್ತಿದ್ದಾರೆ. 42 ಮತ್ತು 39 ವಯಸ್ಸಿನ ಸುಶಿಕ್ಷಿತರಾದ ತಮ್ಮ ಇಬ್ಬರು ಹೆಣ್ಣು ಮಕ್ಕಳ ತಲೆಕೆಡಿಸಿ ಅವರನ್ನು ಶಾಶ್ವತವಾಗಿ ತಮ್ಮ ಯೋಗ ಕೇಂದ್ರದಲ್ಲಿ ನೆಲೆಸುವಂತೆ ಮಾಡಲಾಗಿದೆ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಅನುಮಾನಗಳನ್ನು ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಶಿವಜ್ಞಾನಂ ಅವರು ಇಷಾ ಫೌಂಡೇಷನ್ ಪರ ವಕೀಲ ಕೆ. ರಾಜೇಂದ್ರ ಕುಮಾರ ಅವರಿಂದ ಉತ್ತರ ಬಯಸಿ ಪ್ರಸ್ತುತ ಪ್ರಶ್ನೆ ಕೇಳಿದ್ದಾರೆ.
ವಿಭಾಗೀಯ ಪೀಠದ ಮುಂದೆ ಹಾಜರಾಗಿದ್ದ ಅರ್ಜಿದಾರರ ಪುತ್ರಿಯರು, “ಕೊಯಮತ್ತೂರಿನ ವೆಲ್ಲಿನಗಿರಿ ತಪ್ಪಲಿನಲ್ಲಿರುವ ಯೋಗ ಕೇಂದ್ರದಲ್ಲಿ ತಮ್ಮ ಸ್ವಂತ ಇಚ್ಛೆಯ ಮೇರೆಗೆ ನೆಲೆಸಿರುವುದಾಗಿ ಮತ್ತು ಯಾರೂ ಅವರನ್ನು ತಮ್ಮ ಇಚ್ಛೆಗೆ ವಿರುದ್ಧವಾಗಿ ಬಂಧಿಸಿಲ್ಲ” ಎಂದು ತಮ್ಮ ಅಹವಾಲುಗಳನ್ನು ಸಲ್ಲಿಸಲು ಪ್ರಯತ್ನಿಸಿದರು. ಆ ವೇಳೆ ಪೀಠದ ಹಿರಿಯ ನ್ಯಾಯಾಧೀಶರು, “ನಿಮ್ಮದು ಆಧ್ಯಾತ್ಮಿಕ ದಾರಿ ಎಂದು ಹೇಳಿಕೊಳ್ಳುತ್ತೀರಿ. ನಿಮ್ಮ ಹೆತ್ತವರನ್ನು ನಿರ್ಲಕ್ಷಿಸುವುದು ಪಾಪವೆಂದು ನಿಮಗನ್ನಿಸುವುದಿಲ್ಲವೇ? ‘ಎಲ್ಲರನ್ನು ಪ್ರೀತಿಸಿ ಮತ್ತು ಯಾರನ್ನೂ ದ್ವೇಷಿಸಬೇಡಿ ‘ ಎನ್ನುವುದು ಭಕ್ತಿಯ ತತ್ವವಾಗಿದೆ. ಆದರೆ ನಿಮ್ಮಲ್ಲಿ ಹೆತ್ತವರ ಬಗ್ಗೆ ನೀವು ದ್ವೇಷವನ್ನೇ ತುಂಬಿಕೊಂಡಿದ್ದೀರಿ. ಅವರನ್ನು ಗೌರವಯುತವಾಗಿ ಸಂಬೋಧಿಸಲಾಗದಷ್ಟು ದ್ವೇಷ ಸರಿಯೇ” ಎಂದು ಪ್ರಶ್ನಿಸಿದರು.
ಇಷಾ ಫೌಂಡೇಷನ್ ವಿರುದ್ಧ ಅನೇಕ ಕ್ರಿಮಿನಲ್ ಪ್ರಕರಣಗಳಿವೆ. ಫೌಂಡೇಷನ್ನ ಯೋಗಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರ ಮೇಲೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲ ಎಂ. ಪುರುಷೋತ್ತಮನ್ ತಿಳಿಸಿದರು. ಈ ಸಂಬಂಧ ಪಬ್ಲಿಕ್ ಪ್ರಾಸಿಕ್ಯೂಟರ್ ಇ. ರಾಜ್ ತಿಲಕ್ ಅವರಿಗೆ ನಿರ್ದೇಶನ ನೀಡಿದ ನ್ಯಾಯಮೂರ್ತಿಗಳು, ಫೌಂಡೇಷನ್ನಿಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಪಟ್ಟಿ ಮಾಡಿ ಅಕ್ಟೋಬರ್ 4 ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದರು.