ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಡಿಎಂಕೆ ಸಚಿವ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿರುವ ಕೆ ಪೊನ್ಮುಡಿ ಮತ್ತು ಅವರ ಪತ್ನಿ ವಿಶಾಲಾಕ್ಷಿ ಅವರಿಗೆ ಮದ್ರಾಸ್ ಹೈಕೋರ್ಟ್ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಸಚಿವ ಪೊನ್ಮುಡಿ ಹಾಗೂ ಅವರ ಪತ್ನಿ ತಲಾ 50 ಲಕ್ಷ ರೂಪಾಯಿ ದಂಡ ಪಾವತಿಸಬೇಕು. ಒಂದು ವೇಳೆ ದಂಡ ಪಾವತಿಸಲು ವಿಫಲವಾದಲ್ಲಿ ಆರೋಪಿತ ದಂಪತಿ ಆರು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪು ನೀಡಿದೆ.
1996 ರಿಂದ 2001ರ ವರೆಗಿನ ಡಿಎಂಕೆ ನೇತೃತ್ವದ ಸರ್ಕಾರದಲ್ಲಿ ಪೊನ್ಮುಡಿ ಅವರು ರಾಜ್ಯ ಸಾರಿಗೆ ಸಚಿವರಾಗಿದ್ದರು. ಈ ಸಂದರ್ಭದಲ್ಲಿ 1.4 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಎರಡು ವರ್ಷಕ್ಕಿಂತ ಹೆಚ್ಚಿನ ಸೆರಾವಾಸ ಶಿಕ್ಷೆಗೆ ಗುರಿಯಾದರೆ, ಅಂತಹವರ ಶಾಸಕ ಸ್ಥಾನ ಸಹಜವಾಗಿಯೇ ರದ್ದುಗೊಳ್ಳಲಿದೆ. ಆದರಂತೆ ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ 1951ರ ಜನಪ್ರತಿನಿಧಿ ಕಾಯ್ದೆಯ ಅನುಸಾರ ಶಾಸಕ ಸ್ಥಾನದಿಂದ ಅನರ್ಹಗೊಳ್ಳಲಿದ್ದಾರೆ.
ಮದ್ರಾಸ್ ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ಕೋರಿ ಪೊನ್ನುಡಿ ಅವರು ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.