ಮಧ್ಯ‍ಪ್ರದೇಶ: ಸಾಲ ತೀರಿಸಲು ಪತ್ನಿಯನ್ನೇ ಮಾರಿದ ಪತಿರಾಯ!

Most read

 ಇಂದೋರ್‌: ಮಧ್ಯ‍ಪ್ರದೇಶದ ಧಾರ್‌ ಜಿಲ್ಲೆಯಲ್ಲಿ ಅಪರೂಪ ಎನ್ನಬಹುದಾದ ಘಟನೆಯೊಂದು ನಡೆದಿದೆ. ಈ ಜಿಲ್ಲೆಯ ವ್ಯಕ್ತಿಯೊಬ್ಬ ಸಾಲ ತೀರಿಸುವ ಉದ್ದೇಶದಿಂದ ತನ್ನ  ಪತ್ನಿಯನ್ನೇ ರೂ.50 ಸಾವಿರಕ್ಕೆ ಮಾರಾಟ ಮಾಡಿದ್ದಾನೆ. ಮಾರಾಟದ ಪ್ರಕಾರ ತನ್ನ ಸ್ನೇಹಿತನ ಜತೆ ದೈಹಿಕ ಸಂಬಂಧ ಬೆಳೆಸುವಂತೆಯೂ  ಒತ್ತಾಯಿಸಿದ್ದಾನೆ.

ಪತಿಯ ಈ ವರ್ತನೆಯಿಂದ ಬೇಸತ್ತ ಮಹಿಳೆಯು ಇಂದೋರ್‌ ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಪರಾಧದ ಗಾಂಭೀರ್ಯವನ್ನು ಪರಿಗಣಿಸಿ, ಪೊಲೀಸರು ಪ್ರಕರಣವನ್ನು ‘ಶೂನ್ಯ’ ಎಫ್‌ ಐ ಆರ್ ಎಂದು ದಾಖಲಿಸಿ, ಧಾರ್ ಪೊಲೀಸರಿಗೆ ಪ್ರಕರಣವನ್ನು  ವರ್ಗಾಯಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಶೂನ್ಯ ಎಫ್ ಐ ಆರ್ ಎಂದರೆ ಅಪರಾಧ ನಡೆದ ಸ್ಥಳದ ಬಗ್ಗೆ ಪರಿಗಣಿಸದೆ, ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದಾಗಿದೆ.

ನನ್ನ ಪತಿ ಜೂಜು ಆಡುವ ಹುಚ್ಚು ಹೊಂದಿದ್ದು, ಈ ದುರಭ್ಯಾಸದಿಂದ ಆತ ಸಾಲ ಮಾಡುತ್ತಲೇ ಇದ್ದ. ಇದರಿಂದ ಆತನ ಸಾಲವೂ ಹೆಚ್ಚುತ್ತಿತ್ತು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಸಾಲ ಹೆಚ್ಚಾದ ಕಾರಣ ಪತಿರಾಯ ತನ್ನನ್ನು ಮಾರಾಟ ಮಾಡಿರುವುದಾಗಿ ತಿಳಿಸಿ ಸಾಲ ನೀಡಿದ್ದ ತನ್ನ ಸ್ನೇಹಿತನೊಂದಿಗೆ ದೈಹಿಕ ಸಂಬಂಧ ಹೊಂದಲು ಒತ್ತಾಯಿಸಿದ್ದಾನೆ ಎಂದೂ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

 ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ. ತಲೆಮರೆಸಿಕೊಂಡಿರುವ ಸಂತ್ರಸ್ತೆಯ ಪತಿ ಮತ್ತು ಆತನ ಸ್ನೇಹಿತನಿಗಾಗಿ ಹುಡುಕಾಟ ನಡೆಸಲಾಗಿದೆ ಎಂದು ಧಾರ್‌ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೀತೇಶ್ ಕುಮಾರ್ ಗರ್ಗ್ ತಿಳಿಸಿದ್ದಾರೆ.

More articles

Latest article