ಮಂಡ್ಯ: ಜಿಲ್ಲೆಯ ಮದ್ದೂರಿನಲ್ಲಿ ಗಣೇಶೋತ್ಸವದ ಮೆರವಣಿಗೆ ಸಂದರ್ಭದಲ್ಲಿ ಘರ್ಷಣೆ ನಡೆದಿದೆ. ಮಸೀದಿ ಮುಂಭಾಗದಲ್ಲಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ಪೊಲೀಸರು ಲಾಠಿ ಪ್ರಹಾರ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ.
ಮದ್ದೂರು ಪಟ್ಟಣದಲ್ಲಿ ಅಘೋಷಿತ ಬಂದ್ ನಿರ್ಮಾಣವಾಗಿದೆ. ಎರಡು ಗುಂಪುಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಗಣೇಶೋತ್ಸವ ಮತ್ತು ಮಸೀದಿ ಮೇಲೆ ಕಲ್ಲು ತೂರಾಟ ನಡೆದಿದೆ ಎನ್ನಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಪೊಲೀಸರು, ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದಿದ್ದು, ಪೊಲೀಸರು ಮನವಿ ಮಾಡಿಕೊಂಡರೂ ಸಾರ್ವಜನಿಕರು ಪ್ರತಿಭಟನೆ ಮುಂದುವರೆಸಿದ್ದಾರೆ. ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ನಡೆಸಲಾಗಿದೆ.
ಗಣಪತಿ ಉತ್ಸವ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಿ ನಿಷೇಧಾಜ್ಞೆ ಹೇರಲಾಗಿದ್ದರೂ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ 20ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಮದ್ದೂರಿನಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಮುಂಜಾಗ್ರತಾ ಕ್ರಮವಾಗಿ ಪ್ರವಾಸಿ ಮಂದಿರ ವೃತ್ತದಿಂದ ಪೇಟೆಯ ರಸ್ತೆಗಳಲ್ಲಿನ ಎಲ್ಲಾ ಅಂಗಡಿಗಳನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ. ಸದ್ಯ ಮದ್ದೂರಿನಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದು, ನಾಳೆಯೂ ನಿಷೇಧಾಜ್ಞೆ ಮುಂದುವರಿಯಲಿದೆ.
ಪ್ರಕರಣ ಕುರಿತು ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ತಮಿಳುನಾಡು ಕಾಲೋನಿಯಿಂದ ಹೊರಟ ಮೆರವಣಿಗೆ ಮಸೀದಿ ಬಳಿ ಬಂದ ನಂತರ ಕಲ್ಲು ತೂರಾಟ ನಡೆದಿದೆ. ನಂತರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ ಎಂದು ತಿಳಿಸಿದ್ದಾರೆ.
ಇತ್ತ ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದ್ದು, ಕಲ್ಲು ತೂರಾಟ ನಡೆಸಿದವರನ್ನು ಬಂದಿಸಲು ಖಡಕ್ ಸೂಚನೆ ನೀಡಿದ್ದಾರೆ.
ಗೃಹ ಸಚಿವ ಡಾ. ಪರಮೇಶ್ವರ್ ಪ್ರತಿಕ್ರಿಯಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಕ್ರಮ ಜರುಗಿಸಿದ್ದಾರೆ. ಪ್ರಕರಣಕ್ಕೆ ಕಾರಣರಾದವರನ್ನು ಬಂಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.