ತುಮಕೂರು: ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಕಲ್ಲುತೂರಾಟ ನಡೆಸಿದವರ ಜತೆಗೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತರೂ ಸೇರಿಕೊಂಡಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಆರೋಪಿಸಿದ್ದಾರೆ.
ಮದ್ದೂರು ಗಲಭೆ ಕುರಿತು ತುಮಕೂರಿನಲ್ಲಿ ಮಾತನಾಡಿದ ಅವರು ಈಗಾಗಲೇ ಪ್ರಕರಣಕ್ಕೆ ಸಂಭಂಧಪಟ್ಟಂತ 21 ಮಂದಿಯನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಕಲ್ಲುತೂರಾಟಕ್ಕೆ ಪ್ರಚೋದನೆ ನೀಡಿದವರು ಯಾರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಹಿಂದೂ ಪರ ಸಂಘಟನೆಯ ಕಾರ್ಯಕರ್ತರೂ ಭಾಗಿಯಾಗಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ. ತನಿಖೆ ಬಳಿಕ ನಿಜ ಏನೆಂದು ತಿಳಿದು ಬರಲಿದೆ ಎಂದು ಹೇಳಿದರು.
ಪೊಲೀಸರು ಏಕಾಏಕಿ ಲಾಠಿ ಚಾರ್ಜ್ ಮಾಡಿಲ್ಲ. ಪ್ರತಿಭಟನಾಕಾರರ ಮನವೊಲಿಸಲು ಪೊಲೀಸರು ಸಾಕಷ್ಟು ಶ್ರಮಿಸಿದ್ದಾರೆ. ಪರಿಸ್ಥಿತಿ ಕೈ ಮೀರಿದಾಗ ಲಾಠಿ ಪ್ರಹಾರ ಮಾಡಿದ್ದಾರೆ ಎಂದರು.
ಇತ್ತ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅನಗತ್ಯವಾಗಿ ಪ್ರಚೋದನೆ ಮಾಡುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಸಮಾಜದ ಸ್ವಾಸ್ಥ್ಯ ಕೆಡಿಸಲು ಕಾದಿರುತ್ತಾರೆ. ಆದರೂ ಅನಗತ್ಯವಾಗಿ ಗುಂಪು ಸೇರಿ ಗಲಾಟೆ ಮಾಡಿಸಿದವರು ಮತ್ತು ಮಾಡಿದವರಿಬ್ಬರ ಮೇಲೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಇನ್ನು ಮಂಡ್ಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಮದ್ದೂರಿನ ರಾಮ್ ರಹೀಮ್ ನಗರದಲ್ಲಿ ಕಳೆದ ರಾತ್ರಿ ಗಣೇಶ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣ ಸಂಬಂಧ 21 ಮಂದಿಯನ್ನು ಬಂಧಿಸಲಾಗಿದ್ದು, ಬಂಧಿತರೆಲ್ಲರೂ ಮುಸಲ್ಮಾನರು ಎಂದ ಅವರು, ಯಾರೇ ತಪ್ಪು ಮಾಡಿದ್ದರೂ ಮುಲಾಜಿಲ್ಲದೆ ಹಿಂದೂ ಮುಸ್ಲಿಂ ಯಾರೇ ಆಗಿದ್ದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮೊದಲಿಗೆ ಮಸೀದಿ ಕಡೆಯಿಂದ ಕಲ್ಲು ತೂರಾಟ ಆರಂಭವಾಯಿತು ಎಂಬ ಮಾಹಿತಿ ಲಭ್ಯವಾಗಿದೆ. ತಕ್ಷಣವೇ ಕ್ರಮ ಕೈಗೊಳ್ಳಲಾಗಿದೆ. ಆದರೂ ಬಿಜೆಪಿ ಹಾಗೂ ಜೆಡಿಎಸ್ ಪ್ರಕರಣದಲ್ಲಿ ರಾಜಕೀಯ ಮಾಡಡುತ್ತಿದೆ ಎಂದು ಟೀಕಿಸಿದರು.
ಪೊಲೀಸರು ತ್ವರಿತವಾಗಿ ಕ್ರಮ ಕೈಗೊಂಡಿರುವುದನ್ನು ಶ್ಲಾಘಿಸಬೇಕು.ನಿಜವಾದ ಕಾಳಜಿ ಇದ್ದರೆ ಬಿಜೆಪಿ ಜೆಡಿಎಸ್ ಮುಖಂಡರು ಹೆಚ್ಚಿನ ತನಖೆಗೆ ಆಗ್ರಹಿಸಬಹುದಾಗಿತ್ತು. ಆದರೆ ಪ್ರತಿಭಟನೆ ನೆಪದಲ್ಲಿ ಕೋಮುಗಲಭೆಗೆ ಪ್ರಚೋದನೆ ನೀಡುತ್ತಿರುವುದು ಸರಿಯಲ್ಲ. ನಮ್ಮ ಸರ್ಕಾರದ ಅಭಿವೃದ್ಧಿ ಯೋಜನೆಗಳು ಪ್ರತಿಪಕ್ಷಗಳ ಬಾಯಿ ಮುಚ್ಚಿಸಿವೆ. ಕೋಮುಗಲಭೆ ಬಿಟ್ಟರೆ ಅವರಿಗೆ ಮತನಾಡಲು ಏನೂ ಉಳಿದಿಲ್ಲ. ರಾಜಕೀಯ ಇಚ್ಛಾಶಕ್ತಿ ಇದ್ದರೆ ಜನಪರ ವಿಷಯಗಳನ್ನು ಇಟ್ಟುಕೊಡು ಹೊರಾಟ ಮಾಡಲಿ ಎಂದು ಚಲುವರಾಯಸ್ವಾಮಿ ಸವಾಲು ಹಾಕಿದರು