ಹೈದರಾಬಾದ್: ಫ್ರಾಂಕ್ ಫರ್ಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದ ಲುಫ್ತಾನ್ಸಾ ಏರ್ಲೈನ್ಸ್ ನ ಬೋಯಿಂಗ್ 787–9 ಡ್ರೀಮ್ಲೈನರ್ ವಿಮಾನವು ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಮತ್ತೆ ಫ್ರಾಂಕ್ಫರ್ಟ್ ವಿಮಾನ ನಿಲ್ದಾಣಕ್ಕೆ ಮರಳಿದೆ. ಈ ವಿಮಾನ ಹೈದರಾಬಾದ್ ಗೆ ಹೊರಟಿತ್ತು.
ವಿಮಾನ ಹಾರಾಟ ಆರಂಭಿಸುತ್ತಿದ್ದಂತೆ ಬಾಂಬ್ ಬೆದರಿಕೆ ಬಂದಿದೆ. ಈ ಕಾರಣದಿಂದ ವಿಮಾನವು ಫ್ರಾಂಕ್ಫರ್ಟ್ ವಿಮಾನ ನಿಲ್ದಾಣಕ್ಕೆ ವಾಪಸ್ ಆಗಿ ಲ್ಯಾಂಡಿಂಗ್ ಆಗಿದೆ ಎಂದು ಲುಫ್ತಾನ್ಸಾ ವಿಮಾನಯಾನ ಸಂಸ್ಥೆ ಮಾಹಿತಿ ನೀಡಿದೆ.
ವಿಮಾನವು ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣದಿಂದ ಭಾನುವಾರ ಮಧ್ಯಾಹ್ನ 2.15ಕ್ಕೆ ಟೇಕಾಫ್ ಆಗಿತ್ತು. ಸೋಮವಾರ ಮಧ್ಯಾಹ್ನ 1.20ಕ್ಕೆ ಹೈದರಾಬಾದ್ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿತ್ತು. ಸದ್ಯ ಎಲ್ಲ ಪ್ರಯಾಣಿಕರು ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇಂದು ಸೋಮವಾರ ಹೈದರಾಬಾದ್ಗೆ ಪ್ರಯಾಣ ಬೆಳಸಲಿದ್ದಾರೆ ಎಂದು ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.