ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಸ್ಥಾನ; ಪರಾಮರ್ಶಿಸಿ ತಪ್ಪು, ಸರಿಪಡಿಸಿಕೊಳ್ಳುತ್ತೇವೆ: ಡಿಸಿಎಂ ಡಿ.ಕೆ. ಶಿವಕುಮಾರ್

Most read

“ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿ ಎಡವಿದೆ ಎಂದು ಪರಾಮರ್ಶನೆ ನಡೆಸಿ, ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯನ್ನು ಎದುರಿಸಲು ಸಿದ್ದತೆ ಮಾಡಿಕೊಳ್ಳಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಎಐಸಿಸಿ ಸತ್ಯ ಶೋಧನಾ ಸಮಿತಿ ಸಭೆ ಬಗ್ಗೆ ಕೇಳಿದಾಗ ಅವರು ಉತ್ತರಿಸಿದ ಅವರು, “ಲೋಕಸಭೆಯಲ್ಲಿ 1 ಸ್ಥಾನ ಹೊಂದಿದ್ದವರು ಈಗ 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇವೆ. ನಾವು 14-15 ಸೀಟುಗಳನ್ನು ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಎಲ್ಲಿ ಎಡವಿದ್ದೇವೆ ಎಂದು ಎಐಸಿಸಿಯ ಸಮಿತಿ ಸಮ್ಮುಖದಲ್ಲಿ ಇಂದು ಪರಾಮರ್ಶನೆ ನಡೆಯಲಿದೆ. ಕೇವಲ ಕರ್ನಾಟಕ ಮಾತ್ರವಲ್ಲದೇ ದೇಶದೆಲ್ಲೆಡೆ ಈ ಪ್ರಕ್ರಿಯೆ ಮಾಡಲಾಗುತ್ತಿದೆ. ನಾನು ಕೂಡ ನಾಲ್ಕು ವಿಭಾಗಗಳ ವರದಿ ಕಳುಹಿಸಿಕೊಡಲಿದ್ದೇನೆ. ನಾನು ಹಾಗೂ ಮುಖ್ಯಮಂತ್ರಿಗಳು ಸೇರಿ ನಮ್ಮ ನಾಯಕರ ಜತೆ ಚರ್ಚೆ ಮಾಡಿ ಪರಾಮರ್ಶನೆ ಮಾಡುತ್ತೇವೆ.

ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಅತ್ಯುತ್ತಮ ಅಭ್ಯರ್ಥಿಗಳನ್ನು ನಾವು ಕಣಕ್ಕಿಳಿಸಿದ್ದೆವು. ಎಲ್ಲಾ ಕಡೆ ಒಟ್ಟಾಗಿ ಚುನಾವಣೆ ನಡೆಸಲಾಗಿತ್ತು. ಆದರೆ ಜನರ ಮಧ್ಯೆ ಗುಪ್ತಗಾಮಿನಿಯಲ್ಲಿ ಯಾವ ವಿಚಾರ ಪರಿವರ್ತನೆ ಮಾಡಿದೆ ಎಂಬುದನ್ನು ಪತ್ತೆ ಹಚ್ಚಬೇಕು. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪರಿಣಾಮಕಾರಿಯಾಗಲಿದೆ ಎಂದು ನಾವು ಮೊದಲೇ ಅಂದಾಜಿಸಿದ್ದೆವು. ಮುಂದಿನ ದಿನಗಳಲ್ಲೂ ಅವರು ಒಟ್ಟಾಗಿರುತ್ತಾರೆ ಎಂದು ನಮಗೆ ಗೊತ್ತಿದೆ. ಅವರು ಹಾಗೆಯೇ ಇರಲಿ. ಅವರು ಒಟ್ಟಾಗಿದ್ದರೂ ನಾವು ಹೇಗೆ ಸಿದ್ಧತೆ ಮಾಡಿಕೊಳ್ಳಬೇಕೋ ಮಾಡುತ್ತೇವೆ.” ಎಂದು ಹೇಳಿದ್ದಾರೆ.

ಎಸ್ಐಟಿ ತನಿಖೆ ನಡೆಯುತ್ತಿರುವಾಗ ಇಡಿ ದಾಳಿ ಅನಾವಶ್ಯಕವಾಗಿತ್ತು:

ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ ದಾಳಿ ನಡೆಸಿರುವ ಬಗ್ಗೆ ಕೇಳಿದಾಗ, “ಈ ಪ್ರಕರಣದಲ್ಲಿ ವಂಚನೆ ನಡೆದಿರುವುದು ಸತ್ಯ. ಈ ಪ್ರಕರಣದ ಸತ್ಯಾಸತ್ಯತೆ ನಮಗೆ ಗೊತ್ತಿದೆ. ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸುತ್ತಿದ್ದು, ಅಕ್ರಮವಾಗಿ ವರ್ಗಾವಣೆಯಾಗಿದ್ದ ಹಣವನ್ನು ಈಗಾಗಲೇ ವಶಪಡಿಸಿಕೊಳ್ಳುತ್ತಿದೆ. ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿನ ಪ್ರಮಾಣದ ಅವ್ಯವಹಾರವಾದರೆ ಸಿಬಿಐ ತನಿಖೆ ಮಾಡುವ ಅಧಿಕಾರವಿದೆ. ಈ ಎಲ್ಲಾ ತನಿಖೆ ಮುಕ್ತಾಯದ ನಂತರ ಈ ತನಿಖೆಗೆ ಸರಿಯಾಗಿ ನಡೆದಿದೆಯೇ ಎಂದು ಇ.ಡಿ ಪರಾಮರ್ಶನೆ ಮಾಡಬಹುದಿತ್ತು. ಆದರೆ ಇ.ಡಿ ಯವರು ಯಾವುದೇ ದೂರು ಇಲ್ಲದಿದ್ದ ಕಾರಣ, ದಾಳಿ ಮಾಡುವ ಅಗತ್ಯವಿರಲಿಲ್ಲ. ಇ.ಡಿ ಅವರು ಯಾವ ರೀತಿ ತನಿಖೆ ಮಾಡುತ್ತಿದ್ದಾರೆ, ಯಾವ ಪ್ರಕ್ರಿಯೆ ಮೇಲೆ ಮಾಡುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ. ಎಸ್ಐಟಿ ತನಿಖೆ ಮುಕ್ತವಾಗಿ ನಡೆಯುತ್ತಿದ್ದು, ತನಿಖೆಗೆ ಅಡಚಣೆಯಾಗಬಾರದು ಎಂಬ ಉದ್ದೇಶಕ್ಕೆ ಮಂತ್ರಿಗಳು ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿದ್ದಾರೆ. ನಾವು ಕೂಡ ಕ್ರಾಸ್ ಚೆಕ್ ಮಾಡಿದ್ದು, ಸಚಿವರು ಯಾವುದೇ ಸಹಿ ಮಾಡಿಲ್ಲ. ಅವರ ಹಸ್ತಕ್ಷೇಪವಿಲ್ಲ. ಕಾನೂನು ಪ್ರಕಾರ ತನಿಖೆ ನಡೆಯುತ್ತಿದ್ದು, ಈ ಮಧ್ಯೆ ಇ.ಡಿ ದಾಳಿ ಮಾಡಿದೆ. ನೋಡೋಣ ಏನು ಮಾಡುತ್ತಾರೆ” ಎಂದು ಉತ್ತರಿಸಿದರು.

ಈ ಹಿಂದೆ ಇ.ಡಿ ವಿರುದ್ಧ ಹೋರಾಟ ಮಾಡಿದ್ದೀರಿ, ಈ ದಾಳಿಯೂ ರಾಜಕೀಯ ಪ್ರೇರಿತ ಎಂದು ಅನಿಸುತ್ತದೆಯೇ ಎಂದು ಕೇಳಿದಾಗ, “ಅವರ ತನಿಖೆ ಮುಗಿಯಲಿ ನಂತರ ಮಾತನಾಡುತ್ತೇನೆ.” ಎಂದರು.

ಎಸ್ ಸಿಪಿ- ಟಿಎಸ್ ಪಿ ಹಣ ಪರಿಶಿಷ್ಟರಿಗೆ ವಿನಿಯೋಗವಾಗಲಿದೆ:

ಗ್ಯಾರಂಟಿ ಯೋಜನೆಗಳಿಗೆ ಎಸ್ ಸಿಪಿ, ಟಿಎಸ್ ಪಿ ಅನುದಾನ ಬಳಸಿರುವುದಕ್ಕೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವು ರಾಜ್ಯ ಮುಖ್ಯಕಾರ್ಯದರ್ಶಿಗಳಿಗೆ ನೋಟೀಸ್ ಜಾರಿ ಮಾಡಿರುವ ಬಗ್ಗೆ ಕೇಳಿದಾಗ, “ಇಡೀ ದೇಶದಲ್ಲಿ ಆಂಧ್ರ ಪ್ರದೇಶದ ನಂತರ ಕರ್ನಾಟಕದಲ್ಲಿ ನಾವು ಪರಿಶಿಷ್ಟರ ಕಲ್ಯಾಣಕ್ಕಾಗಿ ಪ್ರತ್ಯೇಕ ಅನುದಾನ ನೀಡಿ ಬಳಸಲು ಕಾಯ್ದೆ ತಂದಿದ್ದೇವೆ. ರಾಷ್ಟ್ರೀಯ ಆಯೋಗ ನೊಟೀಸ್ ಜಾರಿ ಮಾಡುವುದೇ ಆದರೆ ಅದು ಕೇಂದ್ರ ಸರ್ಕಾರಕ್ಕೆ ನೀಡಬೇಕು. ಈ ಅನುದಾನವನ್ನು ನಮ್ಮ ಸರ್ಕಾರ ಪರಿಶಿಷ್ಟ ಜಾತಿ ಅವರಿಗೆ ವಿನಿಯೋಗಿಸುತ್ತಿದೆ. ಇದಕ್ಕೆ ನೊಟೀಸ್ ನೀಡಿರುವ ರಾಷ್ಟ್ರೀಯ ಆಯೋಗಕ್ಕೆ ನಾಚಿಕೆಯಾಗಬೇಕು. ಎಸ್ ಸಿಪಿ, ಟಿಎಸ್ ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ” ಎಂದರು.

More articles

Latest article