ಲೌ ಪಾಲಿಟಿಕ್ಸ್

Most read

ಸಂವಿಧಾನದಲ್ಲಿರುವ ಫ್ರೆಟರ್ನಿಟಿ ಎಂದರೆ ಏನು ಅಂತ ಅಂದ್ಕೊಂಡಿದ್ದೀಯ? ಸಂಬಂಧ ..ನಂಟ.. ಯಾರನ್ನೇ ಆಗಲೀ ಪ್ರೀತಿ ಪ್ರೇಮ, ಸಮಾನತೆ ಘನತೆ ಇವುಗಳಿಂದಲೇ ನಾವು ಸಂಪರ್ಕಿಸ ಬೇಕು. ಈ ಪ್ರಿಯಾಂಬಲ್‌ ಗೆ ಬಿಲ್ಕುಲ್ ವಿರುದ್ಧವಾಗಿರೋದು ಈಗಿನ ನಮ್ಮ ಬದುಕಿನ ವ್ಯವಸ್ಥೆರೂಮಿ ಹರೀಶ್

ಕ್ವಿಯರ್ ಲೌ ರಾಜಕೀಯ, ಕ್ವಿಯರ್ ಸ್ತ್ರೀವಾದ ಎಂದರೇನು? ಇದರ ಇತಿಹಾಸ ಏನು? ಯಾರೆಲ್ಲಾ ಕ್ವಿಯರ್ ಆಗಬಹುದು?…..

ಒಂದು ಕಾಲದಲ್ಲಿ ಅಂದರೆ ಸುಮಾರು 1998-99ರ ಸಮಯದಲ್ಲಿ ಫಮಿಲ ಎಂಬ ವ್ಯಕ್ತಿ ಪರಿಚಯವಾದಳು. ಅವಳು ತನ್ನನ್ನು ತಾನು ಪರಿಚಯಿಸಿಕೊಳುತ್ತಿದ್ದುದ್ದು “ನಾನು ಫಮಿಲ, ದ್ವಿಲಿಂಗ ಕಾಮಿ, ಲೈಂಗಿಕ ಕಾರ್ಮಿಕ ಮತ್ತು ಹಿಜ್ರಾ” ನಮ್ಮ ಅರ್ವಿಂದ್‌ ನರೇನ್ (ವಕೀಲ, ಪ್ರೊಫೆಸರ್ ಮತ್ತು ಅಕಾಡೆಮಿಕ್) ಯಾವಾಗಲೂ ಹೇಳೋನು, “ಇದಕ್ಕಿಂತ ಕ್ವಿಯರ್ ರಾಜಕೀಯ ಬೇಕೆ? ಅವಳ ಪರಿಚಯನೇ ಇಡೀ ಕ್ವಿಯರ್ ರಾಜಕೀಯ ಹೇಳಿಬಿಡುತ್ತೆ”.

ಹಾಗಾದರೆ ಕ್ವಿಯರ್ ಎಂದರೇನು? ಆಂಗ್ಲ ಭಾಷೆಯಲ್ಲಿ ಕ್ವಿಯರ್ ಅಂದರೆ ಅಬ್ಸರ್ಡ್ ವಿಚಿತ್ರ, ವಿಭಿನ್ನ. ಆದರೆ ಅರ್ಥ ನೆಗೆಟಿವ್ ಆಗಿ ಇತ್ತು. ಪಾಶ್ಚಾತ್ಯ ದೇಶಗಳಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರು ಈ ಪದವನ್ನು ತಮ್ಮದಾಗಿಸಿಕೊಂಡು ಆತ್ಮಸ್ಥೈರ್ಯದಿಂದ ನಾವು “ಕ್ವಿಯರ್” ಎಂದು ಕರೆದುಕೊಳ್ಳಲು ಶುರು ಮಾಡಿದರಂತೆ.

ನಾವೊಂದಷ್ಟು ಜನ ನಮಗೆ ಈ ಭಾಷೆ ಅರ್ಥ ಆಗಲ್ಲ ಎನ್ನುವ ಕಾರಣಕ್ಕೆ ಈ ರಾಜಕೀಯಕ್ಕೆ ಬೇರೊಂದು ಹೆಸರಿಟ್ಟೆವು. ಲೌ ಪಾಲಿಟಿಕ್ಸ್…. ಅಂತ. ಇದು ನಡೆದದ್ದು 1999-2000ದಲ್ಲಿ. ಆ ದಿನ ನೆನಪಿದೆ…. ನಾನು ಫಮಿಲ, ಕಾಜೊಲ್, ನಿತಿನ್ ನಮ್ಮ ಆಫೀಸಿನ ಅಡುಗೆ ಮನೆಯ ಹಿಂದೆ ನಮ್ಮ ಸ್ಮೋಕಿಂಗ್ ಸ್ಪೇಸ್ನಲ್ಲಿ ಹಾಗೆ ಕೆಳಗೆ ಕೂತು ಸಿಗರೇಟ್ ಹೊಡೆಯುತ್ತಾ ಮಾತಾಡ್ತಾ ಇದ್ವಿ. ನಾನು ಫಮಿಲನ ರೇಗಿಸ್ತಾ ಇದ್ದೆ… “ಆಹಾಹಾ ಕಣೆ… ನೀನು ಆಯ್ಕೆ ಮಾಡ್ಕೊಂಡಿರೋ ಮೂರು ಪ್ರೇಮಿಗಳು ಅಮರ್ ಅಕ್ಬರ್ ಆಂತೊನಿ ಎಂಥಾ ದಡ್ಡರು ಅಂದ್ರೆ ಅವರ ಮುಖ ನೋಡಿದ್ರೆ ಪ್ರೀತಿ ಪ್ರೇಮ ಹೇಗೆ ಬರುತ್ತೆ…. ಎಲ್ಲರೂ ಟು ಬಿಟ್ ಪೀಸ್ಗಳ ಥರ ಇದ್ದಾರೆ” ಅಂದೆ. ಅವಳು ನಿತಿನ್ ಜೋರಾಗಿ ನಕ್ಕು…. “ನಿನ್ ಪ್ರಕಾರ ಬುದ್ಧಿ ಇರೋದು ಅಂದ್ರೇನ್ ಮಗ” ಅಂತ ಕೇಳಿದರು. ನನ್ನ ಬಳಿ  ಉತ್ತರ ಇರಲಿಲ್ಲ. ಏನ್ ಹೇಳಲಿ… ಬುದ್ಧಿ ಇರೋದು ಅಂದ್ರೆ ನಂ ತರ ರಾಜಕೀಯ ಮಾತಾಡೋದಾ, ಬದುಕೋದಾ?…..

ಫಮಿಲ ಎರಡನೆ ಸಿಗರೇಟ್ ಹಚ್ಚಿ ಕೇಳಿದ್ಲು… “ಅಲ್ಲ ಮಗ, ಸಂವಿಧಾನದಲ್ಲಿ ಇರೋದು ನಮ್ಮ ಇಚ್ಛೆಯಂತೆ ಪ್ರೇಮಿಸಬಹುದು ಅಂತ ತಾನೆ? ಅಂದ್ರೆ ಆಯ್ಕೆಯ ಹಕ್ಕು. ಸರಿ, ಪ್ರೀತಿ ಪ್ರೇಮಕ್ಕೆ ಯಾವ ಸರಹದ್ದುಗಳಿವೆ ಹೇಳು? ಇನ್ ಫ್ಯಾಕ್ಟ್ ಅಂತಹ ಹ್ಯಾಂಗ್ ಅಪ್ಸ್ ಇಲ್ಲದೇ ಇವರು ಈ ಜಾತಿಯವರು, ಇವರು ಈ ಧರ್ಮದವರು, ಇವರು ಎಡಗೈನಲ್ಲಿ ಬರೀತಾರೆ, ಇವರಿಗೆ ಬುದ್ದಿ ಇಲ್ಲ….ಇದೆಲ್ಲಾ ಒಂದು ಕಾರಣನಾ ಪ್ರೀತಿಸ್ದೇ ಇರೋಕ್ಕೆ? ನೀನು ಹೇಳಿದ್ದು ನೋಡಿದ್ರೆ ಮಾನಸಿಕವಾಗಿ ಡಿಸ್ಟರ್ಬ್‌ ಆದವರನ್ನು  ಯಾರೂ ಪ್ರೇಮಿಸಲೇ ಬಾರದು ಅಲ್ವ?… ಯಾಕೆ ಅವರಿಗೇ ಆ ಹಕ್ಕು ಇಲ್ವ? ನೀನೇ ಈಗ ನೋಡಕ್ಕೆ ಚೆನ್ನಾಗಿದ್ರೂ ಸಮಾಜದ ಪ್ರಕಾರ ನೀನು ಒವರ್ ಸೈಜು…. ಹಾಗಂತ ನಿನ್ನ ಯಾರೂ ಪ್ರೀತಿಸ್ದೇ ಇದ್ರೆ? ಅಂದ್ಲು.

ನನ್ನ ಎದೆ ದಸಕ್ ಅಂದೋಯ್ತು. ಒಂದೆರ್ಡು ದಿವಸ ಮಾತಾಡಲೇ ಇಲ್ಲ. ನನ್ನ ಅಜ್ಞಾನದಿಂದ ಬಹಳಷ್ಟು ಕಿರಿಯನಾದೆ ಎಂದೆನಿಸಿ ಅವಮಾನದಲ್ಲಿ ಸ್ವಲ್ಪ ದೂರನೇ ಉಳಿದೆ. ಮೂರುದಿನ ಬಿಟ್ಟ ಫಮಿಲ ನನ್ನ ಕರೆದು ಅಂದ್ಲು… “ಮಗಾ ಅದು ನೀನಲ್ಲ ಮಾತಾಡಿದ್ದು, ನಿನ್ನ ಬ್ರಾಮಣಿಕೆ. ಹೆದರ್ಕೊ ಬೇಡ. ಹೆಜ್ಜೆ ಹೆಜ್ಜೆನೂ ಸೂಕ್ಷ್ಮವಾಗಿ ತಿಳಿದು ಅರಿತು ನಡೆದರೆ ಪ್ರೀತಿ ಪ್ರೇಮಕ್ಕೆ ಸೀಮಾ ರೇಖೆಗಳಿಲ್ಲ, ಸರಹದ್ದುಗಳು ಹುಟ್ಟಲ್ಲ. ಪ್ರೀತಿ ಪ್ರೇಮ ಅಂದರೆ ಅದು ಬಹಳಾ ವಿಸ್ತಾರವಾದದ್ದು. ಸೆಕ್ಸ್ ಅದರ ಒಂದು ಭಾಗ. ಬಲವಂತವಿಲ್ಲದ, ಯಾವುದೇ ಹಿಡಿತಗಳಿಲ್ಲದ ಒಪ್ಪಿಗೆ ಇರುವ ಸಂಬಂಧಗಳು, ನಂಟುಗಳು. ಪ್ರೀತಿ ಪ್ರೇಮಕ್ಕೆ ಕೆಲವು ಪ್ರಿನ್ಸಿಪಲ್ಸ್ ಮತ್ತು ಎಥಿಕ್ಸ್ ಇವೆ”

ಅರ್ವಿಂದ್ ಆ ಕಾಲದಲ್ಲಿ ಹೋ ಅಂತ ಅಕಾಡೆಮಿಕ್ ಆಗಿ ಬರೆದಿದ್ದನ್ನ ಇವಳು ಬಹಳ ಸಿಂಪಲ್ ಆಗಿ ಹೇಳುತ್ತಿದ್ದಳು. “ನಮ್ಮ ರಾಜಕೀಯ ಪ್ರೇಮದ ರಾಜಕೀಯ. ಅಂದ್ರೆ ಯಾರು ಹೇಗಿದ್ದಾರೋ ಅವರನ್ನ ಹಾಗೇ ಒಪ್ಪಿಕೊಂಡು, ಅವರೊಂದಿಗೆ ಬಿಡಲಾರದ ನಂಟು ಬೆಳೆಸಿಕೊಳ್ಳುವುದು”. ಪ್ರೇಮದ ನಂಟುಗಳನ್ನು ಬೆಳೆಸಲು ಎಷ್ಟು ಜವಾಬ್ದಾರಿ ಬೇಕೋ ಅದು ಒಂದೇ ರಾತ್ರಿಯ ಪ್ರೇಮವಾಗಿದ್ದರೂ ಆ ನಂಟು ಬಿಡುವುದರಲ್ಲೂ ಜವಾಬ್ದಾರಿ ಇರಬೇಕು. ಪ್ರೇಮ ಅಧಿಕಾರದ ಅಡಿಯಲ್ಲಿ ಬದುಕಲ್ಲ, ಅದಕ್ಕೆ ಸಮಾನತೆ ಬೇಕು, ನಂಟು ಬೇಕು, ನ್ಯಾಯ ಬೇಕು ಮತ್ತೆ ಸ್ವಾತಂತ್ರ್ಯ ಬೇಕು. ನಮ್ಮ ಸಂವಿಧಾನದ ಪ್ರಿಯಾಂಬಲ್ ಬೇರೇನಲ್ಲ…. ಲೌ ರಾಜಕೀಯದ ಅಡಿಪಾಯ. ಎಂಥಾ ಹೋರಾಟಕ್ಕೂ ಹಕ್ಕುಗಳನ್ನು ಒತ್ತಾಯಿಸಲಿಕ್ಕೂ ಪ್ರೇಮದ ರಾಜಕೀಯ ಇಲ್ಲದೆ ಮುಂದುವರೆಯಲ್ಲ.

ಹೀಗೆ ಅವಳ ಜೊತೆ ಮಾತಾಡ್ತಾ ಮಾತಾಡ್ತಾ ಕೆಲಸ ಮಾಡ್ತಾ ಮಾಡ್ತಾ ನಾನು ನನ್ನ ಬ್ರಾಮಣಿಕೆ ಕಳೆದುಕೊಳ್ಳಲು ಪ್ರಯತ್ನಿಸ್ತಾ, ಅವಳೇ ಹೇಳಿಕೊಟ್ಟ ಲೌ ರಾಜಕೀಯವನ್ನು ಬದುಕುತ್ತಾ ಬಂದಿರುವೆ.

ಇದನ್ನೂ ಓದಿ- ಠುಸ್ಸಾದ ಆತ್ಮಹತ್ಯೆಯ ಪ್ರಯತ್ನ

ಇಷ್ಟೆಲ್ಲಾ ಹೇಳಿಕೊಟ್ಟ ಅವಳು 2004 ಜುಲೈ 16ರಂದು ಆತ್ಮಹತ್ಯೆ ಮಾಡಿಕೊಂಡಳು. ಅವಳು ತೀರಿಕೊಳ್ಳುವ ಸಮಯದಲ್ಲಿ ಅವಳಿಗೆ 24 ವರ್ಷ. ಅವಳು ಯಾವತ್ತೂ ಹೇಳುತ್ತಿದ್ದಳು -ಯಾವ ರಾಜಕೀಯಕ್ಕೆ ನಾವು ಮ್ಯಾನಿಫೆಸ್ಟೋ ಹಾಕುತ್ತೀವೋ ಆವತ್ತು ಆ ರಾಜಕೀಯ ತೀರಿಕೊಂಡಂತೆ. ಯಾಕೆಂದರೆ ಅದರ ವ್ಯಾಪ್ತಿಗೆ ಕಟ್ಟುಪಾಡು ಹಾಕುವ ಯಾವ ಅವಶ್ಯಕತೆಯೂ ಇಲ್ಲ. ತತ್ವಗಳು ಯೋಚಿಸಿದಷ್ಟೂ ಬೆಳೆಯುತ್ತವೆ ಆದರೆ ನಾವು ನಮ್ಮ ಸಣ್ಣತನದಿಂದ ಬೆಳೆಸುವುದಿಲ್ಲ ಅಂತಿದ್ಲು.

ಆವತ್ತು ಕಾಜೋಲ್ ಫೋನ್ ಮಾಡಿ “ಫಮಿಲ ಸುಯಿಸೈಡ್ ಮಾಡ್ಕೊಂಡ್ಳು ಕಣೆ” ಅಂದದ್ದೇ ನನಗೆ ಒಂದು ಕಾಲು ಮುಂದೆ ಇಡಕ್ಕಾಗದೇ ಹಾಗೇ ನಿಂತೆ. ಅವಳು ಸತ್ತದ್ದಾದರೂ ಯಾಕೆ ಅಂತ ಇವತ್ತಿಗೂ ಯೋಚಿಸುತ್ತೀನಿ. ತನ್ನ ಮೂರು ನಾಕು ಪ್ರೇಮಿಗಳೊಂದಿಗಿದ್ದೂ ಅವಳಿಗೆ ಹೋರಾಟದ ಕೆಲಸ ಮಾಡಲಾಗದೆ ಬರೀ ದಂಧೆಗೆ ಸೀಮಿತಗೊಂಡಳು ಎನ್ನುವ ಅಳಲು ತುಂಬಾ ಇತ್ತು. ಒಂದೊಂದು ಸಲ ಅನಿಸುತ್ತೆ ಈ ಪ್ರೀತಿಯ ರಾಜಕೀಯವನ್ನ ಇಷ್ಟೊತ್ತಿಗೆ ಎಲ್ಲರಲ್ಲೂ ಬಿತ್ತುವ ಶಕ್ತಿ ಇತ್ತು ಅವಳಿಗೆ. ಅವಳು ಮತ್ತೆ ಬಂದೇ ಬರುತ್ತಾಳೆ ನನಗೆ ಖಾತ್ರಿ ಇದೆ….. ಲೌ ಪಾಲಿಟಿಕ್ಸ್ ನೆನಪಲ್ಲಿ.

ರೂಮಿ ಹರೀಶ್‌

ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು  ಕಳೆದ ಸುಮಾರು 2೫ ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ  ಮತ್ತು  ಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ.

More articles

Latest article