ಬೆಂಗಳೂರು : ನಮ್ಮ ತಾಯಿಯನ್ನು ಪ್ರೀತಿಸುವಂತೆ ಮಾತೃಭಾಷೆ ಕನ್ನಡವನ್ನು ಪ್ರೀತಿಸಬೇಕು ಹಾಗೂ ತಂದೆಗೆ ನೀಡುವಂತೆಯೇ ರಾಜ್ಯವನ್ನು ಗೌರವಿಸಬೇಕು ಎಂದು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಲಿಯ ಅಧ್ಯಕ್ಷ ಡಾ ರಾಮ್ ಪ್ರಸಾತ್ ಮನೋಹರ್ ಕರೆ ನೀಡಿದರು
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೌಕರರ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ – 2024 ನಲ್ಲಿ ಭಾಗವಹಿಸಿ ಮಾತನಾಡಿದರು.
ತಾಯಿ ತನ್ನ ಸರ್ವಸ್ವವನ್ನು ಧಾರೆ ಎರೆದು ತನ್ನ ಮಕ್ಕಳನ್ನು ಪೋಷಿಸಿಸುತ್ತಾಳೆ. ಅದೇ ರೀತಿಯಲ್ಲಿಯೇ ಮಾತೃಭಾಷೆ ಕನ್ನಡ ನಮ್ಮನ್ನು ಸಾಕಿ ಸಲಹುತ್ತಿದೆ. ಮರಗಳು ತಮ್ಮ ಬೇರುಗಳನ್ನು ಮರೆತರೆ ಜೀವನ ಸಾಗಿಸಲು ಸಾಧ್ಯವಿಲ್ಲ. ಆದ್ದರಿಂದ ನಾವೆಲ್ಲರೂ ನಮ್ಮ ಬೇರಾದ ಮಾತೃಭಾಷೆಯನ್ನು ತಾಯಿಯಂತೆ ಹಾಗೂ ರಾಜ್ಯವನ್ನು ತಂದೆಯಂತೆ ಗೌರವಿಸಬೇಕು. ಈ ಭಾವನೆಯನ್ನು ನಮ್ಮ ಮುಂದಿನ ಪೀಳಿಗೆಯಲ್ಲಿ ಬೆಳೆಸುವ ನಿಟ್ಟಿನಲ್ಲಿ ಆದ್ಯತೆ ನೀಡಬೇಕು. ನಾವು ಹಾಗೂ ನಮ್ಮ ಮಕ್ಕಳು ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಕಲಿಯುವ ಹಾಗೂ ಅದರಲ್ಲೇ ವ್ಯವಹರಿಸುವ ನಿಟ್ಟಿನಲ್ಲಿ ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು.
ನಟಿ ಸಂಜನಾ ಗಿರ್ಲಾನಿ ಮಾತನಾಡಿ, ದಿನದ 24 ಗಂಟೆಯೂ ಅವಿರತ ಸೇವೆ ನೀಡುವ ಮೂಲಕ ಬೆಂಗಳೂರು ಜಲಮಂಡಳಿ ನಮ್ಮೆಲ್ಲರ ಮನಗೆದ್ದಿದೆ. ಉತ್ತಮ ಸೇವೆಯನ್ನು ನೀಡುತ್ತಿರುವ ನಿಮ್ಮೆಲ್ಲರ ಕಾರ್ಯ ಶ್ಲಾಘನೀಯ ಎಂದರು.
ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಇದೇ ಸಂಧರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರು ಜಲಮಂಡಳಿ ಮುಖ್ಯ ಆಡಳಿತಾಧಿಕಾರಿ ಮದನ್ ಮೋಹನ್ ಸಿ, ಪ್ರಧಾನ ಅಭಿಯಂತರ ಬಿ. ಸುರೇಶ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ, ಮೆಟ್ರೋಪಾಲಿಟನ್ ಇತಿಹಾಸಕಾರ ಧರ್ಮೇಂದ್ರ ಕುಮಾರ್, ನೌಕರರ ಸಂಘದ ಅಧ್ಯಕ್ಷ ಬಿ.ಕೆ ಮರಿಯಪ್ಪ, ಉಪಾಧ್ಯಕ್ಷ ಗುರಲಿಂಗಪ್ಪ ಕಿತ್ತೂರ, ಪ್ರಧಾನ ಕಾರ್ಯದರ್ಶಿ ಎ. ಗೊವಿಂದರಾಜು, ಸ್ಯಾನಿಟರಿ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಸಿದ್ದಪ್ಪ, ಪ.ಜಾ ಮತ್ತು ಪ.ಪಂ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸದಾಶಿವ ಕಾಂಬಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು