ಕೆಲಸ ಕೇಳುವ ಯುವಕರ ಮೇಲೆ ಲಾಠಿ ಚಾರ್ಜ್;‌ ಪ್ರಿಯಾಂಕಾ ಗಾಂಧಿ ಆಕ್ಷೇಪ

Most read

ನವದೆಹಲಿ: ಬಿಹಾರ ರಾಜಧಾನಿ ಪಟ್ನಾದಲ್ಲಿ ಉದ್ಯೋಗಾಕಾಂಕ್ಷಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿರುವುದನ್ನು ಕಾಂಗ್ರೆಸ್ ನಾಯಕಿ, ಲೋಕಸಭಾ ಸದಸ್ಯೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಟುವಾಗಿ ಖಂಡಿಸಿದ್ದಾರೆ. ಕುರ್ಚಿ ಉಳಿಸಿಕೊಳ್ಳುವುದಷ್ಟೇ ಬಿಹಾರದ ಆಡಳಿತ ಪಕ್ಷದ ಉದ್ದೇಶ ಎಂದು ಲೇವಡಿ ಮಾಡಿರುವ ಅವರು, ಪೊಲೀಸರ ಕ್ರಮವನ್ನು ಕ್ರೌರ್ಯದ ಪರಮಾವಧಿ ಎಂದು ಆರೋಪಿಸಿದ್ದಾರೆ.

ಬಿಹಾರ ಲೋಕಸೇವಾ ಆಯೋಗ (ಬಿಪಿಎಸ್‌ಸಿ) ಡಿಸೆಂಬರ್ 13ರಂದು ನಡೆಸಿದ್ದ ಪೂರ್ವಭಾವಿ ಪರೀಕ್ಷೆ ಸಂದರ್ಭದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿ, ಉದ್ಯೋಗಾಕಾಂಕ್ಷಿಗಳು ಪಟ್ನಾದಲ್ಲಿ ಬುಧವಾರ ಪ್ರತಿಭಟನೆ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಪೊಲೀಸರು, ಪ್ರತಿಭಟನಾಕಾರರ ಮೇಲೆ ಲಾಠಿ  ಪ್ರಹಾರ ನಡೆಸಿದ್ದರು. ಪೊಲೀಸರ ಈ ಕ್ರಮದಿಂದ ಹಲವಾರು ಉದ್ಯೋಗಾಕಾಂಕ್ಷಿಗಳು ಗಾಯಗೊಂಡಿದ್ದರು. ಆದರೆ, ಹಿರಿಯ ಅಧಿಕಾರಿಗಳು ಈ ಆರೋಪವನ್ನು ನಿರಾಕರಿಸಿದ್ದಾರೆ.

ಕೈ ಕಟ್ಟಿ ಪ್ರತಿಭಟನೆ ನಡೆಸುತ್ತಿದ್ದ ಯುಕರ ಮೇಲೆ ಪೊಲೀಸರು ಲಾಠಿ ಚಾರ್ಜ್‌ ಮಾಡಿರುವುದು ಅಕ್ಷಮ್ಯ ಅಪರಾಧ. ಬಿಜೆಪಿ ಆಡಳಿತದಲ್ಲಿ ಉದ್ಯೋಗ ಕೇಳುವ ಯುವಕರ ಮೇಲೆ ಹಲ್ಲೆ ನಡೆಯುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಅದು ಉತ್ತರ ಪ್ರದೇಶ, ಮಧ್ಯ ಪ್ರದೇಶ ಅಥವಾ ಬಿಹಾರ ಯಾವುದೇ ರಾಜ್ಯ ಆಗಿರಲಿ ಧ್ವನಿ ಎತ್ತುವ ಯುವಕರನ್ನು ಥಳಿಸಲಾಗುತ್ತದೆ ಎಂದು ಆರೋಪಿಸಿದ್ದಾರೆ. ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌  ಅವರ ಜನತಾದಳ ಮತ್ತು ಬಿಜೆಪಿ ನೇತೃತ್ವದ ಮೈತ್ರಿ ಸರಕಾರ ಅಸ್ತಿತ್ವದಲ್ಲಿದೆ.

More articles

Latest article