ಲೋಕಸಭೆ ಚುನಾವಣೆ 2024 ದಿನಾಂಕ ಘೋಷಣೆ: ಏಪ್ರಿಲ್ 19 ರಿಂದ 7 ಹಂತಗಳಲ್ಲಿ ಮತದಾನ, ಜೂನ್ 4  ರಂದು ಫಲಿತಾಂಶ

Most read

ಕೇಂದ್ರ ಚುನಾವಣಾ ಆಯೋಗ 18ನೇ ಲೋಕಸಭಾ ಚುನಾವಣೆ ದಿನಾಂಕವನ್ನು ಶನಿವಾರ ಘೋಷಣೆ ಮಾಡಿದೆ. 7 ಹಂತಗಳಲ್ಲಿ ಮತದಾನ ನಡೆಯಲಿದೆ. ಚುನಾವಣಾ ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು  ಕೇಂದ್ರ ಚುನಾವಣಾ ಆಯೋಗ ಹೇಳಿದೆ.

ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಸುಖ್ಬೀರ್ ಸಿಂಗ್ ಸಂಧು ಮತ್ತು ರಾಜೀವ್ ಕುಮಾರ್ ಅವರು ಮಾತನಾಡಿ,  ಚುನಾವಣಾ ಆಯೋಗಕ್ಕೆ ಇಬ್ಬರು ECಗಳನ್ನು ನೇಮಿಸಿದ್ದು, ಭಾರತೀಯ ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬಕ್ಕೆ ನಾವು ಸಂಪೂರ್ಣ ಸಿದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

ದೇಶದಲ್ಲಿ 543 ಲೋಕಸಭಾ ಕ್ಷೇತ್ರ, ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಂಪೂರ್ಣ ತಯಾರಿಯಾಗಿದ್ದು, 7 ಹಂತಗಳಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 19 ರಂದು ಮೊದಲ ಹಂತದ ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಗೊಳ್ಳಲಿದೆ  ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾ‌ರ್ ಹೇಳಿದ್ದಾರೆ.

ಏಪ್ರಿಲ್ 26 ಮತ್ತು ಮೇ 7ರಂದು ಕರ್ನಾಟಕದಲ್ಲಿ 2 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ದಕ್ಷಿಣ ಕರ್ನಾಟಕದಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯಲಿದ್ದು, ಉತ್ತರ ಕರ್ನಾಟಕ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ. ಚುನಾವಣಾ ಮಾದರಿ ನೀತಿ ಸಂಹಿತೆ (Model Code of Conduct) ಕೂಡ ಇಂದಿನಿಂದಲೇ ಜಾರಿಗೆ ಬರಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.

ದೇಶದಲ್ಲಿ 7 ಹಂತಗಳಲ್ಲಿ ಲೋಕಸಭೆ ಚುನಾವಣೆ

1 ನೇ ಹಂತದ ಚುನಾವಣೆಯು ಏಪ್ರಿಲ್ 19 ರಂದು ನಡೆಯಲಿದೆ, ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 27. 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆಯಲಿದೆ.

2 ನೇ ಹಂತದ ಚುನಾವಣೆಗಳು ಏಪ್ರಿಲ್ 26 ರಿಂದ ನಡೆಯಲಿದ್ದು, ಅಭ್ಯರ್ಥಿಗಳಿಗೆ ನಾಮನಿರ್ದೇಶನಗಳ ಕೊನೆಯ ದಿನಾಂಕ ಏಪ್ರಿಲ್ 4 ರಂದು ನಡೆಯಲಿದೆ. ಎರಡನೇ ಹಂತವು 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ.

3 ನೇ ಹಂತದ ಚುನಾವಣೆಯು ಮೇ 7 ರಂದು ನಡೆಯಲಿದೆ, ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 19. ಮೂರನೇ ಹಂತವು 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ.

4 ನೇ ಹಂತದ ಚುನಾವಣೆಯು ಮೇ 13 ರಂದು ನಡೆಯಲಿದೆ, ಅಭ್ಯರ್ಥಿಗಳಿಗೆ ನಾಮನಿರ್ದೇಶನಗಳಿಗೆ ಕೊನೆಯ ದಿನಾಂಕ ಏಪ್ರಿಲ್ 25. ನಾಲ್ಕನೇ ಹಂತವು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ.

5 ನೇ ಹಂತದ ಚುನಾವಣೆಯು ಮೇ 20 ರಂದು ನಡೆಯಲಿದೆ, ಅಭ್ಯರ್ಥಿಗಳಿಗೆ ಮೇ 3 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ. ಐದನೇ ಹಂತವು 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ.

6 ನೇ ಹಂತದ ಚುನಾವಣೆಯು ಮೇ 25 ರಂದು ನಡೆಯಲಿದೆ, ಅಭ್ಯರ್ಥಿಗಳಿಗೆ ನಾಮನಿರ್ದೇಶನಗಳಿಗೆ ಕೊನೆಯ ದಿನಾಂಕ ಮೇ 6. ಆರನೇ ಹಂತವು 7 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ.

7 ನೇ ಹಂತದ ಚುನಾವಣೆಯು ಜೂನ್ 1 ರಂದು ನಡೆಯಲಿದೆ, ಅಭ್ಯರ್ಥಿಗಳಿಗೆ ನಾಮನಿರ್ದೇಶನಗಳಿಗೆ ಕೊನೆಯ ದಿನಾಂಕ ಮೇ 14. ಏಳನೇ ಹಂತವು 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ.

ಜೂನ್ 4ರಂದು ಮತ ಎಣಿಕೆ, ಫಲಿತಾಂಶ ಪ್ರಕಟ


ದೇಶದಲ್ಲಿ ಒಟ್ಟು 7 ಹಂತದಲ್ಲಿ ಚುನಾವಣೆ ನಡೆಯಲಿದ್ದು, ಜೂನ್‌ 4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಫಲಿತಾಂಶ ಪ್ರಕಟವಾದ ಬಳಿಕ ನೀತಿ ಸಂಹಿತೆ ತೆರವಾಗಲಿದೆ. ಚುನಾವಣಾ ನೀತಿ ಸಂಹಿತೆ ಎಂದರೇನು? ಎಂಬ ಮಾಹಿತಿ ಇಲ್ಲಿದೆ.

ಪ್ರತಿಯೊಂದು ಚುನಾವಣೆಯೂ ನಮಗೆ ಪರೀಕ್ಷೆ ಇದ್ದಂತೆ. ಮುಕ್ತ ನ್ಯಾಯಸಮ್ಮತ, ಪಾರದರ್ಶಕ ಚುನಾವಣೆ ನಮ್ಮಉದ್ದೇಶವಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ 97 ಕೋಟಿ ನೋಂದಾಯಿತ ಮತದಾರರು ಇರಲಿದ್ದಾರೆ. ಪುರುಷ ಮತದಾರರು -49.72 ಕೋಟಿ. ಮಹಿಳಾ ಮತದಾರರು -47.15 ಕೋಟಿ. 18-19 ವರ್ಷದೊಳಗಿನ ಮತದಾರರು -1.84 ಕೋಟಿ. 20-29 ವರ್ಷದೊಳಗಿನ ಮತದಾರರು -19.74 ಕೋಟಿ. 80 ವರ್ಷ ದಾಟಿದ ಮತದಾರರು -1.98 ಕೋಟಿ ಮತದಾರಿದ್ದಾರೆ. 12 ರಾಜ್ಯಗಳಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ.  ಚುನಾವಣೆ ನಡೆಸಲು 10 ಲಕ್ಷ ಮತಗಟ್ಟೆಗಳು ಮತ್ತು 1.5 ಕೋಟಿ ಚುನಾವಣಾ ಅಧಿಕಾರಿಗಳ ಅಗತ್ಯವಿದೆ ಎಂದು ಹೇಳಿದ್ದಾರೆ.

17 ನೇ ಲೋಕಸಭೆಯ ಅವಧಿಯು ಜೂನ್ 16, 2024 ರಂದು ಮುಕ್ತಾಯಗೊಳ್ಳಲಿದೆ. ಆಂಧ್ರ ಪ್ರದೇಶ, ಒಡಿಶಾ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ಮತ್ತು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗಳ ಅವಧಿಯು ಸಹ ಜೂನ್ 24 ರಂದು ಅವಧಿ ಮುಗಿಯುತ್ತದೆ.

  • ಮತದಾನ ಕೇಂದ್ರಗಳಲ್ಲಿ ನೀರು, ಶೌಚಾಲಯ, ಹೆಲ್ಪ್​ಡೆಸ್ಕ್​, ವಿದ್ಯುತ್​ ಸೇರಿ ಮೂಲಕ ಸೌಕರ್ಯಗಳ ವ್ಯವಸ್ಥೆ ಮಾಡಲಾಗುತ್ತದೆ.
  • 40%ಕ್ಕೂ ಹೆಚ್ಚು ದಿವ್ಯಾಂಗರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು.
  • ಮತದಾನ ಕೇಂದ್ರಗಳಲ್ಲಿ ವ್ಹೀಲ್​ಚೇರ್ ವ್ಯವಸ್ಥೆ ಇರಲಿದ್ದು​, ಸ್ವಯಂಸೇವಕರೂ ಇರಲಿದ್ದಾರೆ.
  • ಚುನಾವಣಾ ಅಕ್ರಮಗಳನ್ನು ಮತದಾರ  ಫೋಟೋ, ವಿಡಿಯೋ ತೆಗೆದು ಆ್ಯಪ್ ಮೂಲಕ ಅಪ್ಲೋಡ್ ಮಾಡಬಹುದು. ಕೂಡಲೇ ಅಕ್ರಮ ಎಸಗುವ ಅಭ್ಯರ್ಥಿಗಳ ವಿರುದ್ದ ಕ್ರಮ.
  • ರೈಲ್ವೆ ಸ್ಟೇಷನ್, ಏರ್​ಪೋರ್ಟ್, ಹೆಲಿಕಾಪ್ಟರ್, ಖಾಸಗಿ ವಿಮಾನ, ಎಲ್ಲಾ ವಾಹನಗಳನ್ನು ಕೂಡ ತಪಾಸಣೆ ನಡೆಸಲಾಗುವುದು.
  • ಮತಗಟ್ಟೆಗಳಲ್ಲಿ ಹಿಂಸಾಚಾರ ನಡೆದರೆ ಜಾಮೀನು ರಹಿತ ಕೇಸ್ ದಾಖಲು
  • ಹಣ ಬಲ, ತೋಳ್ಳಲವನ್ನು ಚುನಾವಣಾ ಅಕ್ರಮಗಳಿಗೆ ಬಳಸಿದರೆ ವಿರುದ್ಧ ಕಠಿಣ ಕ್ರಮ ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿ ಹರಡಿದರೆ ಕಠಿಣ ಕ್ರಮ.

More articles

Latest article