ಬೆಂಗಳೂರು: ಆದಾಯಕ್ಕಿಂತ ಅತಿ ಹೆಚ್ಚು ಆಸ್ತಿ ಗಳಿಕೆ ಮಾಡಿದ ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಇಂದು ಬೆಳ್ಳಂಬೆಳಗ್ಗೆ ಶಾಕ್ ನೀಡಿದೆ.
ರಾಜ್ಯಾದ್ಯಂತ 25 ಕಡೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರ ವಿರುದ್ಧ ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರು, ಮಂಗಳೂರು ಮತ್ತು ಮಂಡ್ಯ ಸೇರಿದಂತೆ ಹಲವೆಡೆ ಲೋಕಾಯುಕ್ತ ದಾಳಿ ನಡೆಸಿದೆ. ಭ್ರಷ್ಟಾಚಾರ ಆರೋಪ ಹೊತ್ತ ನಾಲ್ವರು ಅಧಿಕಾರಿಗಳಿಗೆ ಸಂಬಂಧಿಸಿದ ಪ್ರದೇಶಗಳಲ್ಲಿ ದಾಳಿ ಮಾಡಲಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಭೂ ಹಾಗೂ ಗಣಿ ವಿಜ್ಞಾನ ಇಲಾಖೆಯ ಕೃಷ್ಣವೇಣಿ, ಮಂಡ್ಯದಲ್ಲಿ ಕಾವೇರಿ ನೀರಾವರಿ ನಿಗಮದ ಎಂಡಿ ಮಹೇಶ್, ಬೆಂಗಳೂರಿನ ಟೌನ್ ಅಂಡ್ ಫ್ಲಾನಿಂಗ್ ಡೈರೆಕ್ಟರ್ ತಿಪ್ಪೇಸ್ವಾಮಿ ಬೆಂಗಳೂರಿನ ಅಬಕಾರಿ ಇಲಾಖೆಯ ಎಸ್ ಪಿ ಮಹೇಶ್ ಅವರ ನಿವಾಸ ಮತ್ತು ಸಂಬಂಧಪಟ್ಟ ಪ್ರದೇಶಗಳಲ್ಲಿ ದಾಳಿ ನಡೆದಿದೆ.
ತಿಪ್ಪೇಸ್ವಾಮಿ ಮನೆಯಲ್ಲಿ ರಾಶಿ ರಾಶಿ ಚಿನ್ನಾಭರಣ ಪತ್ತೆಯಾಗಿದೆ. ಕಂತೆ ಕಂತೆ ನೋಟು, ಬೆಳ್ಳಿ ವಸ್ತುಗಳು, ದುಬಾರಿ ವಾಚ್ ಗಳನ್ನು ಕಂಡು ಲೋಕಾಯುಕ್ತ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಇವರ ಆಸ್ತಿಪಾಸ್ತಿ ಚಿನ್ನಾಭರಣ ನೋಡಿದರೆ ಇವರು ತಿಪ್ಪೇಸ್ವಾಮಿ ಅಲ್ಲ, ಗೋಲ್ಡ್ ಸ್ವಾಮಿ ಎಂದು ಭಾಸವಾಗುತ್ತಿದೆ. 28 ಜೊತೆ ಕಿವಿಯೋಲೆ, 23 ಚಿನ್ನದ ಸರ. 15 ನೆಕ್ಲೇಸ್, 8 ಬ್ರ್ಯಾಂಡೆಡ್ ವಾಚ್, 89 ಲಕ್ಷ ನಗದು. 23 ಚಿನ್ನದ ಬಳೆ, ಚಿನ್ನದ ಉಂಗುರ, ಬೆಳ್ಳಿ ವಸ್ತುಗಳು ಪತ್ತೆಯಾಗಿವೆ.