ಲೋಕಸಂಭ್ರಮ: ಮೊದಲ ಹಂತದ ಚುನಾವಣೆ ಮತದಾನ ಆರಂಭ

Most read

ಹೊಸದಿಲ್ಲಿ: ಪ್ರಜಾಪ್ರಭುತ್ವದ ಹಬ್ಬ ಎಂದೇ ಕರೆಯಲಾಗುವ ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆ ಆರಂಭವಾಗಿದ್ದು, ದೇಶದ ಜನತೆ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಯು ಒಟ್ಟು ಏಳು ಹಂತದಲ್ಲಿ ನಡೆಯಲಿದ್ದು, ಮೊದಲ ಹಂತದ ಚುನಾವಣೆಯ ಮತದಾನ ಇಂದು ಬೆಳಿಗ್ಗೆ 7 ಗಂಟೆಯಿಂದ ಆರಂಭಗೊಂಡಿತು.

21 ರಾಜ್ಯಗಳ 102 ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದ್ದು, ಈ ಕ್ಷೇತ್ರಗಳ ಜನತೆ ತಮ್ಮ ಮುಂದಿ ಲೋಕಸಭಾ ಪ್ರತಿನಿಧಿಯನ್ನು ಆಯ್ಕೆ ಮಾಡಿ ಕಳುಹಿಸುತ್ತಿದ್ದಾರೆ. ಏಳು ಹಂತದಲ್ಲಿ ನಡೆಯುವ ಚುನಾವಣೆಗಳ ಕೊನೆಯ ಹಂತ ಜೂನ್ 1 ಕ್ಕೆ ನಿಗದಿಯಾಗಿದ್ದು, ಜೂನ್‌ 4ರಂದು ಮತಎಣಿಕೆ ಕಾರ್ಯ ನಡೆಯಲಿದೆ.

ಇಂದು ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಡ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್‌, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರಪ್ರದೇಶ, ಉತ್ತರಕಂಡ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಚುನಾವಣೆ ನಡೆಯುತ್ತಿದೆ. ಅದೇ ರೀತಿ ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್‌ ನಿಕೋಬಾರ್‌, ಲಕ್ಷದ್ವೀಪ, ಜಮ್ಮು ಮತ್ತು ಕಾಶ್ಮೀರ, ಪುದುಚೇರಿಗಳಲ್ಲ್ಲೂ ಚುನಾವಣೆ ನಡೆಯುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ ಡಿಎ ಮೈತ್ರಿ ಕೂಟ ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಬಯಸಿ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಈ ಬಾರಿ 400ಕ್ಕೂ ಹೆಚ್ಚು ಎಂಬುದು ಅವರ ಘೋಷವಾಕ್ಯವಾಗಿದೆ. ಇನ್ನೊಂದೆಡೆ ವಿರೋಧಪಕ್ಷಗಳು ಇಂಡಿಯಾ ಮೈತ್ರಿಕೂಟ ರಚಿಸಿಕೊಂಡು ಮೋದಿ ಸರ್ಕಾರದ ವೈಫಲ್ಯಗಳನ್ನೇ ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುತ್ತಿವೆ.

ಲೋಕಸಭಾ ಚುನಾವಣೆಗಳ ವೇಳಾಪಟ್ಟಿ ಹೀಗಿದೆ:

• ಮೊದಲ ಹಂತ – ಏಪ್ರಿಲ್ 19
• ಎರಡನೇ ಹಂತ – ಏಪ್ರಿಲ್ 26
• ಮೂರನೇ ಹಂತ – ಮೇ 7
• ನಾಲ್ಕನೇ ಹಂತ – ಮೇ 13
• ಐದನೇ ಹಂತ – ಮೇ 20
• ಆರನೇ ಹಂತ – ಮೇ 25
• ಏಳನೇ ಹಂತ – ಜೂನ್ – 1

ಕರ್ನಾಟಕದಲ್ಲಿ ಏಪ್ರಿಲ್‌ 26 (ಶುಕ್ರವಾರ) ಮತ್ತು ಮೇ 7 (ಮಂಗಳವಾರ) ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

More articles

Latest article