ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಸ್ವಾಗಸಿದ ಆಮ್ ಆದ್ಮಿ ಪಕ್ಷ

Most read

ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್ ಗಳ ಮೂಲಕ ನಡೆಸುವ ಕರ್ನಾಟಕ ಸರ್ಕಾರದ ಕ್ರಮವನ್ನು ಆಮ್ ಆದ್ಮಿ ಪಕ್ಷ ಸ್ವಾಗತಿಸಿದೆ.

ಈ ಸಂಬಂಧ ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಪ್ರಕಟಣೆ ನೀಡಿದ್ದಾರೆ.

ಇತ್ತೀಚೆಗೆ ಅನೇಕ ರಾಜ್ಯಗಳಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಮತ ಕಳ್ಳತನ ಆಗಿದೆ ಎಂಬ ಸಾಕ್ಷ್ಯಸಮೇತದ ಇಂಡಿಯಾ ಒಕ್ಕೂಟದ ನಾಯಕರು ಗುರುತರ  ಆರೋಪ ಮಾಡಿದ್ದರು. ಈ ಆರೋಪಗಳಿಗೆ ಉತ್ತರ ನೀಡದೆ ಪ್ರಧಾನಿ ಮೋದಿ ಅವರು ಉದ್ದಟತನ ತೋರಿಸಿದ್ದರು. ಮತ್ತೊಂದು ಕಡೆ ಆರೋಪಿ ಸ್ಥಾನದಲ್ಲಿರುವ ಕೇಂದ್ರ ಚುನಾವಣಾ ಆಯೋಗವು ಸೂಕ್ತ ಸ್ಪಷ್ಟೀಕರಣ ಹಾಗೂ ಸಮಜಾಯಿಶಿ ನೀಡದೆ, ಆರೋಪ ಮಾಡಿದ್ದ ನಾಯಕರುಗಳ ವಿರುದ್ಧವೇ  ರಾಜಕೀಯ ಪ್ರತಿಕ್ರಿಯೆಗಳನ್ನು ನೀಡಿ ಆರೋಪಗಳನ್ನು ಮುಚ್ಚಿ ಹಾಕುವ ತಂತ್ರಗಾರಿಕೆಯಲ್ಲಿ ತೊಡಗಿತ್ತು.

ಕೇಂದ್ರ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರಕ್ಕೆ ಆಮೂಲಾಗ್ರ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಇಚ್ಛೆ ಇಲ್ಲ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಸಂದರ್ಭದಲ್ಲಿ  ಕರ್ನಾಟಕ ರಾಜ್ಯ ಸರ್ಕಾರ  ಇಂತಹ ಕಠಿಣ ಸಂದರ್ಭದಲ್ಲಿಯೂ ಬ್ಯಾಲೆಟ್ ಪೇಪರ್ ಬಳಕೆಯ ನಿರ್ಧಾರ ಕೈಗೊಂಡಿರುವುದು ಅತ್ಯಂತ ಸ್ವಾಗತರ್ಹ ಕ್ರಮ ಎಂದು ಹೇಳಿದ್ದಾರೆ.

ಕಳೆದ ದೆಹಲಿ ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿಯೂ ಸಹ ಆಮ್ ಆದ್ವಿ ಪಕ್ಷವು ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಾವಿರಾರು ಮತದಾರರುಗಳನ್ನು ಕೈ ಬಿಟ್ಟಿದ್ದ ಸಂದರ್ಭದಲ್ಲಿ ಅನೇಕ ಹಂತಗಳಲ್ಲಿ ಹೋರಾಟಗಳನ್ನು ನಡೆಸಿತ್ತು. ಮತ ಪಟ್ಟಿಯಿಂದ ಕೈ ಬಿಟ್ಟಿದ್ದ ಸಾವಿರಾರು  ಮತದಾರರುಗಳ ಬೃಹತ್ ರ್ಯಾಲಿಗಳನ್ನು ನಡೆಸಿ ಚುನಾವಣಾ ಆಯೋಗಕ್ಕೆ ದೂರನ್ನು ಸಲ್ಲಿಸಲಾಗಿತ್ತು. ಆದರೂ ಯಾವುದೇ ಕ್ರಮ ತೆಗೆದುಕೊಳ್ಳದ ಚುನಾವಣಾ ಆಯೋಗವು ಇಂತಹ ಅನೇಕ ಅಕ್ರಮ ಮತದಾನ ಪ್ರಕ್ರಿಯೆಗಳ ಅರಿವಿದ್ದರೂ ಕಣ್ಮುಚ್ಚಿ ಕುಳಿತಿತ್ತು.

ದೇಶದ ಸಾಂವಿಧಾನಿಕ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ಮತ ಕಳ್ಳತನ ಮಾಡಿ ಅಧಿಕಾರ ಪಡೆದುಕೊಳ್ಳುವ ಪ್ರಬಲರ ಹುನ್ನಾರ ತಪ್ಪಬೇಕಾದರೆ ಬ್ಯಾಲೆಟ್ ಪೇಪರ್ ನ ಅವಶ್ಯಕತೆ ಅತ್ಯಂತ ಜರೂರಾಗಿದೆ. ಪಕ್ಷವು ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತದೆ. ಮತ ಕಳ್ಳತನವನ್ನು  ತಡೆಗಟ್ಟುವ  ಮನಸ್ಸಿದ್ದಲ್ಲಿ  ಬಿಜೆಪಿ ಅಧಿಕಾರ ಹೊಂದಿರುವ ರಾಜ್ಯಗಳಲ್ಲಿಯೂ ಬ್ಯಾಲೆಟ್‌ ಪೇಪರ್‌ ಬಳಸುವ ನಿರ್ಧಾರ  ತೆಗೆದುಕೊಳ್ಳಬೇಕೆಂದು  ಜಗದೀಶ್ ಒತ್ತಾಯಿಸಿದ್ದಾರೆ.

More articles

Latest article