ಬೆಂಗಳೂರು: ಖ್ಯಾತ ಸಾಹಿತಿ ಜಿ.ಎಸ್.ಸಿದ್ದಲಿಂಗಯ್ಯ ಅವರು ಅನಾರೋಗ್ಯದಿಂದಾಗಿ ಮಂಗಳವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 94 ವರ್ಷದ ಸಿದ್ದಲಿಂಗಯ್ಯ ಅವರು ಪತ್ನಿಯನ್ನು ಅಗಲಿದ್ದಾರೆ. ಚಾಮರಾಜಪೇಟೆಯ ಲಿಂಗಾಯತ ರುದ್ರಭೂಮಿಯಲ್ಲಿ ಇಂದು ಮಧ್ಯಾಹ್ನ 3 ನಂತರ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ತುಮಕೂರು ಜಿಲ್ಲೆ ಬೆಳ್ಳಾವಿಯ ಸಿದ್ದಲಿಂಗಯ್ಯ ಅವರು 1931ರಲ್ಲಿ ಜನಿಸಿದರು. ಬಿಎ(ಆನರ್ಸ್), ಎಂ.ಎ ಕನ್ನಡದಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣರಾದರು. ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಉದ್ಯೋಗ ಆರಂಭಿಸಿದ ಅವರು ಮುಂದೆ ವಿವಿಧ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ, ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರಾಗಿ ಕೆಲಸ ಮಾಡಿದ್ದರು.
ಸಾಹಿತಿ, ಕವಿ ಹಾಗೂ ವಿಮರ್ಶಕರಾಗಿದ್ದ ಸಿದ್ದಲಿಂಗಯ್ಯನವರು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಸಾಹಿತ್ಯ ಅಕಾಡೆಮಿಯ ವಿಶೇಷ ಗೌರವ, ರಾಜ್ಯೋತ್ಸವ ಪ್ರಶಸ್ತಿ, ಬಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು.
ಇವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಾಂಸ್ಕೃತಿಕ ಜಗತ್ತಿಗೆ ಕವಿ ಜಿ ಎಸ್ ಸಿದ್ದಲಿಂಗಯ್ಯ ಅವರ ಕೊಡುಗೆ ಗಮನಾರ್ಹವಾದದ್ದು. ಕನ್ನಡ ಸಾಹಿತ್ಯ ಪರಿಷತ್ತಿನ 17ನೇ ಅಧ್ಯಕ್ಷರಾಗಿ ಅವರು ಕೈಗೊಂಡ ಕೆಲಸಗಳು ಕನ್ನಡ ಸಾಹಿತ್ಯ ಪರಿಷತ್ತನ್ನು ಸದೃಢವಾಗಿ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಸಾಹಿತ್ಯ ಪರಿಷತ್ತಿಗೆ ಒಂದು ನಿರ್ದಿಷ್ಟ ಧ್ವಜವನ್ನು ರೂಪಿಸುವಲ್ಲಿ ಅವರ ಪಾತ್ರ ಮಹತ್ವದ್ದು ಎಂದು ತಂಗಡಗಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಆಡಳಿತಾತ್ಮಕವಾಗಿ, ಆರ್ಥಿಕವಾಗಿ ಪರಿಷತ್ತನ್ನು ಕಟ್ಟುವಲ್ಲಿ ಶ್ರಮಿಸಿದವರು ಜಿ ಎಸ್ ಸಿದ್ದಲಿಂಗಯ್ಯ. ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಗಳಿಗೆ ವಿಶೇಷ ಗಮನ ಕೊಟ್ಟರು. ಅವರು ಕವಿಯಾಗಿ ,ವಿಮರ್ಶಕ ರಾಗಿ, ಅನುವಾದಕರಾಗಿ ಕನ್ನಡ ಪುಸ್ತಕ ಲೋಕಕ್ಕೆ ಅನನ್ಯ ಕೊಡುಗೆ ಕೊಟ್ಟಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿಯು ಸೇರಿದಂತೆ ಅನೇಕ ಪ್ರತಿಷ್ಠಿತ ಗೌರವ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಕವಿ ಜಿ ಎಸ್ ಸಿದ್ದಲಿಂಗಯ್ಯ ಅವರ ನಿಧನದಿಂದ ಕನ್ನಡ ಸಾರಸ್ಪತ ಲೋಕ ಒಂದು ಅದ್ಭುತ ಚೇತನವನ್ನು ಕಳೆದುಕೊಂಡಿದೆ ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.