ಬೆಂಗಳೂರು: ನಗರದಲ್ಲಿ ಸಾರ್ವಜನಿಕ ಭದ್ರತೆ ಮತ್ತು ಅಪರಾಧ ನಿಯಂತ್ರಣವನ್ನು ಬಲಪಡಿಸುವ ದೃಷ್ಠಿಯಿಂದ, MCCTNS (Mobile Companion for Crime and Criminal Tracking Network & Systems) ಸಿಸಿಟಿವಿ ಕ್ಯಾಮೆರಾಗಳನ್ನು ಜಿಯೋ-ಟ್ಯಾಗಿಂಗ್ ಮಾಡಲಾಗುತ್ತಿದೆ. 2025 ರ ಏಪ್ರೀಲ್-30 ರ ತನಕ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟು 5,35,815 ಸಿಸಿ ಟಿವಿ ಕ್ಯಾಮೆರಾಗಳು ಜಿಯೋ-ಟ್ಯಾಗಿಂಗ್ ಆಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2024 ರ ಜನವರಿ 1 ರ ವೇಳೆಗೆ 2,32,711ರಷ್ಟು ಕ್ಯಾಮೆರಾಗಳನ್ನು ಜಿಯೋ ಟ್ಯಾಗಿಂಗ್ ಮಾಡಲಾಗಿತ್ತು. ಕಳೆದ ಒಂದು ವರ್ಷದಲ್ಲಿ 3 ಲಕ್ಷಕ್ಕೂ ಹೆಚ್ಚು ಹೊಸ ಕ್ಯಾಮೆರಾಗಳು ಜಿಯೋ-ಟ್ಯಾಗ್ ಮಾಡಲಾಗಿದೆ.
MCCTNS developers portal ನಲ್ಲಿರುವ ಡೇಟಾ ಪ್ರಕಾರ, ಈ ಕ್ಯಾಮೆರಾಗಳು ವಿವಿಧ ಕ್ಷೇತ್ರಗಳಲ್ಲಿ ಅಂದರೆ ವಸತಿ ಪ್ರದೇಶಗಳು, ವ್ಯಾಪಾರಿಕ ಕೇಂದ್ರಗಳು, ಮುಖ್ಯರಸ್ತೆಗಳು, ಸಿಗ್ನಲ್‌ಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಬ್ಯಾಂಕ್‌ಗಳು ಹಾಗೂ ಇತರೆ ಮಹತ್ವದ ಸ್ಥಳಗಳಲ್ಲಿ ಸ್ಥಾಪನೆಯಾಗಿವೆ. ಈ ಡಿಜಿಟಲ್ ಜಿಯೋ-ಟ್ಯಾಗಿಂಗ್ ಡೇಟಾ ಪೊಲೀಸ್ ಇಲಾಖೆಗೆ ನಿಖರ ಸ್ಥಳಾನುಸಾರ ಮಾಹಿತಿ ನೀಡುವುದರ ಮೂಲಕ ಅಪರಾಧ ತನಿಖೆ ಮತ್ತು ಕಾರ್ಯಾಚರಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸಲು ನೆರವಾಗುತ್ತಿದೆ.
ಬೆಂಗಳೂರು ನಗರದ ಪೊಲೀಸ್ ಇಲಾಖೆ ಮತ್ತು MCCTNS ಅಭಿವೃದ್ಧಿ ತಂಡವು ಕೈಗೊಳ್ಳುತ್ತಿರುವ ಈ ಸಂಯುಕ್ತ ಪ್ರಯತ್ನವು ಭವಿಷ್ಯದ “ಸ್ಮಾರ್ಟ್ ಪೆಟ್ರೋಲಿಂಗ್”, “ಡಿಜಿಟಲ್ ನಗರ ಭದ್ರತಾ ವ್ಯವಸ್ಥೆ” ಮತ್ತು “ವಿಶ್ಲೇಷಣಾ ತನಿಖೆ” ಯೋಜನೆಗಳಿಗೆ ಭದ್ರ ಅಡಿಪಾಯ ಒದಗಿಸುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.