ನವದೆಹಲಿ: ಭಾನುವಾರ ಬ್ರೆಜಿಲ್‌ನ ಪ್ರವಾಸಿ ನಗರ ಗ್ರಾಮಡೊಗೆ ಎಂಬಲ್ಲಿ ಲಘು ವಿಮಾನವೊಂದು ಪತನಗೊಂಡಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬ್ರೆಜಿಲ್ನ ಸಿವಿಲ್ ಡಿಫೆನ್ಸ್ ಏಜೆನ್ಸಿ ಪ್ರಕಾರ, ವಿಮಾನದಲ್ಲಿದ್ದ ಎಲ್ಲ 10 ಪ್ರಯಾಣಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ವಿಮಾನ ಅಪ್ಪಳಿಸದ ಮನೆ ಅಂಗಡಿಗಳಲ್ಲಿದ್ದ 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ವಿಮಾನವು ಅಪಾರ್ಟ್ಮೆಂಟ್, ಮೊಬೈಲ್ ಅಂಗಡಿಗಳಿಗೆ ವಿಮಾನ ಅಪ್ಪಳಿಸಿದೆ. ಇದಕ್ಕೂ ಮುನ್ನಾ ವಿಮಾನವು ಮನೆಯೊಂದರ ಚಿಮಣಿ, ನಂತರ ಕಟ್ಟಡದ ಎರಡನೇ ಮಹಡಿಗೆ ಅಪ್ಪಳಿಸಿದೆ ಎಂದು ಬ್ರೆಜಿಲಿಯನ್ ಸಿವಿಲ್ ಡಿಫೆನ್ಸ್ ಏಜೆನ್ಸಿ ಎಕ್ಸ್ನಲ್ಲಿ ತಿಳಿಸಿದೆ. ಹೊಗೆ ಕುಡಿದು ಉಸಿರಾಟದ ತೊಂದರೆ ಅನುಭವಿಸುತ್ತಿದ್ದವರು ಮತ್ತು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಅಪಘಾತಕ್ಕೆ ಕಾರಣವೇನು ಎಂಬುದು ಇದುವರೆಗೂ ಸ್ಪಷ್ಟವಾಗಿಲ್ಲ.
ಪ್ರಯಾಣಿಕರು ಒಂದೇ ಕುಟುಂಬದ ಸದಸ್ಯರಾಗಿದ್ದು, ರಿಯೊ ಗ್ರಾಂಡೆ ಡೊ ಸುಲ್ ರಾಜ್ಯದ ಮತ್ತೊಂದು ಪಟ್ಟಣದಿಂದ ಸಾವೊ ಪಾಲೊ ರಾಜ್ಯಕ್ಕೆ ಪ್ರಯಾಣಿಸುತ್ತಿದ್ದರು ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ಗ್ರಾಮಡೊ ಸೆರ್ರಾ ಗೌಚಾ ಪರ್ವತಗಳಲ್ಲಿದೆ. ಇದು ತಂಪಾದ ಹವಾಮಾನ ಹೊಂದಿದ್ದು, ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಇದು ಕ್ರಿಸ್ಮಸ್ ರಜಾದಿನಗಳಿಗೆ ಜನಪ್ರಿಯ ಸ್ಥಳವಾಗಿದೆ.