ಇರುವುದೆಲ್ಲವ ಬಿಟ್ಟು ಕಥೆ ಹೇಳಿ ಗೆದ್ದಿದ್ದ ಕಾಂತ ಕನ್ನಲ್ಲಿ ಈಗ ಮತ್ತೊಂದು ಫ್ರೆಶ್ ಕಂಟೆಂಟ್ ಮೂಲಕ ಪ್ರೇಕ್ಷಕ ಎದುರು ಬರಲು ತಯಾರಿ ನಡೆಸುತ್ತಿದ್ದಾರೆ. ಅದರ ಮೊದಲ ಭಾಗವೆಂಬಂತೆ ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿಂದು ’ಲೈಫ್ Today’ ಮುಹೂರ್ತ ನೆರವೇರಿದೆ. ನಿರ್ದೇಶಕ ಮಹೇಂದರ್ ಕ್ಲ್ಯಾಪ್ ಮಾಡಿ ಶುಭ ಹಾರೈಸಿದ್ರೆ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಟೈಟಲ್ ಹಾಗೂ ಫಸ್ಟ್ ಲುಕ್ ರಿವೀಲ್ ಮಾಡಿ ಚಿತ್ರತಂಡಕ್ಕೆ ಬೆಸ್ಟ್ ವಿಶಸ್ ತಿಳಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಧ್ರುವ ಸರ್ಜಾ ಮಾತನಾಡಿ, ‘ಟೈಟಲ್ ಸಿನಿಮಾ ನೋಡಬೇಕು ಎಂಬ ನಿರೀಕ್ಷೆ ಹುಟ್ಟಿಸುತ್ತದೆ. ನಿರ್ದೇಶಕರು ಅತ್ತಿಯವರ ಇರುವುದೆಲ್ಲವನ್ನು ಬಿಟ್ಟು ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈಗ ಲೈಫ್ Today ಮಾಡ್ತಿದ್ದಾರೆ. ಸಿನಿಮಾದಲ್ಲಿ ಹೊಸಬರು ಇದ್ದಾರೆ. ಹಳೆಬರು ಇದ್ದಾರೆ. ಇಡೀ ತಂಡಕ್ಕೆ ಒಳ್ಳೆದಾಗಲಿ’ ಎಂದರು.
ನಿರ್ದೇಶಕ ಕಾಂತ ಕನ್ನಲ್ಲಿ ಮಾತನಾಡಿ, ಇರುವುದೆಲ್ಲವ ಬಿಟ್ಟು ಸಿನಿಮಾಗೆ ನೀವು ತೋರಿಸಿದ ಪ್ರೀತಿ, ಪ್ರೋತ್ಸಾಹ ಹಾಗೂ ಸಹಕಾರವನ್ನು ಎಂದು ಮರೆಯಲಾಗುವುದಿಲ್ಲ. ಆ ಸಹಕಾರವೇ ನನ್ನ ಇನ್ನೊಂದು ಸಿನಿಮಾ ಮಾಡಲು ವೇದಿಕೆ ಸೃಷ್ಟಿಸಿದೆ. ’ಲೈಫ್ Today’ ಸಿನಿಮಾಗೆ ಬೆಂಬಲ ಕೊಡಲು ಆಗಮಿಸಿರುವ ಧ್ರುವ ಸರ್ಜಾ, ಶ್ರೀಧರ್, ಮಹೇಂದರ್ ಅವರಿಗೆ ಧನ್ಯವಾದ ತಿಳಿಸಿದರು.
ಲೈಫ್ Today’ ಲವ್ ಫ್ಯಾಮಿಲಿ ಕಥಾಹಂದರ ಹೊಂದಿದ್ದು, ಈ ಚಿತ್ರದ ಮೂಲಕ ಕಿರಣ್ ಆನಂದ್ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದು, ಲೇಖಾ ಚಂದ್ರ ನಾಯಕಿಯಾಗಿ ನಟಿಸುತ್ತಿದ್ದಾರೆ. ಜನವರಿ ತಿಂಗಳಾಂತ್ಯಕ್ಕೆ ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ಸಿಗಲಿದ್ದು, ಬೆಂಗಳೂರು ಹಾಗೂ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ’ಲೈಫ್ Today’ ಸಿನಿಮಾಗೆ ಶ್ರೀಧರ್ ವಿ ಸಂಭ್ರಮ ಸಂಗೀತ ನಿರ್ದೇಶನವಿದ್ದು, ಸತೀಶ್ ಕುಮಾರ್ ಕ್ಯಾಮೆರಾ ಹಿಡಿಯಲಿದ್ದಾರೆ. ಮೇಘನಾ ಪ್ರೊಡಕ್ಷನ್ ಮೇಘನಾ ಪ್ರದೀಪ್ ’ಲೈಫ್ Today’ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.