ದೇವರ ವೇಷಭೂಷಣಗಳಿಂದ ಮಂಗಳ ಮುಖಿಯರನ್ನು ವಿಶೇಷವಾಗಿ ಕಾಣುತ್ತಾರೆ ವಿನಹ ಸಹಜವಾಗಲ್ಲ. ಅಲ್ಲಿ ಮತ್ತೆ ಅವರೆಲ್ಲ ವಿಶೇಷ ಎನ್ನುವ ಹೆಸರಲ್ಲಿ ಪ್ರತ್ಯೇಕತೆಗೆ ಒಳಪಡುತ್ತಾರೆಯೇ ವಿನಹ ಮನುಷ್ಯರಂತಲ್ಲ. ನಾವೆಲ್ಲರೂ ಇದರ ಬಗೆಗೆ ಚಿಂತಿಸಬೇಕಾಗಿದೆ ಅವರನ್ನ ದೇವರಾಗಿಸುವ ಬದಲು ಮೊದಲು ಮನುಷ್ಯರಾಗಿಸೋಣ -ಶೃಂಗಶ್ರೀ ಟಿ, ಉಪನ್ಯಾಸಕಿ.
ಮೊನ್ನೆ ನನ್ನ ಗೆಳತಿಯ ಮನೆಯ ಗೃಹಪ್ರವೇಶಕ್ಕೆ ಹೋದಾಗ ಎದುರಾದ ಒಂದು ಸಂಗತಿ ಇದು. ಆ ಊರಿನಲ್ಲಿ ಆ ದಿನ ದೇವಸ್ಥಾನದ ಕಳಸ ಸ್ಥಾಪನಾ ಕಾರ್ಯಕ್ರಮಕ್ಕೆ ತಮಿಳುನಾಡಿನಿಂದ 20 ಜನ ಮಂಗಳಮುಖಿಯರನ್ನ ಆಹ್ವಾನಿಸಿದ್ದರು.
ಕರಗ ಹೊತ್ತು ಸಾಗುವಾಗ ಆ ಮಂಗಳಮುಖಿಯರು ದೇವತೆಗಳ ವೇಷಭೂಷಣಗಳನ್ನು ಧರಿಸಿ ನರ್ತಿಸುವಾಗ ಜನರೆಲ್ಲರೂ ಅವರನ್ನೆಲ್ಲಾ ಸಾಕ್ಷಾತ್ ದೇವರಂತೆ ನೋಡುವ, ಅವರ ಕಾಲುಗಳಿಗೆ ಬಿದ್ದು ನಮಸ್ಕರಿಸುವ, ಅವರಿಗೆ ಫಲತಾಂಬೂಲಗಳನ್ನ ನೀಡಿ ಕಾಸು ಕೊಟ್ಟು ಸತ್ಕರಿಸುವ ಬಗೆ ನನಗೆ ಸರಿ ಅನಿಸಲಿಲ್ಲ. ನಾನು ತಿಳಿದಂತೆ ಈ 20 ಜನ ಮಂಗಳಮುಖಿಯರದ್ದು ಒಂದು ತಂಡ. ಅವರು ತಮಿಳುನಾಡು ಸೇರಿದಂತೆ ಹೀಗೆ ಹಲವಾರು ರಾಜ್ಯಗಳಲ್ಲಿ ಸ್ಥಳಗಳಲ್ಲಿ ಭಕ್ತರ ಕೋರಿಕೆ ಮೇರೆಗೆ ಹೋಗುತ್ತಾರೆ.
ಅದಕ್ಕೆ ಅವರು ಇಂತಿಷ್ಟು ಎಂದು ಹಣವನ್ನು ಪಡೆಯುತ್ತಾರೆ. ಆ ಊರಿನಲ್ಲಿ ನನಗೆ ತೀರಾ ಪರಿಚಯದವರು ಹೇಳಿದಂತೆ 80,000ಗಳನ್ನು ಪಡೆದಿದ್ದಾರೆ ಎಂಬ ಮಾಹಿತಿ ಲಭಿಸಿತು. ಕೆಲವರು ಹೀಗಾದರೂ ಮಂಗಳಮುಖಿಯರು ಬದುಕುವುದಕ್ಕೊಂದು ದಾರಿಯಾಗುತ್ತದೆ ಎಂಬ ಮಾತುಗಳನ್ನ ಆಡಿದರು. ಆದರದು ನನಗೆ ಸರಿ ಅನಿಸಲಿಲ್ಲ ಇಲ್ಲಿ ಜೀವನ ನಡೆಸುವುದಕ್ಕಾಗಿ ದೇವಾನುದೇವತೆಗಳ ವೇಷಧರಿಸಿ ದೇವರ ಗೀತೆಗಳಿಗೆ ನೃತ್ಯ ಮಾಡಿ ಜನರನ್ನು ಸೆಳೆದರೆ ಅವರ ಅಸ್ತಿತ್ವಕ್ಕೆ ಇನ್ನಷ್ಟು ಧಕ್ಕೆ ಆಗುತ್ತದೆಯೇ ವಿನಹ ಅವರಿಗೆ ಸಮಾಜದಲ್ಲಿ ನ್ಯಾಯ, ಮನ್ನಣೆ ಸಿಗುವುದಿಲ್ಲ.
ಸಾಂವಿಧಾನಿಕವಾಗಿ ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೊಡುವ ನಿಟ್ಟಿನಲ್ಲಿ ಇನ್ನೂ ಹೋರಾಟಗಳು ನಡೆಯುತ್ತಲೇ ಇವೆ. ಮಂಗಳಮುಖಿಯರನ್ನ ಮನುಷ್ಯರಂತೆಯೇ ಕಾಣದ ಈ ಜಗದಲ್ಲಿ ಅವರನ್ನು ಮನುಷ್ಯರಂತೆಯೇ, ಸಾಮಾನ್ಯರಂತೆಯೇ ಕಾಣುವುದಕ್ಕಾಗಿ ಎಷ್ಟೊಂದು ಹೋರಾಟಗಳು ನಡೆಯುತ್ತಿವೆ, ನಡೆಯುತ್ತಲೇ ಬಂದಿವೆ.
ಅವರ ಅಸ್ತಿತ್ವಕ್ಕಾಗಿ, ಮೂಲಭೂತ ಸೌಕರ್ಯಗಳಿಗಾಗಿ, ಹಕ್ಕುಗಳಿಗಾಗಿ, ನೆಮ್ಮದಿಯ ಬದುಕಿಗಾಗಿ ಅವರನ್ನು ಸಹಜವಾಗಿ ನೋಡಲು ಎಷ್ಟೊಂದು ಹೋರಾಟಗಳು ನಡೆಯುತ್ತಿರುವಾಗ ಹೀಗೆ ದೇವರುಗಳ ವೇಷ ಧರಿಸಿದಾಕ್ಷಣ ಅವರು ದೇವರಾಗುವರೇ? ಅಥವಾ ಅದರಿಂದ ಅವರಿಗೆ ಹಣ ಸಿಗುತ್ತದೆ ಬಿಟ್ಟರೆ ಜನರು ಅವರನ್ನ ಇನ್ನೂ ವಿಚಿತ್ರವಾಗಿ ವಿಶೇಷವಾಗಿ ನೋಡಲು ಆರಂಭಿಸುವುದಿಲ್ಲವೇ?. ಇನ್ನಷ್ಟೂ ಅವರನ್ನೂ ಅವರ ಅಸ್ತಿತ್ವವನ್ನೂ ಪ್ರತ್ಯೇಕಗೊಳಿಸಿದಂತಾಗದೇ?. ಈಗಾಗಲೇ ಅವರನ್ನು “ಕೋತಿಗಳು” “ಚಕ್ಕಗಳು” “ನಂಬರ್ 9” ಹಿಜ್ಡಾ ಇನ್ನು ಏನೇನೋ ಹೆಸರುಗಳಿಂದ ಕರೆದು ನೋಯಿಸಿ ಅವಮಾನಿಸಿ ಅವರ ಹುಟ್ಟನ್ನ ಅಸ್ತಿತ್ವವನ್ನೇ ಇಲ್ಲದಂತೆ ಮಾಡಿ ಅವರನ್ನೆಲ್ಲ ಅಸಹಜ ಎಂಬಂತೆ ಬಿಂಬಿಸಿ ಪ್ರಾಣಿಗಳಂತೆ ನೋಡುತ್ತಿರುವ ಕಾಲಘಟ್ಟದಲ್ಲಿ ಸಾಂವಿಧಾನಿಕವಾಗಿ ಶಿಕ್ಷಣ ಪಡೆದು ಉದ್ಯೋಗ ಪಡೆದು ಸಮಾಜದಲ್ಲಿ ಗೌರವಯುತವಾಗಿ ಬದುಕುವ ರೀತಿಯನ್ನು ಅಳವಡಿಸಿಕೊಳ್ಳ ಬೇಕಾಗಿರುವ ತುರ್ತು ಬಹಳ ಮುಖ್ಯವಾಗಿದೆ ಮತ್ತು ಅಗತ್ಯ ಕೂಡ.
ಸ್ವಾಭಿಮಾನದಿಂದ ಯಾರ ಕರುಣೆಯನ್ನು ಬಯಸದೆ ಯಾರ ಹೊಗಳಿಕೆಗೂ ತೆಗಳಿಕೆಗೂ ಪಾತ್ರರಾಗದೆ ಎಲ್ಲಾ ಮನುಷ್ಯರಂತೆಯೇ ನಾವು ಮನುಷ್ಯರು ನಮ್ಮನ್ನು ಎಲ್ಲರಂತೆ ನೋಡುವ ನಡೆಸಿಕೊಳ್ಳುವ ನಿಟ್ಟಿನಲ್ಲಿ ನಾವು ನೀವು ಸಾಗಬೇಕಿದೆ. ಈಗಲೂ ಕೂಡ ಮಂಗಳಮುಖಿಯರಿಗೆ ಅವರದೇ ಆದಂತಹ ಶೌಚಾಲಯಗಳ ವ್ಯವಸ್ಥೆ ಇಲ್ಲವೇ ಇಲ್ಲ. ಎಷ್ಟೋ ಅರ್ಜಿಗಳಲ್ಲಿ ಗಂಡು-ಹೆಣ್ಣು ಅಂತಿರುತ್ತವೆ ಬಿಟ್ಟರೆ ಟ್ರಾನ್ಸ್ ಜೆಂಡರ್ ನವರಿಗೆ ಕಾಲಂ ಗಳೇ ಇರುವುದಿಲ್ಲ. ನೀವು ಮತ್ತು ನಾವು ನಿಜವಾಗಿಯೂ ಹೋರಾಡ ಬೇಕಾಗಿರುವುದು ಈ ವಿಷಯಗಳಿಗೆ. ನನ್ನಲ್ಲಂತೂ ನನ್ನ ವಿದ್ಯಾಭ್ಯಾಸದ ವರ್ಷಗಳಲ್ಲಿ ನನ್ನೊಟ್ಟಿಗೆ ಒಬ್ಬ ಮಂಗಳಮುಖಿಯೂ ಓದಿದಂತಹ ಉದಾಹರಣೆಗಳಿಲ್ಲ.
ಹಾಗಾದರೆ ಇಲ್ಲಿ ನಿಜಕ್ಕೂ ಸಮಸ್ಯೆ ಇರುವುದು ಎಲ್ಲಿ? ಇತ್ತೀಚಿನ ದಿನಗಳಲ್ಲಿ ಅಲ್ಲೋ ಇಲ್ಲೋ ಒಂದಷ್ಟು ಟ್ರಾನ್ಸ್ ಜೆಂಡರ್ ಗಳು ಓದುತ್ತಿರುವ, ಅಸಿಸ್ಟೆಂಟ್ ಪ್ರೊಫೆಸರ್ ಗಳಾಗಿರುವ, ಚಂದದ ಬದುಕನ್ನ ಕಟ್ಟಿಕೊಂಡಿರುವ ಉದಾಹರಣೆಗಳು ಬೆಳಕಿಗೆ ಬರುತ್ತಿವೆ. ಆದರೆ ಇದು ವಿರಳಾತಿ ವಿರಳ. ಹಾಗಾದರೆ ಉಳಿದವರ ಕಥೆಗಳೇನು? LGBTQ+ ಕಮ್ಯುನಿಟಿಯವರ ಪರವಾಗಿ ಹೋರಾಟಗಳು ಸಂಘಟನೆಗಳು ಸಂಸ್ಥೆಗಳು ಹುಟ್ಟಿಕೊಂಡು ವಿದ್ಯಾವಂತರು ಬುದ್ಧಿಜೀವಿಗಳು ಅವರಿಗಾಗಿ ಹೋರಾಡಿ LGBTQ+ ಕಮ್ಯುನಿಟಿಯವರನ್ನ ಮುನ್ನೆಲೆಗೆ ತರುವ ಪ್ರಯತ್ನಗಳು ಕೆಲಸಗಳು ನಡೆಯುತ್ತಲೇ ಇವೆ.
19ನೇ ಶತಮಾನದ Oscar Wilde ಇಂದ ಹಿಡಿದು 20ನೇ ಶತಮಾನದಲ್ಲಿ ಎಲ್ ಜಿ ಬಿ ಟಿ ಕ್ಯೂ ಪ್ಲಸ್ ಕಮ್ಯುನಿಟಿ ಅವರ ಹಕ್ಕುಗಳಿಗಾಗಿ ಜರ್ಮನಿಯಲ್ಲಿ Magnus Hirschfeld ಕ್ಯಾಂಪೇನ್‌ಗಳನ್ನ ನಡೆಸಿ ಅವರ ಹಕ್ಕುಗಳಿಗಾಗಿ ಹೋರಾಡಿದ್ದರು.
ಎರಡನೇ ಮಹಾಯುದ್ಧ ಅಂದರೆ 1940 ರಿಂದ 1960ರ ದಶಕಗಳಲ್ಲಿ ದಿ ಮ್ಯಾಟ್ಟಚೈನ್ ಸೊಸೈಟಿ(The Mattachine Society 1950) ಮತ್ತು ಡಾಟರ್ಸ್ ಆಫ್ ಬಿಲ್ಲೆಟಿಸ್ (Daughters of Bilitis 1955)ಎಂಬ ಅಮೆರಿಕಾದ Gay ಮತ್ತು Lesbian ಸಂಘಟನೆಗಳು ಮೊದಲ ಬಾರಿಗೆ ಹುಟ್ಟಿಕೊಂಡವು.
1969ರಲ್ಲಿ LGBTQ+ ಇತಿಹಾಸದಲ್ಲಿ ಒಂದು ಪ್ರಮುಖ ಘಟನೆಯಾದ ನ್ಯೂಯಾರ್ಕ್ ನಗರದ ಸ್ಟೋನ್ ವಾಲ್ ಆಧುನಿಕ ಸಲಿಂಗಕಾಮಿಗಳ ಚಳುವಳಿಯನ್ನ ಹುಟ್ಟು ಹಾಕಲಾಯಿತು. Michel Foucault, Judith Butler, Eve Kosofsky Sedgwick ಮುಂತಾದ ಪ್ರಮುಖರು ತಮ್ಮ ಬರವಣಿಗೆಗಳಲ್ಲಿ LGBTQ+ ಕಮ್ಯುನಿಟಿಗಳ ಬಗ್ಗೆ ಬರೆಯುವ ಮೂಲಕ ಹೋರಾಟಕ್ಕೆ ನಾಂದಿ ಹಾಡಿದರು.
1970 ಮತ್ತು 1980 ರಿಂದ LGBTQ+ ಕಮ್ಯುನಿಟಿಯ ಬಗ್ಗೆ ಶೈಕ್ಷಣಿಕ ವಿಭಾಗಗಳಲ್ಲಿ ಕೂಡ ಮಹತ್ವವನ್ನು ನೀಡಿ “Queer” ಎಂಬ ಸಿದ್ಧಾಂತದ ಹೆಸರಲ್ಲಿ ಇವತ್ತು ಅವರ ಪರವಾಗಿ ಹೋರಾಟಗಳು, ಶೈಕ್ಷಣಿಕ ಚಟುವಟಿಕೆಗಳು, ಕಾರ್ಯಕ್ರಮಗಳು, ಚಿಂತನೆಗಳು ನಡೆಯುತ್ತಲೇ ಬಂದಿವೆ. ಹೀಗಿರುವಾಗ LGBTQ+ ಕಮ್ಯುನಿಟಿ ಅವರು ಕೂಡ ಮುನ್ನೆಲೆಗೆ ಬಂದು ತಮ್ಮ ಹಕ್ಕುಗಳನ್ನು ಪಡೆದು ಶಿಕ್ಷಣವನ್ನ ಪಡೆದು ಸಾಂವಿಧಾನಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಎಲ್ಲರಂತೆಯೇ ಸಮಾನರಾಗಿ ಗೌರವಯುತವಾದ ಬದುಕನ್ನ ಕಟ್ಟಿಕೊಳ್ಳಬೇಕಾಗಿದೆ.
ದೇವರ ವೇಷಭೂಷಣಗಳಿಂದ ಅವರನ್ನ ವಿಶೇಷವಾಗಿ ಕಾಣುತ್ತಾರೆ ವಿನಹ ಸಹಜವಾಗಲ್ಲ. ಅಲ್ಲಿ ಮತ್ತೆ ಅವರೆಲ್ಲ ವಿಶೇಷ ಎನ್ನುವ ಹೆಸರಲ್ಲಿ ಪ್ರತ್ಯೇಕತೆಗೆ ಒಳಪಡುತ್ತಾರೆಯೇ ವಿನಹ ಮನುಷ್ಯರಂತಲ್ಲ. ನಾವೆಲ್ಲರೂ ಇದರ ಬಗೆಗೆ ಚಿಂತಿಸಬೇಕಾಗಿದೆ ಅವರನ್ನ ದೇವರಾಗಿಸುವ ಬದಲು ಮೊದಲು ಮನುಷ್ಯರಾಗಿಸೋಣ.
ಶೃಂಗಶ್ರೀ ಟಿ
ಅತಿಥಿ ಉಪನ್ಯಾಸಕಿ, ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ.
ಇದನ್ನೂ ಓದಿ- ನವ ಮಾಧ್ಯಮ ಜಗತ್ತಿನ ಉತ್ಪ್ರೇಕ್ಷೆಗಳು